ಐಎನ್‌ಸಿ ಈಗ ನ್ಯಾಷನಲ್ ಕರಪ್ಷನ್ ಪಾರ್ಟಿ: ಬಿವೈಆರ್

B.Y. Raghavendra
Published on

ಶಿವಮೊಗ್ಗ: ಐಎನ್‌ಸಿ (ಇಂಡಿಯನ್ ಕಾಂಗ್ರೆಸ್) ಈಗ ನ್ಯಾಷನಲ್ ಕರಪ್ಷನ್ ಪಾರ್ಟಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಹಿಂದೆ ಹಲವು ಹಗರಣಗಳನ್ನು ಸೃಷ್ಟಿಸಿದ್ದ ಕಾಂಗ್ರೆಸ್‌ನವರು ಈಗ ನಿವೇಶನ ಹಗರಣದಲ್ಲಿ ತನಿಖೆ ಎದುರಿಸುವಂತಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಟೀಕಿಸಿದ್ದಾರೆ.

2ಜಿ ಸ್ಪೆಕ್ಟ್ರಂ, ಕಾಮನ್ವೆಲ್ತ್, ಆದರ್ಶ್ ಸೊಸೈಟಿ ಹಗರಣ, ನ್ಯಾಷನಲ್ ಹೆರಾಲ್ಡ್ ಹಗರಣಗಳ ಬಳಿಕ ಈಗ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವೇಶನಗಳನ್ನು ಹಿಂದಕ್ಕೆ ನೀಡಿದ್ದಾರೆ. ಆ ಮೂಲಕ ತಮ್ಮ ಅಧಿಕಾರದ ದುರುಪಯೋಗವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ಮುಡಾ ಹಗರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯ, ಅದನ್ನು ಪ್ರಶ್ನಿಸುತ್ತಿರುವ ಪ್ರತಿಪಕ್ಷಗಳ ಮೇಲೆ ಪ್ರಹಾರಕ್ಕೆ ಮುಂದಾಗಿದ್ದಾರೆ. ಅಧಿಕಾರಿಗಳನ್ನು ಬಿಟ್ಟು ಬಿಜೆಪಿ ಅವಧಿಯ ಲೋಪಗಳ ಪತ್ತೆಗೆ ಮುಂದಾಗಿದ್ದಾರೆ. ರಾಜ್ಯದಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ದೂರಿದರು.
ಜಾರಿ ನಿರ್ದೇಶನಾಲಯದಿಂದ ನೋಟಿಸ್ ನೀಡಿದರೂ ರಾಜ್ಯ ಸರ್ಕಾರ ಸರಿಯಾದ ಉತ್ತರ ನೀಡದ ಕಾರಣ ಮುಡಾ ಕಚೇರಿ ಮೇಲೆ ಇಡಿ ದಾಳಿ ನಡೆದಿದೆ. ಮುಡಾದ ದಾಖಲೆಗಳಿಗೆ ವೈಟ್ನರ್‌ಹಚ್ಚಿ ದಾಖಲೆ ತಿದ್ದಲಾಗಿದೆ. ಮುಡಾದ ಎಲ್ಲ ದಾಖಲೆಗಳನ್ನು ಸಚಿವ ಭೈರತಿ ಸುರೇಶ್ ಹೆಲಿಕಾಪ್ಟರ್‌ನಲ್ಲಿ ಕೊಂಡೊಯ್ದು ಹಗರಣ ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗಿದೆ ಎಂದು ಆರೋಪಿಸಿದರು.
ಪ್ರಾಸಿಕ್ಯೂಷನ್‌ಗೆ ಕೋರ್ಟ್ ಒಪ್ಪಿಗೆ ನೀಡಿದ ನಂತರ ಸಿಎಂಗೆ ಆತಂಕ ಶುರುವಾಗಿದೆ. ಎಸ್‌ಐಟಿಯಿಂದ ಪಾರದರ್ಶಕ ತನಿಖೆ ಸಾಧ್ಯವಿಲ್ಲ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವವರೆಗೆ ಬಿಜೆಪಿ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ್, ಎಂ.ಬಿ.ಹರಿಕೃಷ್ಣ, ಸಿ.ಎಚ್.ಮಾಲತೇಶ್, ಮಾಜಿ ನಗರಾಧ್ಯಕ್ಷ ಜಗದೀಶ್, ಪ್ರಮುಖರಾದ ಕೆ.ವಿ.ಅಣ್ಣಪ್ಪ, ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net