ಹೊತ್ತಿ ಉರಿದ ಅಗರಬತ್ತಿ ಕಾರ್ಖಾನೆ: ಒರ್ವನಿಗೆ ಗಾಯ, 6 ವಾಹನ ಬೆಂಕಿಗೆ ಆಹುತಿ

fire
Published on

ಬೆಂಗಳೂರು: ಅಗರಬತ್ತಿ ಕಾರ್ಖಾನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಕೆಮಿಕಲ್ ಕ್ಯಾನ್‌ಗಳು ಸಿಡಿದು ಕೆಮಿಕಲ್ ರಸ್ತೆಗೆ ಹರಿದುಬಂದು ಬೆಂಕಿ ಹೊತ್ತಿಕೊಂಡಿದ್ದರಿಂದ ಒರ್ವನಿಗೆ ಸುಟ್ಟ ಗಾಯವಾಗಿದ್ದು, ಆಟೋ ಸೇರಿ ಆರು ದ್ವಿಚಕ್ರವಾಹನಗಳು ಬೆಂಕಿ ಆಹುತಿಯಾಗಿರುವ ಪ್ರಕರಣ ಚೋಳರಪಾಳ್ಯದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.


ಚೋಳರಪಾಳ್ಯದ ಪೈಪ್‌ಲೈನ್ ರಸ್ತೆ, ೭ ನೇ ಕ್ರಾಸ್‌ನಲ್ಲಿ ಅಗರಬತ್ತಿ ಕಾರ್ಖಾನೆ ಇದ್ದು, ಬೆಳಗ್ಗೆ ೧೦ ಗಂಟೆಯ ಸುಮಾರಿಗೆ ಕಾರ್ಖಾನೆಯಲ್ಲಿ ಶಾರ್ಟ್‌ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಕಾರ್ಖಾನೆಯಲ್ಲಿದ್ದ ಮಾಲೀಕನ ಮಗ ಮತ್ತು ಇತರರು ತಕ್ಷಣ ಹೊರಗಡೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾನೆ. ಆರಂಭದಲ್ಲಿ ಸ್ಥಳೀಯರು ಬೆಂಕಿ ಆರಿಸಲು ಪ್ರಯತ್ನಿಸಿದ್ದಾರೆ. ಬಳಿಕ ಬೆಂಕಿ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿ ಕಾರ್ಖಾನೆಯ ಕ್ಯಾನ್‌ಗಳಲ್ಲಿದ್ದ ಕೆಮಿಕಲ್ ಕರಗಿ ರಸ್ತೆಗೆ ಹರಿದುಕೊಂಡು ಬಂದಿದ್ದು ಕಾರ್ಖಾನೆ ಹೊರಗಡೆ ನಿಲ್ಲಿಸಲಾಗಿದ್ದ ಆಟೋ ಸೇರಿ ೬ ಆರು ದ್ವಿಚಕ್ರ ವಾಹನಗಳಿಗೆ ಬೆಂಕಿ ತಾಗಿ ಹೊತ್ತಿಕೊಂಡು ಸುಟ್ಟು ಹೋಗಿವೆ. ತಮ್ಮ ದ್ವಿಚಕ್ರ ವಾಹನವನ್ನು ತೆಗೆದುಕೊಳ್ಳಲು ಮುಂದಾದ ರವಿಕುಮಾರ್ ಎಂಬುವರಿಗೆ ಸುಟ್ಟಗಾಯವಾಗಿದ್ದು, ಆವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.


ಸುದ್ದಿ ತಿಳಿದು ೩ ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ೧೮ ಮಂದಿ ಸಿಬ್ಬಂದಿ ಸತತ ಮೂರುಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಕಾರ್ಖಾನೆ ನಡೆಸಲು ಲೈಸೆನ್ಸ್ ಪಡೆದಿಲ್ಲ ಎಂಬುದು ತಿಳಿದು ಬಂದಿದೆ. ಈ ಕಟ್ಟದ ಮಾಲೀಕ ಬಾಲಚಂದ್ರ ಮತ್ತು ಕಾರ್ಖಾನೆ ಮಾಲೀಕ ವಿಜಯ್‌ಕುಮಾರ್ ಎಂಬುದು ತಿಳಿದು ಬಂದಿದೆ. ವಿಜಯ್‌ಕುಮಾರ್ ಕುಟುಂಬ ಸದಸ್ಯರೇ ಈ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಶಾಸಕ ಎಂ.ಕೃಷ್ಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net