

ಚಿಕ್ಕಮಗಳೂರು: ರಾಮಮಂದಿರ ಉದ್ಘಾಟನೆ ಭಾರತದ ಹಬ್ಬ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಬಣ್ಣಿಸಿದ್ದಾರೆ.
ತಾಲೂಕಿನ ಹೊಸಪೇಟೆ ಸಮೀಪದ ಹನಿ ಡ್ಯೂ ರೆಸಾರ್ಟ್‌ನಲ್ಲಿ ಮಂಡ್ಯ ಜಿಲ್ಲೆ ಜೆಡಿಎಸ್ ಶಾಸಕರು, ಮುಖಂಡರೊಂದಿಗೆ ವಾಸ್ತವ್ಯ ಹೂಡಿ ಗುರುವಾರ ಬೆಂಗಳೂರಿಗೆ ತೆರಳುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ನಿಜವಾದ ರಾಮರಾಜ್ಯ ಎಂಬ ಜನಾಭಿಪ್ರಾಯಕ್ಕೆ ನಾನೂ ಧ್ವನಿಗೂಡಿಸುತ್ತೇನೆ. ರಾಮಮಂದಿರ ನಿರ್ಮಾಣ ದೇಶದ ಜನರ ನಿರೀಕ್ಷೆಯಾಗಿತ್ತು. ಅದು ಈಗ ಈಡೇರುತ್ತಿದೆ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರು ರಾಮಮಂದಿರ ಉದ್ಘಾಟನೆಗೆ ಹೋಗದಿರುವ ನಿರ್ಧಾರ ಕೈಗೊಂಡಿದ್ದಾರೆ. ಅದು ಅವರ ಪಕ್ಷದ ತೀರ್ಮಾನ. ಯಾವ ಕಾರಣಕ್ಕೆ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ ಎನ್ನುವ ಬಗ್ಗೆ ಅವರೇ ಕಾರಣ ಹೇಳಬೇಕು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಜತೆಗಿನ ಮೈತ್ರಿಗಿಂತ ಬಿಜೆಪಿ ಜತೆಗಿನ ಮೈತ್ರಿಗೆ ಅಜಗಜಾಂತರ ವ್ಯತ್ಯಾಸವಿದೆ. ಮೈತ್ರಿಯಲ್ಲಿ ಕೇಸರಿ ಪಕ್ಷದ ಜತೆ ಯಾವುದೇ ವಿಶ್ವಾಸದ ಕೊರತೆ ಇಲ್ಲ. ಬದಲಿಗೆ ಖುಷಿ ಇದೆ. ಬಿಜೆಪಿ ಹಾಗೂ ಜೆಡಿಎಸ್‌ನದು ಒಂದು ರೀತಿಯ ಸಾಮಾನ್ಯ ಮೈತ್ರಿ ಅನಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಸ್ನೇಹಿತರ ವಿಶ್ವಾಸ ಪಡೆಯಲು ಹಾಗೂ ಸೂಕ್ಷ್ಮವಾಗಿ ಚರ್ಚಿಸಲು ಜೆಡಿಎಸ್ ಕಾರ್ಯಕರ್ತರೊಂದಿಗೆ ಸಭೆ ನಡೆಸುತ್ತಿದ್ದೇವೆ. ಕೆಲವೆಡೆ ಸ್ಥಳೀಯವಾಗಿ ಎರಡೂ ಪಕ್ಷಗಳ ನಾಯಕರ ನಡುವೆ ಇರುವ ಸಮಸ್ಯೆ ಪರಿಹರಿಸುವ ಕೆಲಸ ಮಾಡುವುದಾಗಿ ಹೇಳಿದರು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತ ಸ್ಪರ್ಧಿಸಿದರೂ ಗೆಲ್ಲುವ ಸಾಧ್ಯತೆಯಿದೆ. ಆದರೆ ಕಳೆದ ಬಾರಿ ಕಾಂಗ್ರೆಸ್ ನಮಗೆ ಶೇ.2-3 ಮಾತ್ರ ಸಹಕಾರ ನೀಡಿತ್ತು ಎಂದು ಆರೋಪಿಸಿದರು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಕುರಿತು ಮೈತ್ರಿ ನಂತರ ಪರಿಸ್ಥಿತಿ ಏನಾಗುತ್ತೋ ನೋಡೋಣ ಎಂದರು. ಸುಮಲತಾ ಸ್ಪರ್ಧೆ ಬಗ್ಗೆ ಸಹಾ ಬಿಜೆಪಿ ಜತೆಗಿನ ಹೊಂದಾಣಿಕೆ ನಂತರ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.