ಜನವರಿಯಲ್ಲಿ ರೈಲ್ವೆ ಮೇಲ್ಸೇತುವೆ ಉದ್ಘಾಟನೆ

bdvt railway
ಭದ್ರಾವತಿ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕುರಿರು ಅಧಿಕಾರಿಗಳು, ಇಂಜಿನಿಯರ್ಸ್‌ ಹಾಗೂ ತಂಡದಿಂದ ಸಂಸದ ಬಿ.ವೈ.ರಾಘವೇಂದ್ರ ಮಾಹಿತಿ ಪಡೆದರು. ರಾಜ್‌ಕುಮಾರ್, ಹರ್ಷವರ್ಧನ್, ಜಿ.ಧರ್ಮಪ್ರಸಾದ್, ಮಂಗೋಟೆ ರುದ್ರೇಶ್ ಇತರರಿದ್ದರು.
Published on

ಭದ್ರಾವತಿ: ಭದ್ರಾವತಿ ನಗರದ ಜನತೆಗೆ ಹೊಸ ವರ್ಷದ ಕೊಡುಗೆಯಾಗಿ ಜ.1ರಂದು ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆ ಮಾಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಗುರುವಾರ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸುಗಮ ಸಂಚಾರಕ್ಕಾಗಿ 2022ರ ಜನವರಿಯಲ್ಲಿ ಮೇಲ್ಸೇತುವೆ ಕಾಮಗಾರಿಯನ್ನು 23 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಲಾಯಿತು. ಸಣ್ಣಪುಟ್ಟ ಕಾರ್ಯಗಳು ಬಾಕಿಯಿದ್ದು, ಉದ್ಘಾಟನೆಗೆ ಸಿದ್ಧತೆ ಮಾಡಲಾಗುತ್ತಿದೆ ಎಂದರು.

ಡಿಸೆಂಬರ್‌ನಲ್ಲಿ ಕಾಮಗಾರಿ ಮುಗಿಯಲಿದೆ ಎಂದು ಮೊದಲೇ ಹೇಳಿದ್ದೆ. ಹೇಳಿದಂತೆ 2 ವರ್ಷದ ಅವಧಿಯಲ್ಲಿ ಗುತ್ತಿಗೆದಾರರು, ಅಧಿಕಾರಿಗಳು, ಇಂಜಿನಿಯರ್ಸ್‌ ಹಾಗೂ ಅವರ ತಂಡ ಕೆಲಸ ಮಾಡಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಈ ಭಾಗದ ಜನರು ಸಾಕಷ್ಟು ಅನಾನುಕೂಲ ಎದುರಿಸುವಂತಾಯಿತು. ಏಳೆಂಟು ಕಿ.ಮೀ ಸುತ್ತಿಬಳಸಿ ದಾರಿಯಲ್ಲಿ ನಿತ್ಯ ಕೆಲಸಕ್ಕೆ ತೆರಳಬೇಕಾಗಿತ್ತು. ಇಷ್ಟು ದಿನಗಳ ಕಾಲ ಸಹಕರಿಸಿದ್ದಕ್ಕಾಗಿ ಮೇಲ್ಸೇತುವೆ ಕಾಮಗಾರಿ ಮುಗಿದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳ ಕಡೆಗೆ ಗಮನಹರಿಸುವೆ ಎಂದು ತಿಳಿಸಿದರು.

ಗುಂಡಿ ಬಿದ್ದಿರುವ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಲೋಯರ್ ಹುತ್ತಾ ನಿವಾಸಿಗಳು ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು. ಸೀನಿಯರ್ ಇಂಜಿನಿಯರ್ ರಾಜ್‌ಕುಮಾರ್, ಎಇಇ ಹರ್ಷವರ್ಧನ್, ಎಸ್‌ಆರ್‌ಎಸ್ ಕಂಪನಿ ಪ್ಲಾಂಟ್ ಮ್ಯಾನೇಜರ್ ಅನೂಜ್‌ಕುಮಾರ್, ನಗರಸಭೆ ಪೌರಾಯುಕ್ತ ಪ್ರಕಾಶ್ ಚನ್ನಪ್ಪನವರ್, ಶಿವಪ್ರಸಾದ್, ಬಿಜೆಪಿ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್, ಪ್ರಮುಖರಾದ ಮಂಗೋಟೆ ರುದ್ರೇಶ್, ಚನ್ನೇಶ್, ಸುರೇಶಪ್ಪ, ಆನಂದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net