

ವಿಜಯವಾಣಿ ಸುದ್ದಿಜಾಲ ಮೈಸೂರು
ನಾಡಿನ ಅಧಿದೇವತೆ ತಾಯಿ ಶ್ರೀಚಾಮುಂಡೇಶ್ವರಿ ಸನ್ನಿಧಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಾಡಹಬ್ಬ ದಸರಾ ಉತ್ಸವದ ಉದ್ಘಾಟನಾ ಸಮಾರಂಭ ಬಹುತೇಕ ಮುಡಾ ಕೇಂದ್ರಿಕೃತವಾಗಿತ್ತು.
ಇಂತಹದ್ದೊಂದು ಚರ್ಚೆಗೆ ದಸರಾ ಅತಿಥಿ, ಖ್ಯಾತ ಸಾಹಿತಿ ನಾಡೋಜ ಹಂಪ ನಾಗರಾಜಯ್ಯ ಅವರೇ ನಾಂದಿ ಹಾಡಿದ್ದು ವಿಶೇಷವಾಗಿತ್ತು. ಹಂಪ ನಾಗರಾಜಯ್ಯ ಪ್ರಸ್ತಾಪಿಸಿದ ವಿಚಾರವನ್ನೇ ಮುಂದಿಟ್ಟುಕೊಂಡು ಶಾಸಕ ಜಿ.ಟಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಕೇಂದ್ರೀಕೃತವಾಗಿ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗೆ ಪೂರಕವಾಗಿ ಮಾತನಾಡಿದರು.
ಹಂಪನಾ ಹೇಳಿದ್ದೇನು?: ಸರ್ಕಾರಗಳನ್ನು ಉರುಳಿಸುವ ದುರಾಲೋಚನೆ ಬರದಂತೆ ತಡೆದು, ಚುನಾಯಿತ ಸರ್ಕಾರಗಳನ್ನು ಉಳಿಸುವ ಚಿಂತನೆಗಳನ್ನು ಲೋಕಾಂಬಿಕೆಯು ಮೂಡಿಸಲೆಂದು ಬೇಡುತ್ತೇನೆ. ಕೆಡವುವುದು ಸುಲಭ, ಕಟ್ಟುವುದು ಕಷ್ಟ. ಮೊದಲೇ ದೊಡ್ಡ ಹೊರೆಗಳಿಂದ ಬಳಲಿ ಬಸವಳಿದಿರುವ ಶ್ರೀಸಾಮಾನ್ಯರ ಹೆಗಲಿಗೆ ಮತ್ತೆ ಮತ್ತೆ ನಡೆಯುವ ಚುನಾವಣೆಗಳು ಇನ್ನಷ್ಟು ಭಾರ ಹೇರಿದರೆ ಕುಸಿಯುತ್ತಾನಷ್ಟೆ. ಯಾವ ಪಕ್ಷವೂ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದು ಅಸಾಧ್ಯ. ಸೋತ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲು, ಜನಮನವನ್ನು ತಮ್ಮ ಪರವಾಗಿ ಒಲಿಸಿಕೊಳ್ಳಲು ಐದು ವರ್ಷದಲ್ಲಿ ಸಜ್ಜಾಗಬಹುದು ಎಂದು ಹೇಳಿದರು.
ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಿ: ಹೆಣ್ಣು ಭ್ರೂಣ ಹತ್ಯೆ ತಡೆಯಲು ತಾಯಿ ಶ್ರೀ ಚಾಮುಂಡೇಶ್ವರಿ ತಾಯಿ-ತಂದೆಯರಿಗೆ ಸದ್ಬುದ್ಧಿ ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇನೆ. ಹೆಣ್ಣು ದೇವತೆಗಳು ತೆಪ್ಪಗಿರುವುದು ಕಂಡು ಅಚ್ಚರಿಯಾಗುತ್ತದೆ. ದೇವರುಗಳಿಗೂ ಬಲಿಷ್ಠರನ್ನು ಕಂಡರೆ ಭಯ, ಅಮಾಯಕ ಮುಗ್ಧರಿಗೇ ಕಷ್ಟ ಕೊಡುವರು. ಈ ದೇವರುಗಳು ಕೂಡ ಕೋಳಿ, ಕುರಿ, ಮೇಕೆ ಬಲಿ ಬೇಡುವರೆ ಹೊರತು ಹುಲಿ, ಸಿಂಹ, ಚಿರತೆ ಕಿರುಬ ಬಲಿ ಕೊಡಿ ಎಂದು ಕೇಳಲು ಹೆದರಿಕೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಶಾಸನ ಸಭೆ, ಲೋಕಸಭೆಯಲ್ಲಿ ಸ್ತ್ರೀಯರಿಗೆ ಸೂಕ್ತ ಪ್ರಾತಿನಿಧ್ಯ ಕೊಡುವ ಮಸೂದೆಗೆ ಅಡ್ಡಿ ಮಾಡುತ್ತಲೇ ಇದ್ದಾರೆ. ಹೆಣ್ಣು ಮಕ್ಕಳು ಶಾಲೆಗೆ ಹೋಗ ಕೂಡದೆಂದು ಬೆದರಿಸುವ ಒಂದು ದೇಶವೂ ಇದೆಯೆಂಬುದು ಶೋಚನೀಯವಷ್ಟೇ ಅಲ್ಲ ಖಂಡನೀಯ ಕೂಡ ಎಂದರು.
ಜನರ ಆಶೀರ್ವಾದದಿಂದ ಆಡಳಿತಕ್ಕೆ ಬಂದಿದ್ದೇವೆ. 5 ವರ್ಷ ರಾಜ್ಯದ ಜನತೆ ನಮಗೆ ಅವಕಾಶ ಕೊಟ್ಟಿದ್ದಾರೆ. ಈಗಲೂ ಎಷ್ಟೇ ತೊಡಕುಗಳು ಎದುರಾದರೂ, ತಾಯಿ ಚಾಮುಂಡೇಶ್ವರಿ ಆಶೀರ್ವಾದ ನಮ್ಮ ಮೇಲಿದೆ. ಚಾಮುಂಡೇಶ್ವರಿ ಹಾಗೂ ರಾಜ್ಯದ ಜನತೆಯ ಆಶೀರ್ವಾದ ಇರುವವರೆಗೆ ನಮ್ಮನ್ನು ಯಾರು ಏನೂ ಮಾಡಲು ಸಾಧ್ಯವಿಲ್ಲ. ನಾವು ಐದು ವರ್ಷಗಳ ಕಾಲ ಆಡಳಿತ ಮಾಡಿಯೇ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರಾಳಿಗಳಿಗೆ ಸಂದೇಶ ರವಾನಿಸಿದರು.
ಸತ್ಯಕ್ಕೆ ಯಾವತ್ತೂ ಜಯ ದೊರೆಯುತ್ತದೆ. ಈ ರಾಜ್ಯದ ಜನರ ಆಶೀರ್ವಾದ ಈ ಸರ್ಕಾರದ ಮೇಲೆ ಇರುವತನಕ ಯಾರಿಗೂ ಏನೂ ಮಾಡಲು ಸಾಧ್ಯವಿಲ್ಲ. ನಾನು ಈ ಕ್ಷೇತ್ರದಲ್ಲಿ ಐದು ಬಾರಿ ಗೆದ್ದಿದ್ದೇನೆ. ಮೂರು ಬಾರಿ ಸೋತಿದ್ದೇನೆ. ಚಾಮುಂಡೇಶ್ವರಿ ತಾಯಿ ಹಾಗೂ ಇಲ್ಲಿನ ಜನರ ಆಶೀರ್ವಾದದಿಂದಲೇ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಇಲ್ಲಿಯವರೆಗೆ ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ರೆ ಇಷ್ಟು ದೀರ್ಘಕಾಲ ರಾಜಕಾರಣದಲ್ಲಿ ಇರಲು ಸಾಧ್ಯವಿರಲಿಲ್ಲ. ನನಗೆ ನ್ಯಾಯಾಂಗದಲ್ಲಿ ನಂಬಿಕೆ ಇದೆ. ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುವ ಪ್ರಯತ್ನ ಮಾಡುತ್ತಿದ್ದೇವೆ. ಗಾಂಧೀಜಿ ಹೇಳಿದಂತೆ ಆತ್ಮಸಾಕ್ಷಿ ನ್ಯಾಯಾಲಯ ಎಲ್ಲ ನ್ಯಾಯಾಲ ಯಗಳಿಗಿಂತ ಮಿಗಿಲಾದುದು. ಆತ್ಮಸಾಕ್ಷಿಗೆ ತಕ್ಕಂತೆ ನಡೆದಿದ್ದೇನೆ ಎಂಬ ದೃಢ ನಂಬಿಕೆ ಇದೆ ಎಂದರು.
ಈ ಬಾರಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ದಸರಾ ಮಹೋತ್ಸವ ಅದ್ದೂರಿಯಾಗಿ ಮಾಡಲು ಸೂಚನೆ ನೀಡಿದ್ದೇನೆ. ದಸರಾ ನಾಡಹಬ್ಬವಾಗಬೇಕು, ಅಧಿಕಾರಿಗಳ ಹಬ್ಬವಾಗಬಾರದು. ಎಲ್ಲ ಕಾರ್ಯಕ್ರಮಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹಂ.ಪ.ನಾಗರಾಜಯ್ಯ ಅವರು ಕನ್ನಡ ಸಾಹಿತ್ಯ ಹಾಗೂ ಜೈನ ಸಾಹಿತ್ಯಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಅವರ ಆಯ್ಕೆ ಔಚಿತ್ಯಪೂರ್ಣ. ಕರ್ನಾಟಕ ಕಂಡ ಅಪರೂಪದ ಸಾಹಿತಿ ಎಂದರು.
136 ಶಾಸಕರ ಬೆಂಬಲದೊಂದಿಗೆ ಆಯ್ಕೆಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾ? ಎಲ್ಲರೂ ಗಾಜಿನ ಮನೆಯಲ್ಲಿ ಕುಳಿತ್ತಿದ್ದಾರೆ. ಎಫ್ಐಆರ್ ಆದ ಮಾತ್ರಕ್ಕೆ ರಾಜೀನಾಮೆ ಕೊಡುವುದಾದರೆ ಎಲ್ಲ ಪಕ್ಷದ ನಾಯಕರು ರಾಜೀನಾಮೆ ನೀಡಲಿ ಎಂದು ಶಾಸಕ ಜಿ.ಟಿ. ದೇವೇಗೌಡ, ಆಗ್ರಹಿಸಿದರು. ಕೇಂದ್ರದಲ್ಲಿ ಮಂತ್ರಿ ಆದವರಿಗೆ ಜವಾಬ್ದಾರಿ ಬೇಡ್ವ? ತಮ್ಮ ಜವಾಬ್ದಾರಿ ಅರಿತುಕೊಳ್ಳದೆ ಸಿದ್ದರಾಮಯ್ಯ ಅವರ ಒಳ್ಳೆಯ ಕೆಲಸಗಳನ್ನು ಬದಿಗೊತ್ತಿ ಮುಡಾ ವಿಚಾರ ಮುಂದಿಟ್ಟುಕೊಂಡು ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಎಚ್.ಡಿ.ಕುಮಾರಸ್ವಾಮಿಗೆ ರಾಜೀನಾಮೆ ಕೊಡು ಅಂದರೆ ಕೊಡುತ್ತಾರಾ? ಸಿದ್ದರಾಮಯ್ಯ ಎಂದೂ ತಮ್ಮ ಕುಟುಂಬ ಹಾಗೂ ಮಕ್ಕಳ ಕುರಿತು ಚಿಂತೆ ಮಾಡಿದವರೇ ಅಲ್ಲ. ಈಗ ವಯಸ್ಸಾದ ಮೇಲೆ ಪ್ರೀತಿ ಬಂದಿದೆಯೋ ಏನೋ ಗೊತ್ತಿಲ್ಲ. ಸಿದ್ದರಾಮಯ್ಯ ಚಾಮುಂಡೇಶ್ವರಿಯ ವರಪುತ್ರ. ಅವರನ್ನು ಚಾಮುಂಡೇಶ್ವರಿ ವಿಧಾನಸಭಾ ಉಪ ಚುನಾವಣೆಯಲ್ಲಿ ಸೋಲಿಸಲು ಬಿಜೆಪಿ ಹಾಗೂ ಜೆಡಿಎಸ್ ಒಗ್ಗೂಡಿ ಶ್ರಮಿಸಿದರೂ ಸಾಧ್ಯವಾಗಲಿಲ್ಲ, ಅವರಿಗೆ ಚಾಮುಂಡೇಶ್ವರಿಯ ಆಶೀರ್ವಾದ ಇದೆ. ಅವರಿಗೆ ಎಂತಹದ್ದೇ ಸಂಕಷ್ಟ ಎದುರಾದರೂ ಆ ಸಂಕಷ್ಟದಿಂದ ಪಾರಾಗುವ ಶಕ್ತಿಯನ್ನು ತಾಯಿ ಶ್ರೀ ಚಾಮುಂಡೇಶ್ವರಿ ನೀಡುತ್ತಾಳೆ ಎಂದು ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು.
ಸಂಸಾರವನ್ನು ಕಾಪಾಡುವವಳು ಹೆಣ್ಣು. ಈ ರಾಜ್ಯವನ್ನು ಕಾಪಾಡುತ್ತಿ ರುವುದು ಹೆಣ್ಣು ದೇವತೆಗಳು. ಸ್ತ್ರೀ ಶಕ್ತಿಯೇ ನಮ್ಮ ಕರ್ನಾ ಟಕದ ಶಕ್ತಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ್ಣಿಸಿದರು. ಕಳೆದ ವರ್ಷ ದಸರಾ ಉದ್ಘಾಟನೆ ವೇಳೆ, ಮಳೆ ಚೆನ್ನಾಗಿ ಬೀಳಲಿ ಎಂದು ಚಾಮುಂಡೇಶ್ವರಿ ಬಳಿ ಬೇಡಿಕೊಂಡಿದ್ದೆವು. ಪ್ರಯತ್ನ ಮಾಡಿ ಸೋಲಬಹುದು, ಆದರೆ ಪ್ರಾರ್ಥನೆ ಮಾಡಿ ಸೋಲಲು ಸಾಧ್ಯವಿಲ್ಲ. ಅದರಂತೆ ಉತ್ತಮ ಮಳೆ ಬಂದು ನಾನು ಮತ್ತು ಮುಖ್ಯಮಂತ್ರಿ ಇಬ್ಬರೂ ರಾಜ್ಯದ ನಾಲ್ಕು ಅಣೆಕಟ್ಟುಗಳಿಗೆ ಬಾಗಿನ ಅರ್ಪಿಸಿದ್ದೇವೆ ಎಂದರು. ದುಃಖದಿಂದ ನಮ್ಮನ್ನು ದೂರ ಮಾಡುವವಳು ದುರ್ಗಾದೇವಿ. ಚಾಮುಂಡೇಶ್ವರಿಯ ಆಶೀರ್ವಾದದಿಂದ ತಾಯಂದಿರು, ರೈತರು ಮತ್ತು ರಾಜ್ಯದ ಜನ ಸಂತೋಷವಾಗಿದ್ದಾರೆ. ಮುಖ್ಯಮಂತ್ರಿ ಜತೆ ಬಂದು ಕಳೆದ ವರ್ಷ ದೇವಿಗೆ ಗೃಹಲಕ್ಷ್ಮಿ ಹಣದ 2 ಸಾವಿರ ರೂ. ಹಾಗೂ ಒಂದು ವರ್ಷದ ಹಣವನ್ನು ಕಾಣಿಕೆ ಸಲ್ಲಿಸಿದ್ದೆವು ಎಂದು ಹೇಳಿದರು.
ಮೈಸೂರು: ರಾಜಪ್ರಭುತ್ವದ ಪರಂಪರೆ ಆಗಿರುವ ಖಾಸಗಿ ದರ್ಬಾರ್ಗೆ ಲೋಕಪ್ರಸಿದ್ಧ ಮೈಸೂರು ಅರಮನೆ ಗುರುವಾರ ಸಾಕ್ಷಿಯಾಯಿತು. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು 10ನೇ ಖಾಸಗಿ ದರ್ಬಾರ್ಗೆ ವಿಧ್ಯುಕ್ತ್ತವಾಗಿ ಚಾಲನೆ ಕೊಟ್ಟರು.
ಸಂಸದರಾದ ಆಯ್ಕೆಯಾದ ಬಳಿಕ ಅವರು ನಡೆಸಿದ ಮೊದಲ ಖಾಸಗಿ ದರ್ಬಾರ್ ಎಂಬುದು ವಿಶೇಷ. ಗುರುವಾರದಿಂದ 11 ದಿನಗಳ ಕಾಲ ಅರಮನೆಯ ಆವರಣದಲ್ಲಿ ರಾಜವೈಭವ ಮತ್ತೆ ಮೇಳೈಸಲಿದೆ. ನವರಾತ್ರಿ ಅಂಗವಾಗಿ ನಡೆದ ವಿವಿಧ ಪೂಜಾ ಕೈಂಕರ್ಯಗಳಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾ ಒಡೆಯರ್, ಆದ್ಯವೀರ್ ಪಾಲ್ಗೊಂಡು ಯದುವಂಶದ ಪರಂಪರೆ, ಸಂಪ್ರದಾಯ ಮುನ್ನಡೆಸಿದರು.