14ಕ್ಕೆ ವೀರಶೈವ ಲಿಂಗಾಯತ ಸಭಾಭವನ ಉದ್ಘಾಟನೆ

veerashaiva lingayata sabhabhavan
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್ ಮಾತನಾಡಿದರು. ಮಹಾಸಭಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಮಹೇಶ್‌ಮೂರ್ತಿ, ಕಾರ್ಯಾಲಯ ಕಾರ್ಯದರ್ಶಿ ಚಂದ್ರಶೇಖರ್ ತಳಗಿಹಾಳ ಸುದ್ದಿಗೋಷ್ಠಿಯಲ್ಲಿದ್ದರು.
Published on

ಶಿವಮೊಗ್ಗ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಸವಳಂಗ ರಸ್ತೆಯ ಕುವೆಂಪುನಗರದಲ್ಲಿ ವೀರಶೈವ ಲಿಂಗಾಯತ ಸಭಾಭವನದ ಉದ್ಘಾಟನಾ ಸಮಾರಂಭ ಜೂ.14ರಂದು ಬೆಳಗ್ಗೆ 11ಕ್ಕೆ ನಡೆಯಲಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಭಾಭವನ ಉದ್ಘಾಟಿಸುವರು ಎಂದು ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್ ತಿಳಿಸಿದರು.

ಶ್ರೀಶೈಲ ಪೀಠದ ಶ್ರೀ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಹಾಗೂ ಬಸವಕೇಂದ್ರದ ಶ್ರೀ ಬಸವಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಭಾ ಕಾರ್ಯಕ್ರಮವನ್ನು ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಉದ್ಘಾಟಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಹಾಸಭಾ ಪ್ರಧಾನ ಕಾರ್ಯದರ್ಶಿ, ಸಚಿವ ಬಿ.ಈಶ್ವರ ಖಂಡ್ರೆ, ಕೇಂದ್ರ ಸಮಿತಿ ಸದಸ್ಯ, ಸಂಸದ ಬಿ.ವೈ.ರಾಘವೇಂದ್ರ, ರಾಜ್ಯ ಉಪಾಧ್ಯಕ್ಷ ಎಚ್.ಎಂ.ಚಂದ್ರಶೇಖರಪ್ಪ, ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ, ಶಾಸಕ ಬಿ.ಕೆ.ಸಂಗಮೇಶ್ವರ್, ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿಗಳಾದ ಎಸ್.ರುದ್ರೇಗೌಡ, ಡಾ. ಧನಂಜಯ ಸರ್ಜಿ, ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಪಾಲ್ಗೊಳ್ಳುವರು ಎಂದರು.
ಮಹಸಾಭಾ ರಾಷ್ಟ್ರೀಯ ಕಾರ್ಯದರ್ಶಿ ಎಚ್.ಎಂ.ರೇಣುಕಪ್ರಸನ್ನ, ಪ್ರಧಾನ ಕಾರ್ಯದರ್ಶಿ ನಟರಾಜ್ ಸಾಗರನಹಳ್ಳಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಪಿ.ರೇಣುಕಾಚಾರ್ಯ, ಡಾ. ಬಿ.ಡಿ.ಭೂಕಾಂತ್, ಡಾ. ಸಿ.ಎ.ಹಿರೇಮಠ, ಸುಮಂತ್‌ಕುಮಾರ್ ಪಾಟೀಲ್, ಎಸ್.ಎಸ್.ಜ್ಯೋತಿಪ್ರಕಾಶ್, ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ ಭಾಗವಹಿಸುವರು ಎಂದು ಹೇಳಿದರು.

3 ಕೋಟಿ ರೂ. ವೆಚ್ಚ: ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ಭವನ ನಿರ್ಮಾಣ ಮಾಡಲಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಸಹಕಾರದಿಂದ ಎರಡು ಕೋಟಿ ರೂ. ನೀಡಿದ್ದರು. ಸಭಾಭವನದಲ್ಲಿ ಮದುವೆ ಹೊರತುಪಡಿಸಿ ಬೇರೆಲ್ಲ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಕಟ್ಟಡದಲ್ಲಿ ಸಂಗೀತ ಶಾಲೆ ನಡೆಸುವುದಕ್ಕೆ ಉಚಿತವಾಗಿ ಜಾಗ ನೀಡಲಾಗುತ್ತಿದೆ. ಜತೆಗೆ ಬಡಾವಣೆಯ ಎಲ್ಲ ವರ್ಗದವರಿಗೂ ಕಾರ್ಯಕ್ರಮಗಳನ್ನು ಆಯೋಜಿಸಲು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ ಎಂದು ರುದ್ರಮುನಿ ಸಜ್ಜನ್ ತಿಳಿಸಿದರು.

ಕೆಳದಿ ಶಿವಪ್ಪನಾಯಕ ಪ್ರಶಸ್ತಿ ವಿತರಣೆ
ಜಿಲ್ಲಾ ಘಟಕವು ಸಮಾಜದ ಪ್ರತಿಭಾವಂತರನ್ನು ಗುರುತಿಸಿ ಪುರಸ್ಕಾರ ನೀಡುತ್ತಿದೆ. ಸಮಾಜ, ದೇಶಕ್ಕೆ ಅನುಪಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಕೆಳದಿ ಶಿವಪ್ಪನಾಯಕ ಪ್ರಶಸ್ತಿ ನೀಡಲಾಗುತ್ತಿದೆ. ಈಗಾಗಲೇ ಬಿ.ಎಸ್.ಯಡಿಯೂರಪ್ಪ, ಗೊ.ರು.ಚನ್ನಬಸಪ್ಪ ಸೇರಿ ಹಲವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ರುದ್ರಮುನಿ ಸಜ್ಜನ್ ಹೇಳಿದರು. ಮಹಾಸಭಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಮಹೇಶ್‌ಮೂರ್ತಿ, ಕಾರ್ಯಾಲಯ ಕಾರ್ಯದರ್ಶಿ ಚಂದ್ರಶೇಖರ್ ತಳಗಿಹಾಳ ಸುದ್ದಿಗೋಷ್ಠಿಯಲ್ಲಿದ್ದರು.

ಮಹಾಸಭಾ ಜಿಲ್ಲಾ ಘಟಕಗಳು ರಾಜ್ಯಾದ್ಯಂತ ಸಮಾಜ ಸೇವೆಯಲ್ಲಿ ತೊಡಗಿವೆ. ಬೆಳಗಾವಿ, ಧಾರವಾಡ ಸೇರಿ ರಾಜ್ಯದ ಮೂರು ಜಿಲ್ಲೆಗಳಲ್ಲಿ ಮಾತ್ರ ಸ್ವಂತ ಸಭಾಭವನ ಹೊಂದಿವೆ. ಇದೀಗ ಶಿವಮೊಗ್ಗದಲ್ಲಿ 4ನೇ ಸಭಾಭವನ ನಿರ್ಮಾಣಗೊಂಡಿದ್ದು ಮತ್ತಷ್ಟು ಹುಮ್ಮಸ್ಸಿನಿಂದ ಸಮಾಜ ಸೇವೆಯಲ್ಲಿ ಜಿಲ್ಲಾ ಘಟಕ ತೊಡಗಲಿದೆ.ರುದ್ರಮುನಿ ಸಜ್ಜನ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net