ಉಯ್ಘರ್​ಗಳ ಮೇಲೆ ನಿಲ್ಲದ ಕ್ರೌರ್ಯ; ದಾಖಲೆಗಳು ಸಾಬೀತು ಮಾಡುತ್ತಿವೆ ಚೀನಾದ ದೌರ್ಜನ್ಯ

sdfsdfsdg
Published on

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಉಯ್ಘರ್​ಗಳ ಧಾರ್ವಿುಕ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ. ಸಾವಿರಾರು ಜನರನ್ನು ಅಕ್ರಮವಾಗಿ ಬಂಧನದಲ್ಲಿರಿಸಿ ದೌರ್ಜನ್ಯ ಎಸಗಲಾಗುತ್ತಿದೆ. ನರಮೇಧವನ್ನೂ ನಡೆಸಲಾಗುತ್ತಿದೆ ಎಂಬ ಆಪಾದನೆಗಳು ಕಮ್ಯುನಿಸ್ಟ್ ಚೀನಾ ಸರ್ಕಾರದ ವಿರುದ್ಧ ಮೊದಲಿನಿಂದಲೂ ಕೇಳಿಬರುತ್ತಿವೆ. ಇತ್ತೀಚೆಗೆ ಲಭ್ಯವಾಗಿರುವ ಅಪಾರ ಪ್ರಮಾಣದ ಪೊಲೀಸ್ ದಾಖಲೆಗಳು ಇಂತಹ ಆಪಾದನೆಗಳಿಗೆ ಪುಷ್ಟಿ ನೀಡುವಂತಿವೆ.

ಚೀನಾ ಪ್ರಾಂತ್ಯವಾದ ಕ್ಸಿನ್​ಜಿಯಾಂಗ್​ನ ‘ತರಬೇತಿ ಶಿಬಿರಗಳು’ ಆ ರಾಷ್ಟ್ರದ ರಹಸ್ಯ ಕಾರ್ಯಸೂಚಿಗಳಲ್ಲಿ ಸೇರಿವೆ. ಹತ್ತು ಲಕ್ಷಕ್ಕಿಂತಲೂ ಹೆಚ್ಚು ಉಯ್ಘರ್ ಮತ್ತು ಇತರ ಜನಾಂಗೀಯ/ಧಾರ್ವಿುಕ ಅಲ್ಪಸಂಖ್ಯಾತರನ್ನು ಈ ಕೇಂದ್ರಗಳಲ್ಲಿ ಬಲವಂತವಾಗಿ ಬಂಧಿಸಲಾಗಿದೆ. ಅಲ್ಲದೆ, ಅವರ ಹಕ್ಕುಗಳನ್ನು ನಿರ್ಲಕ್ಷಿಸಿ ಕೆಟ್ಟ ರೀತಿಯಲ್ಲಿ ದೌರ್ಜನ್ಯ ನಡೆಸಲಾಗುತ್ತಿದೆ ಎಂಬ ಆರೋಪ ಹಿಂದಿನಿಂದಲೂ ಕೇಳಿಬರುತ್ತಲೇ ಇದೆ. ಆದರೆ, ಚೀನಾ ಈ ಎಲ್ಲ ಆರೋಪಗಳನ್ನು ನಿರಾಕರಿಸುತ್ತಲೇ ಬಂದಿದೆ.

‘ಈ ಶಿಬಿರಗಳು ವೃತ್ತಿ ತರಬೇತಿ ಶಾಲೆಗಳಾಗಿದ್ದು, ಸ್ವಯಂಪ್ರೇರಣೆಯಿಂದ ಇಲ್ಲಿ ಜನರು ದಾಖಲಾಗುತ್ತಾರೆ. ಆರ್ಥಿಕವಾಗಿ ಸ್ಥಳೀಯರನ್ನು ಸುಧಾರಿಸುವುದು ಈ ಶಾಲೆಗಳ ಉದ್ದೇಶವಾಗಿದೆ’ ಎಂದು ಚೀನಾ ಪ್ರತಿಪಾದಿಸಿಕೊಂಡು ಬಂದಿದೆ. ಆದರೆ, ಈ ಪ್ರದೇಶದಲ್ಲಿನ ಪೊಲೀಸ್ ಸರ್ವರ್​ಗಳಿಂದ ಹ್ಯಾಕ್ ಮಾಡಲಾದ ಮತ್ತು ಹಲವಾರು ಮಾಧ್ಯಮಗಳಿಗೆ ದೊರೆತಿರುವ ದಾಖಲೆಗಳು ಚೀನಾದ ಈ ವಾದವನ್ನು ಬುಡಸಮೇತ ಅಲುಗಾಡಿಸಿದ್ದು, ಇದುವರೆಗೂ ಅದು ಹೇಳಿಕೊಂಡು ಬಂದಿರುವುದನ್ನು ಸುಳ್ಳೆಂದು ಸಾಬೀತುಪಡಿಸುವಂತಿವೆ. ಚೀನಾದ ಆಂತರಿಕ ಸರ್ಕಾರಿ ದಾಖಲೆಗಳ ಕುರಿತ ಅಂತಾರಾಷ್ಟ್ರೀಯ ತಜ್ಞ ಅಡ್ರಿಯನ್ ಝೆಂಜ್ ಅವರಿಗೆ ಅನಾಮಧೇಯ ಮೂಲಗಳಿಂದ ಈ ದಾಖಲೆಗಳು ಲಭ್ಯವಾಗಿವೆ. ಝೆಂಜ್ ಅವರು ‘ಕಮ್ಯುನಿಸ್ಟ್ ವಾದದ ಬಲಿಪಶುಗಳ ಸ್ಮಾರಕ ಪ್ರತಿಷ್ಠಾನ’ ಎಂಬ ಅಮೆರಿಕ ಮೂಲದ ಸಂಸ್ಥೆಯೊಂದಕ್ಕೆ ಕೆಲಸ ಮಾಡುತ್ತಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥ ಮಿಚೆಲ್ ಬ್ಯಾಚ್​ಲೆಟ್ ಅವರು ಕ್ಸಿನ್​ಜಿಯಾಂಗ್​ಗೆ ಬಹುನಿರೀಕ್ಷಿತ ಹಾಗೂ ವಿವಾದಾತ್ಮಕ ಭೇಟಿ ನೀಡುತ್ತಿರುವ ಸಂದರ್ಭದಲ್ಲೇ ಈ ಪೊಲೀಸ್ ಫೈಲ್ ದಾಖಲೆಗಳು ಸೋರಿಕೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸೋರಿಕೆಯಾದ ಫೈಲ್​ಗಳಲ್ಲಿ ಏನಿದೆ?

2018ರ ಜನವರಿಯಿಂದ ಜುಲೈ ನಡುವಿನ ಅವಧಿಯಲ್ಲಿ ಉಯ್ಘರ್​ಗಳಿಗೆ ಸಂಬಂಧಿಸಿದ 5 ಸಾವಿರಕ್ಕೂ ಅಧಿಕ ಪೊಲೀಸ್ ಛಾಯಾಚಿತ್ರಗಳನ್ನು ಈ ದಾಖಲೆಗಳು ಒಳಗೊಂಡಿವೆ. ಇದರಲ್ಲಿ ಕನಿಷ್ಠ 2,800 ಮಂದಿ ಖಚಿತವಾಗಿ ಬಂಧನಕ್ಕೆ ಒಳಗಾದವರಿದ್ದಾರೆ ಎಂದು ಈ ದಾಖಲೆಗಳು ಸೂಚಿಸುತ್ತವೆ. ಹಿರಿಯ ಅಧಿಕಾರಿಗಳ ವರ್ಗೀಕೃತ ರಹಸ್ಯ ಭಾಷಣಗಳು, ಆಂತರಿಕ ಪೊಲೀಸ್ ಕೈಪಿಡಿಗಳು, 20 ಸಾವಿರಕ್ಕೂ ಹೆಚ್ಚು ಉಯ್ಘರ್​ಗಳ ಬಂಧನದ ವಿವರಗಳು ಮತ್ತು ಅತ್ಯಂತ ಸೂಕ್ಷ್ಮಸ್ಥಳಗಳ ಫೋಟೋಗಳನ್ನು ಸಹ ಈ ದಾಖಲೆಗಳು ಒಳಗೊಂಡಿವೆ. ಅನೇಕ ಸುದ್ದಿಸಂಸ್ಥೆಗಳಿಂದ ಪರಿಶೀಲಿಸಲ್ಪಟ್ಟಿರುವ ಈ ಫೈಲ್​ಗಳು, ಕಾರಾಗೃಹದ ದುಸ್ಥಿತಿ, ದೌರ್ಜನ್ಯದ ಮೇಲೂ ಬೆಳಕು ಚೆಲ್ಲುತ್ತವೆ. ಮುಸುಕುಧಾರಿಯಾಗಿರುವ ಮತ್ತು ಸಂಕೋಲೆಯಿಂದ ಬಂಧಿತರಾಗಿರುವ ಕೈದಿಗಳನ್ನು ಅಧಿಕಾರಿಗಳು ಲಾಠಿಗಳಿಂದ ನಿಗ್ರಹಿಸುತ್ತಿರುವುದನ್ನು ಈ ಛಾಯಾಚಿತ್ರಗಳು ತೋರಿಸುತ್ತವೆ. ಇದರಲ್ಲಿ, ಇತರ ಸಿಬ್ಬಂದಿಯು ಮುಖ ಮರೆಯಾಗುವಂತೆ ಬಂದೂಕುಧಾರಿಗಳು ನಿಂತಿದ್ದಾರೆ. ಬಂಧನ ಶಿಬಿರಗಳಲ್ಲಿನ ಈ ಜನರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗಾಯಿಸುವಾಗ, ಅದರಲ್ಲೂ ಆಸ್ಪತ್ರೆಗೆ ಸಾಗಿಸುವಾಗಲೂ ಕಣ್ಣಿಗೆ ಕಟ್ಟಿ, ಕೈಕೋಳ ತೊಡಿಸಿರುವುದನ್ನು ಸೋರಿಕೆಯಾದ ದಾಖಲೆಗಳು ಬಹಿರಂಗಪಡಿಸುತ್ತವೆ. ಕ್ಸಿನ್​ಜಿಯಾಂಗ್ ಶಿಬಿರಗಳಲ್ಲಿ ಬಂಧಿತರಾದವರಲ್ಲಿ ಅಪ್ರಾಪ್ತ ವಯಸ್ಕರೂ ಇದ್ದಾರೆ. ಇಲ್ಲಿ 15ರಿಂದ 73 ವಯಸ್ಸಿನವರು ಬಂಧಿತರಾಗಿದ್ದಾರೆ.

ಚೀನಾದ ವಾಯವ್ಯ ಪ್ರಾಂತ್ಯವಾದ ಕ್ಸಿನ್​ಜಿಯಾಂಗ್​ನಲ್ಲಿ ಉಯ್ಘರ್​ಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಇವರು ಇಸ್ಲಾಂ ಧರ್ಮ ಅನುಸರಿಸುತ್ತಾರೆ. ಕ್ಸಿನ್​ಜಿಯಾಂಗ್ ಪ್ರಾಂತ್ಯವು ಮಂಗೋಲಿಯಾ, ರಷ್ಯಾ, ಕಜಕಿಸ್ತಾನ, ರ್ಕಿಗಿಸ್ತಾನ, ತಜಕಿಸ್ತಾನ, ಅಪ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಭಾರತ- ಈ ಎಂಟು ದೇಶಗಳಿಂದ ಸುತ್ತುವರಿದ ಆಯಕಟ್ಟಿನ ಪ್ರದೇಶವಾಗಿದೆ. ಸೋವಿಯತ್ ದೇಶವು ಒಡೆದ ನಂತರ, ಈ ಪ್ರಾಂತ್ಯದ ಸುತ್ತಮುತ್ತಲಲ್ಲೇ ಅನೇಕ ಮುಸ್ಲಿಂ ರಾಷ್ಟ್ರಗಳು ಅಸ್ತಿತ್ವಕ್ಕೆ ಬಂದವು. ಆಗ, ಈ ಪ್ರಾಂತ್ಯದಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಬೆಂಬಲ ಅಧಿಕವಾಯಿತು ಎನ್ನಲಾಗಿದೆ. ಇಂತಹ ಚಟುವಟಿಕೆಗಳನ್ನು ಹತ್ತಿಕ್ಕುವುದಕ್ಕಾಗಿ ಚೀನಾ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತ, ಉಯ್ಘರ್​ಗಳ ಮೇಲೆ ದೌರ್ಜನ್ಯ ಎಸಗುತ್ತಿದೆ; ಅವರ ಧಾರ್ವಿುಕ ಸ್ವಾತಂತ್ರ್ಯಕ್ಕೂ ಅಡಚಣೆ ಉಂಟು ಮಾಡುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಲೇ ಇವೆ.

ವಿಚಾರಣೆ ಸಮಯದಲ್ಲಿ ಅತ್ಯಾಚಾರ:

ಶಿಬಿರಗಳಲ್ಲಿ ತೀವ್ರ ತೆರನಾದ ದೈಹಿಕ ಹಾಗೂ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿದೆ ಎಂಬ ಭಯಾನಕ ಸಂಗತಿಗಳನ್ನು ಈ ಶಿಬಿರಗಳಿಂದ ತಪ್ಪಿಸಿಕೊಂಡವರು ಬಹಿರಂಗಪಡಿಸಿದ್ದಾರೆ. ಚೀನಾದ ಅಧಿಕಾರಿಗಳು ವಿಚಾರಣೆ ಸಮಯದಲ್ಲಿ ತಮ್ಮ ಮೇಲೆ ಅತ್ಯಾಚಾರ ಮಾಡಿದ್ದಾರೆ ಹಾಗೂ ಇತರರ ಮೇಲೆ ಅತ್ಯಾಚಾರ ಎಸಗಿದ್ದನ್ನು ನೋಡಿದ್ದೇನೆ ಎಂದು ಕೆಲವು ಉಯ್ಘರ್ ಮಹಿಳೆಯರು ಹೇಳಿದ್ದಾರೆ.

‘ನಾಲ್ಕು ವಿಭಿನ್ನ ಸಂದರ್ಭಗಳಲ್ಲಿ, ನನ್ನನ್ನು ವಿಚಾರಣಾ ಕೊಠಡಿಗೆ ಕರೆದೊಯ್ಯಲಾಯಿತು, ಅಲ್ಲಿ ನನ್ನನ್ನು ಥಳಿಸಲಾಯಿತು. ನನ್ನ ಖಾಸಗಿ ಭಾಗಕ್ಕೆ ವಿದ್ಯುತ್ ಲಾಠಿಯಿಂದ ವಿದ್ಯುತ್ ಶಾಕ್ ನೀಡಲಾಯಿತು. ಅಲ್ಲದೆ, ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಯಿತು’ ಎಂದು 2018ರಲ್ಲಿ ಉತ್ತರ ಕ್ಸಿನ್​ಜಿಯಾಂಗ್​ನ ಕುನೆಸ್ ಕೌಂಟಿಯ ಶಿಬಿರವೊಂದರಿಂದ ಬದುಕುಳಿದು ಬಂದ 42 ವರ್ಷದ ಉಯ್ಘರ್ ಮಹಿಳೆಯೊಬ್ಬರು ನೋವು ತೋಡಿಕೊಂಡಿದ್ದಾರೆ. ಆದರೆ, ಚೀನಾದ ವಿದೇಶಾಂಗ ಸಚಿವಾಲಯ ಈ ಆರೋಪಗಳಿಗೆ ಆಧಾರಗಳಿಲ್ಲ ಎಂದು ಹೇಳಿದೆ. ಕ್ಸಿನ್​ಜಿಯಾಂಗ್​ನ ಅಲ್ಪಸಂಖ್ಯಾತ ಜನಸಮುದಾಯವನ್ನು ತನ್ನ ದೇಶದ ಭದ್ರತೆಗೆ ಬೆದರಿಕೆ ಎಂಬಂತೆ ಚೀನಾ ಹೇಗೆ ನೋಡುತ್ತಿದೆ ಎಂಬ ಒಳನೋಟವನ್ನು ಈ ಸೋರಿಕೆಯಾದ ದಾಖಲೆಗಳು ಸೂಚಿಸುತ್ತವೆ.

ದಕ್ಷಿಣ ಕ್ಸಿನ್​ಜಿಯಾಂಗ್​ನಲ್ಲಿಯೇ 20 ಲಕ್ಷಕ್ಕೂ ಹೆಚ್ಚು ಜನರು ಉಗ್ರವಾದಿ ಧಾರ್ವಿುಕ ಚಿಂತನೆಯ ಒಳನುಸುಳುವಿಕೆಯಿಂದ ತೀವ್ರವಾಗಿ ಪ್ರಭಾವಿತರಾಗಿದ್ದಾರೆ ಎಂದು ಚೀನಾದ ಸಚಿವರು ಎಚ್ಚರಿಸಿದ್ದಾರೆ. ಈ ದಾಖಲೆಗಳು ಕ್ಸಿನ್​ಜಿಯಾಂಗ್​ನಲ್ಲಿನ ಮಾಜಿ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿಯೊಬ್ಬರು 2017ರಲ್ಲಿ ಮಾಡಿದ ಭಾಷಣವನ್ನು ಒಳಗೊಂಡಿದೆ. ತಪ್ಪಿಸಿಕೊಳ್ಳಲು ಪ್ರಯತ್ನಿಸುವವರನ್ನು ಕೊಲ್ಲಲು ಗುಂಡು ಹಾರಿಸುವಂತೆ ಕಾವಲುಗಾರರಿಗೆ ಅವರು ಆದೇಶಿಸುತ್ತಾರೆ. ಅಲ್ಲದೆ, ಧಾರ್ವಿುಕ ನಂಬಿಕೆಯುಳ್ಳವರ ಮೇಲೆ ಪೂರ್ಣ ನಿಯಂತ್ರಣ ಇಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ಅಕ್ರಮವಾದ ಭಾಷಣವೊಂದನ್ನು ಕೇಳಿದ್ದಕ್ಕಾಗಿ ಬಂಧಿತರಾದವರಲ್ಲಿ 17 ಮತ್ತು 6 ವರ್ಷದ ಇಬ್ಬರು ಬಾಲಕರು ಸೇರಿದ್ದಾರೆ. ಇನ್ನು ಕೆಲವರನ್ನು ಇಸ್ಲಾಂ ಧರ್ಮವನ್ನು ಅಭ್ಯಾಸ ಮಾಡುವ ಅಥವಾ ಮುಸ್ಲಿಂ ಬಹುಸಂಖ್ಯಾತ ದೇಶಕ್ಕೆ ಭೇಟಿ ನೀಡಿದ ಕಾರಣಕ್ಕಾಗಿ ಬಂಧಿಸಲಾಗಿದೆ.

2010ರಲ್ಲಿ ಕೆಲವು ದಿನಗಳ ಕಾಲ ತನ್ನ ಅಜ್ಜಿಯೊಂದಿಗೆ ಇಸ್ಲಾಮಿಕ್ ಧರ್ಮಗ್ರಂಥಗಳನ್ನು ಅಧ್ಯಯನ ಮಾಡಿದ ಕಾರಣಕ್ಕಾಗಿ 2017ರಲ್ಲಿ ಒಬ್ಬ ವ್ಯಕ್ತಿಗೆ 10 ವರ್ಷಗಳ ಕಾಲ ಜೈಲು ಶಿಕ್ಷೆಯಾಗಿದೆ. ಈ ರೀತಿ ದಶಕಗಳ ಹಿಂದೆ ಶಿಕ್ಷೆಗೆ ಒಳಗಾದ ಹಲವಾರು ನಿದರ್ಶನಗಳನ್ನು ದಾಖಲೆಗಳು ಬಹಿರಂಗಪಡಿಸುತ್ತವೆ. ಅಂದಾಜು 16,000 ಮಸೀದಿಗಳನ್ನು (ಒಟ್ಟು ಮಸೀದಿಗಳ ಎರಡನೇ ಮೂರು ಭಾಗದಷ್ಟು) - 2017ರಿಂದ ಹೆಚ್ಚಾಗಿ ಜಾರಿಗೆ ತಂದ ಸರ್ಕಾರಿ ನೀತಿಗಳ ಮೂಲಕ ನಾಶಪಡಿಸಲಾಗಿದೆ. ಕ್ಸಿನ್​ಜಿಯಾಂಗ್​ನಲ್ಲಿ ಜಾರಿಗೆ ತಂದ ನೀತಿಗಳಿಗೆ ಚೀನಾದ ಉನ್ನತ ನಾಯಕತ್ವದ ಅನುಮೋದನೆ ಇದೆ ಎಂಬುದು ಕೂಡ ದಾಖಲೆಗಳಲ್ಲಿ ಕಂಡುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net