ಸಕಾರಾತ್ಮಕ ನೋಟ: ಭಾರತದಲ್ಲಿ ಹಿಂಸಾಚಾರ ಘಟನೆ ನಿರಂತರ ಕುಸಿತ

Riot
Published on

ಭಾರತದಲ್ಲಿ ಹಿಂಸಾಚಾರ ಘಟನೆಗಳು ನಿರಂತರವಾಗಿ ಕಡಿಮೆಯಾಗುತ್ತಿದ್ದು, ಕಳೆದ 50 ವರ್ಷಗಳಲ್ಲಿ ದೇಶವು ಶಾಂತಿಯತ್ತ ಹೆಜ್ಜೆ ಹಾಕಿದೆ. ಭಾರತೀಯರು ಹೆಮ್ಮೆಪಡಬಹುದಾದ ಈ ಸಂಗತಿಯು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್​ಸಿಆರ್​ಬಿ) ದತ್ತಾಂಶ ವಿಶ್ಲೇಷಣೆಯಲ್ಲಿ ಹೊರಹೊಮ್ಮಿದೆ. ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಸಮಿತಿಯ ಸದಸ್ಯರಾದ ಪೊ›. ಶಮಿಕಾ ರವಿ ಅವರು ಎನ್​ಸಿಆರ್​ಬಿ ದತ್ತಾಂಶಗಳನ್ನು ಆಧರಿಸಿದ ವಿಶ್ಲೇಷಣಾ ಮಾಹಿತಿಯನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಭಾರತದಲ್ಲಿ ಗಲಭೆಗಳು ಸ್ಥಿರವಾಗಿ ಇಳಿಮುಖವಾಗಿದ್ದು, ದೇಶವು 50 ವರ್ಷಗಳಲ್ಲಿ ಶಾಂತಿಯುತವಾಗಿದೆ. 1998ರಿಂದ ಭಾರತದಲ್ಲಿ ತ್ವರಿತಗತಿಯಲ್ಲಿ ಗಲಭೆ ಮತ್ತು ಉದ್ವಿಗ್ನ ಪರಿಸ್ಥಿತಿಗಳಲ್ಲಿ ಇಳಿಮುಖವಾಗಿದೆ ಎಂದು ದತ್ತಾಂಶಗಳು ಸೂಚಿಸುತ್ತವೆ ಎಂದೂ ಅವರು ಹೇಳಿದ್ದಾರೆ. ಎನ್​ಸಿಆರ್​ಬಿ ನೇರವಾಗಿ ಈ ದತ್ತಾಂಶಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಿರದಿದ್ದರೂ ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಸಮಿತಿಯಲ್ಲಿ ಇರುವವರೇ ವಿಶ್ಲೇಷಿಸಿರುವುದರಿಂದ ಈ ಮಾಹಿತಿಗೆ ಸಹಜವಾಗಿ ಗಾಂಭೀರ್ಯ ಪ್ರಾಪ್ತವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ಗಲಭೆಗಳ ಪ್ರಮಾಣ ಗಣನೀಯವಾಗಿ ಕುಸಿದಿದೆ ಎಂದು ಶಮಿಕಾ ಹೇಳಿದ್ದರೂ ಇದನ್ನು ನೇರವಾಗಿ ಪುಷ್ಟೀಕರಿಸುವ ಅಂಕಿ-ಅಂಶಗಳನ್ನು ಒದಗಿಸಿಲ್ಲ. ಸಂವಿಧಾನದ ಏಳನೇ ಪರಿಚ್ಛೇದದ ಪ್ರಕಾರ ಕಾನೂನು ಮತ್ತು ವ್ಯವಸ್ಥೆಯು ರಾಜ್ಯಪಟ್ಟಿಯಲ್ಲಿದ್ದು, ಇದನ್ನು ನಿಭಾಯಿಸುವ ಪೊಲೀಸ್ ಇಲಾಖೆಯು ರಾಜ್ಯ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಹೀಗಾಗಿ, ಬೇರೆ ಬೇರೆ ರಾಜ್ಯಗಳಿಗೆ ಪ್ರತ್ಯೇಕ ಪೊಲೀಸ್ ಇಲಾಖೆಗಳಿರುತ್ತದೆ. ಆದರೆ, ಅಪರಾಧಗಳಿಗೆ ರಾಜ್ಯದ ಯಾವುದೇ ಗಡಿ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಟಂಡನ್ ಸಮಿತಿ, ರಾಷ್ಟ್ರೀಯ ಪೊಲೀಸ್ ಆಯೋಗ ಮತ್ತು ಗೃಹ ವ್ಯವಹಾರಗಳ ಸಚಿವಾಲಯದ ಕಾರ್ಯಪಡೆ ಶಿಫಾರಸು ಪರಿಗಣಿಸಿ, ತನಿಖಾಧಿಕಾರಿಗಳಿಗೆ ನೆರವಾಗುವುದಕ್ಕಾಗಿ ಅಪರಾಧ ಮತ್ತು ಅಪರಾಧಿಗಳ ಮಾಹಿತಿಯ ಭಂಡಾರವಾಗಿ ಕಾರ್ಯನಿರ್ವಹಿಸಲು ಕೇಂದ್ರ ಗೃಹ ಸಚಿವಾಲಯದಡಿಯಲ್ಲಿ ಎನ್​ಸಿಆರ್​ಬಿಯನ್ನು 1986ರಲ್ಲಿ ಸ್ಥಾಪಿಸಲಾಗಿದೆ. ನಂತರ 2009ರಲ್ಲಿ ಅಪರಾಧ ಮತ್ತು ಅಪರಾಧಿ ಪತ್ತೆ ಟ್ರಾ್ಯಕಿಂಗ್ ನೆಟ್​ವರ್ಕ್ ಮತ್ತು ಸಿಸ್ಟಮ್ಸ್ (ಸಿಸಿಟಿಎನ್​ಎಸ್) ಯೋಜನೆಯ ಮೇಲ್ವಿಚಾರಣೆ, ಸಮನ್ವಯ ಮತ್ತು ಅನುಷ್ಠಾನದ ಜವಾಬ್ದಾರಿಯನ್ನು ಎನ್​ಸಿಆರ್​ಬಿಗೆ ವಹಿಸಲಾಗಿದೆ. ಈ ಯೋಜನೆಯು ದೇಶದಲ್ಲಿರುವ 15,000ಕ್ಕೂ ಅಧಿಕ ಪೊಲೀಸ್ ಠಾಣೆಗಳು ಮತ್ತು 6,000 ಉನ್ನತ ಪೊಲೀಸ್ ಕಚೇರಿಗಳನ್ನು ಸಂರ್ಪಸುತ್ತದೆ. ಹೀಗಾಗಿ, ದೇಶಾದ್ಯಂತ ಗಲಭೆ, ಹಿಂಸಾಚಾರ ಸೇರಿದಂತೆ ಅಪರಾಧ ಪ್ರಕರಣಗಳ ಮಾಹಿತಿ ಎನ್​ಸಿಆರ್​ಬಿಗೆ ಇರುತ್ತದೆ.

ಪೊ›. ಶಮಿಕಾ ರವಿ ಅವರು ಏನೇ ವಿಶ್ಲೇಷಣೆ ನೀಡಿದ್ದರೂ ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಗಲಭೆ, ಹಿಂಸಾಚಾರಗಳು ನಡೆದೇ ಇಲ್ಲ ಎಂದು ಹೇಳಲಾಗದು. 2013 ರಲ್ಲಿ ಉತ್ತರ ಪ್ರದೇಶದ ಮುಜಫರ್​ನಗರ ಗಲಭೆಗಳು, 2020ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಗಲಭೆಗಳು ಇಲ್ಲಿ ಉಲ್ಲೇಖಾರ್ಹ. ಇನ್ನು ಕೆಲವು ದಿನಗಳಿಂದ ದೇಶದ ಈಶಾನ್ಯ ಭಾಗದಲ್ಲಿ ಹಿಂಸಾಚಾರ ಭುಗಿಲೆದ್ದಿರುವುದನ್ನು ಅಲ್ಲಗಳೆಯಲಾಗದು. ಮೈತೆಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವುದನ್ನು ವಿರೋಧಿಸಿ ಮಣಿಪುರದಲ್ಲಿ ಉದ್ಭವಿಸಿರುವ ಜನಾಂಗೀಯ ಹಿಂಸಾಚಾರದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಸಾವನ್ನಪ್ಪಿದ್ದು, ಸಹಸ್ರಾರು ಮಂದಿ ಗಾಯಗೊಂಡಿದ್ದಾರೆ. ಇದೇನೇ ಇದ್ದರೂ, ಈ ವಿಶ್ಲೇಷಣೆಯು ಸಕಾರಾತ್ಮಕ ಚಿತ್ರಣ ನೀಡಿರುವುದು ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ಗಮನಾರ್ಹವಾದುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net