ತುಮಕೂರಲ್ಲಿ 'ನಾರಾಯಣ ದೇವಾಲಯ' ಉದ್ಘಾಟನೆ: ಇದು ಕ್ಯಾಷ್​ ಕೌಂಟರ್​ ಇಲ್ಲದ ಮೊದಲ ಆಸ್ಪತ್ರೆ

narayana devalaya hospital tumkur eye jpg
Published on

ತುಮಕೂರು: 'ನಾರಾಯಣ ನೇತ್ರಾಲಯ ವತಿಯಿಂದ ನಗರದಲ್ಲಿ ನಿರ್ಮಾಣ ಆಗಿರುವ 'ನಾರಾಯಣ ದೇವಾಲಯ- ಉಚಿತ ನೇತ್ರ ಚಿಕಿತ್ಸಾ ಕೇಂದ್ರ'ವನ್ನು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಸಮ್ಮುಖದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಇಂದು(ಬುಧವಾರ) ಉದ್ಘಾಟಿಸಿದರು.

ಸಿಎಂ ಮಾತನಾಡಿ, ಬಡವರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡಲು ವೈದ್ಯಕೀಯ ರಂಗದ ಎಲ್ಲರೂ ಸೇರಿ ಯೋಜನೆ ರೂಪಿಸಬೇಕು ಎಂದು ಕರೆ ನೀಡಿದರು. ಬದುಕಿನಲ್ಲಿ ಯಶಸ್ಸು ಪಡೆದವರೆಲ್ಲಾ ಸಮಾಜಕ್ಕೆ ಹಿಂತಿರುಗಿಸಿ ನೀಡಬೇಕೆಂಬ ಸಣ್ಣ ಗುಣಧರ್ಮವಿದ್ದರೆ, ಈ ಜಗತ್ತು ಇನ್ನಷ್ಟು ಉತ್ತಮವಾಗುತ್ತದೆ. ಎಲ್ಲರಿಗೂ ಶ್ರೀಮಂತಿಕೆ ಇರುವುದಿಲ್ಲ. ಅಂತಿಮವಾಗಿ ನಮ್ಮ ದುಡಿಮೆ, ಶ್ರೀಮಂತಿಕೆ ಸೃಷ್ಟಿಗೆ ಸೇರಿದ್ದು. ನಾವು ಸೃಷ್ಟಿಯ ಭಾಗವಷ್ಟೇ. ಭುಜಂಗಶೆಟ್ಟಿ ಅವರಿಗೆ ನಾನು ಎನ್ನುವ ಭಾವವಿಲ್ಲ. ನಾರಾಯಣ‌ ನೇತ್ರಾಲಯ ಒಂದು ಹೆಜ್ಜೆ ಮುಂದೆ ಹೋಗಿ ಉಚಿತ‌ ಚಿಕಿತ್ಸೆ ನೀಡುತ್ತಿದೆ. ಇದಕ್ಕಿಂತ ಉದಾಹರಣೆ ಮತ್ತೊಂದಿಲ್ಲ. ಡಾ. ಭುಜಂಗ ಶೆಟ್ಟಿಯವರು ತಮ್ಮ ವೃತ್ತಿಯಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಸಂಪೂರ್ಣ ಉಚಿತ ಆಸ್ಪತ್ರೆ: ಇದು ಸಂಪೂರ್ಣ ಉಚಿತ ಆಸ್ಪತ್ರೆ. ಇಲ್ಲಿ ಕ್ಯಾಶ್ ಕೌಂಟರ್ ಇರುವುದಿಲ್ಲ ಎಂದು ತಿಳಿದಾಗ ಇದು ಹೇಗೆ ಸಾಧ್ಯ? ಎಂದು ಆಶ್ಚರ್ಯವಾಯಿತು. ಶೇ.100 ಅವರ ದುಡಿಮೆಯಿಂದ ಪುಣ್ಯದ ಕಾರ್ಯವಾಗಿ ಈ ಕೆಲಸ ಮಾಡುತ್ತಿರುವುದು ತಿಳಿದು ಹೃದಯ ತುಂಬಿ ಬಂತು. ಈ ರೀತಿಯ ಆಸ್ಪತ್ರೆ ರಾಜ್ಯದಲ್ಲಿ ಎಲ್ಲಿಯೂ ಇಲ್ಲ. ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಮಾಡುತ್ತಾರೆ. ಆದರೆ ಎಲ್ಲ ರೀತಿಯ ಆಧುನಿಕ ವ್ಯವಸ್ಥೆಯನ್ನು ಒಳಗೊಂಡ ಆಸ್ಪತ್ರೆ ಇದಾಗಿದೆ‌. ಬಡವರಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡಬೇಕೆನ್ನುವ ತೀರ್ಮಾನ ಮಾದರಿಯಾಗಿದೆ. ಎಲ್ಲ ಯಶಸ್ವಿ ವೈದ್ಯರೂ ಇದನ್ನು ಅನುಸರಿಸಬೇಕು ಎಂದರು.

ಡಾ.ಭುಜಂಗ ಶೆಟ್ಟಿ, ಸಚಿವ ಬಿ.ಸಿ.ನಾಗೇಶ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net