ಯಲಹಂಕ ವಿದ್ಯುತ್ ಘಟಕ ಮಂಗಳವಾರ ಲೋಕಾರ್ಪಣೆ: ಸಚಿವ ಕೆ.ಜೆ.ಜಾರ್ಜ್

Minister George press brief
Published on

ಬೆಂಗಳೂರು: ಬಹು ನಿರೀಕ್ಷಿತ ಯಲಹಂಕ ಸಂಯುಕ್ತ ಆವರ್ತ (ಅನಿಲ್ + ಹಬೆ) ವಿದ್ಯುತ್ ಸ್ಥಾವರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ (ಸೆ.24) ಲೋಕಾರ್ಪಣೆ ಮಾಡಲಿದ್ದಾರೆ. ಆ ಮೂಲಕ ವಿದ್ಯುತ್ ಘಟಕವು ಅಧಿಕೃತ/ವಾಣಿಜ್ಯಿಕ ಕಾರ್ಯಾಚರಣೆ ಆರಂಭಿಸಲಿದೆ.

ದಶಕದ ಹಿಂದೆ ಈ ಘಟಕ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದ ಸಿದ್ದರಾಮಯ್ಯ ಅವರೇ ಉದ್ಘಾಟನೆ ಮಾಡುತ್ತಿರುವುದು ವಿಶೇಷ. ಕಳೆದ ಒಂದೂವರೆ ತಿಂಗಳಿಂದ ಪ್ರಾಯೋಗಿಕವಾಗಿ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿದೆ.

ಖಾಸಗಿ ಹೋಟೆಲ್‌ವೊಂದರಲ್ಲಿ ಶನಿವಾರ ಸಂಜೆ ಕೆಪಿಸಿಎಲ್ ಆಯೋಜಿಸಿದ್ದ ಕರ್ಟನ್‌ರೈಸರ್ ಕಾರ್ಯಕ್ರಮದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿ, ಗ್ಯಾಸ್ ಮತ್ತು ಸ್ಟೀಮ್ ಬಳಸಿ ಒಟ್ಟು 370 ಮೆಗಾ ವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಘಟಕಯಿದಾಗಿದೆ ಎಂದರು.

ಬೆಂಗಳೂರಿಗೆ ಬೆನ್ನೆಲುಬು

ರಾಜ್ಯದ ಮೊಟ್ಟ ಮೊದಲ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರವು ರಾಜಧಾನಿ ಬೆಂಗಳೂರಿಗೆ ಬೆನ್ನೆಲುಬಾಗಲಿದೆ. ಹೆಚ್ಚಿನ ಬೇಡಿಕೆ ಅವಧಿ (ಪೀಕ್ ಅವರ್)ಯಲ್ಲಿ ಪೂರ್ಣ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸಲಿದೆ.

ಉಳಿದ ಅವಧಿಯಲ್ಲಿ ಬೇಡಿಕೆ ಅನುಗುಣವಾಗಿ ಘಟಕ ಕಾರ್ಯನಿರ್ವಹಿಸಲಿದೆ. ಅನಿಲ ಬಳಸಿ 237 ಮೆ.ವಾ., ಹಬೆ ಬಳಸಿ 133 ಮೆ.ವಾ. ವಿದ್ಯುತ್ ಉತ್ಪಾದಿಸುವ ಘಟಕ ನಿರ್ಮಾಣಕ್ಕೆ 2,500 ಕೋಟಿ ರೂ. ವೆಚ್ಚವಾಗಿದೆ.

ಪ್ರತಿ ಯೂನಿಟ್‌ಗೆ 7.90 ರಿಂದ ಎಂಟು ರೂ.ಗಳಾಗಲಿದೆ. ಹೀಗಾಗಿ ಬೇಡಿಕೆ ಹಾಗೂ ಬಳಕೆ ಆಧರಿಸಿ ಪೂರ್ಣ ಸಾಮರ್ಥ್ಯದಲ್ಲಿ ಘಟಕ ಕಾರ್ಯಾಚರಿಸಲಿದೆ ಎಂದು ಕೆ.ಜೆ.ಜಾರ್ಜ್ ವಿವರಿಸಿದರು.

ಹಲವು ಅಡೆತಡೆ

ಪರಿಸರ, ಶಬ್ದ ಮಾಲಿನ್ಯ ಆಕ್ಷೇಪಣೆ, ಎನ್‌ಜಿಟಿ ಅಸ್ತು ಎಂದ ಬಳಿಕ ಬೆಂಕಿ ಅವಘಡ ಸಂಭವಿಸಿತು. ಬಿಎಚ್‌ಇಎಲ್‌ನವರು 2022ರ ಡಿಸೆಂಬರ್‌ಗೆ ಘಟಕದ ಎಲ್ಲ ವಿಭಾಗಗಳ ದೃಢತೆ ಪರೀಕ್ಷಿಸಿ ಒಪ್ಪಿಗೆ ನೀಡಿದರೂ ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಜ್ಯ ಇತ್ಯರ್ಥಕ್ಕಾಗಿ ಕಾಯಬೇಕಾಯಿತು.

ಹಲವು ತಡೆಗಳಿಂದ ಘಟಕದ ನಿರ್ಮಾಣ 2-3 ಮೂರು ವರ್ಷಗಳ ಕಾಲ ವಿಳಂಬದ ಪರಿಣಾಮ ಅಂದಾಜು ಮೊತ್ತ ಪರಿಷ್ಕರಣೆಯಾಗಿ 600 ರಿಂದ 700 ಕೋಟಿ ರೂ. ಹೆಚ್ಚುವರಿ ವೆಚ್ಚವಾಯಿತು.

ಈ ಮಧ್ಯೆ ಅನಿಲ ಪೂರೈಕೆ ಒಪ್ಪಿದ ಗೇಲ್ ಸಂಸ್ಥೆಯವರು ಎಷ್ಟಾದರೂ ಬಳಸಿ, ಪೂರ್ಣ ಅನಿಲಕ್ಕೆ ಬಿಲ್ ಮಾಡುತ್ತೇವೆ ಎಂದಿದ್ದರು.

ಸಂಸ್ಥೆಯ ಅಧ್ಯಕ್ಷರ ಜತೆಗೆ ನಿರಂತರ ಮಾತುಕತೆಯಿಂದ ಮನವೊಲಿಕೆ ಯಶಸ್ವಿಯಾಗಿದೆ. ಈಗ ಬಳಸಿದಷ್ಟೇ ಗ್ಯಾಸ್‌ಗೆ ಬಿಲ್ ಪಾವತಿಸಲು ಗೇಲ್ ಒಪ್ಪಿಕೊಂಡಿದೆ ಎಂದು ಕೆ.ಜೆ.ಜಾರ್ಜ್ ವಿವರಿಸಿದರು.

24ರ ಸಂಜೆ ಕಾರ್ಯಕ್ರಮ

ಯಲಹಂಕ ಯೋಜನಾ ಪ್ರದೇಶದಲ್ಲಿ ಸೆ.24ರ ಸಂಜೆ 5ಕ್ಕೆ ಕಾರ್ಯಕ್ರಮ ನಡೆಯಲಿದೆ. ಕೆಪಿಸಿಎಲ್ ಅಂಗಸಂಸ್ಥೆ ಕೆಪಿಸಿ ಗ್ಯಾಸ್ ಪವರ್ ಕಾರ್ಪೋರೇಷನ್ ಲಿಮಿಟೆಡ್ ಸ್ಥಾಪಿತ ಈ ಘಟಕವನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡುವರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಣ್ಯರು ಭಾಗವಹಿಸಲಿದ್ದಾರೆ. ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಅಧ್ಯಕ್ಷತೆವಹಿಸುವರು ಎಂದು ಕೆ.ಜೆ.ಜಾರ್ಜ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net