

ಎಚ್.ಡಿ.ಕೋಟೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಂಘ ಸಂಸ್ಥೆಗಳನ್ನು ಸ್ಥಾಪಿಸಿದ್ದು, ಇದರಿಂದ ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರೃ ದೊರೆತಿದೆ ಎಂದು ತಹಸೀಲ್ದಾರ್ ಎಲ್.ಸಣ್ಣರಾಮಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಕಾರಾಪುರ ಗ್ರಾಮದ ಗೋಪಾಲಸ್ವಾಮಿ ದೇವಾಲಯ ಆವರಣದಲ್ಲಿ ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ವತಿಯಿಂದ ಹಾಡಿಗಳಲ್ಲಿ ಆದಿವಾಸಿ ಮಹಿಳೆಯರ 57 ಸ್ವಸಹಾಯ ಸಂಘಗಳು ಹಾಗೂ ಬೀದಿ ಬದಿಯ 17 ಸಂಘಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘದ ಸೇವೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಹಾಡಿಗಳಲ್ಲೂ ಸ್ವಸಹಾಯ ಸಂಘಗಳನ್ನು ಸ್ಥಾಪಿಸುತ್ತಿರುವುದು ಸ್ವಾಗತಾರ್ಹ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ ಸಂಘ ಸಂಸ್ಥೆಗಳನ್ನು ಸ್ಥಾಪಿಸಬೇಕಾದರೆ ನಾವು ಹಲವು ಸವಾಲುಗಳನ್ನು ಎದುರಿಸಿದ್ದೇವೆ. ಸ್ಥಾಪನೆಯಾದ ನಂತರ ಹಣ ಕಟ್ಟದೆ ಎಷ್ಟೋ ಸಂಘಗಳು ಮುಂದುವರಿಯಲಿಲ್ಲ ಎಂದರು.
ಜಾಗೃತಿ ಇಲ್ಲದೆ ವ್ಯಸನಿಗಳಾದರೆ ಬಡತನ ಆವರಿಸುತ್ತದೆ. ಆದ್ದರಿಂದ, ದುಶ್ಚಟಗಳನ್ನು ಬಿಟ್ಟಾಗ ಮಾತ್ರ ವ್ಯಕ್ತಿಯನ್ನು ಬಡತನ ಬಿಟ್ಟು ಹೋಗುತ್ತದೆ ಎಂದು ಅಭಿಪ್ರಾಯಪಟ್ಟರು.
46 ಸಾವಿರ ಮಂದಿ ನಮ್ಮೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. 54 ಲಕ್ಷ ಜನ ನಮ್ಮ ಯೋಜನೆಯ ಲಾಭದಲ್ಲಿ ಪಾಲುದಾರರಾಗಿದ್ದಾರೆ. ಯಾರು ಅಭಿವೃದ್ಧಿಯಾಗಿದ್ದಾರೋ ಅವರು ಅಭಿವೃದ್ಧಿ ಆಗದವರ ನೆರವಿಗೆ ನಿಲ್ಲಬೇಕು ಎಂದು ಸಲಹೆ ನೀಡಿದರು.
ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ್ ನೆಲ್ಲಿತ್ತಾಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಮರಿಲಿಂಗಯ್ಯ, ಯೋಜನೆಯ ಜಿಲ್ಲಾ ನಿರ್ದೇಶಕ ಎಂ.ಲಕ್ಷ್ಮಣ್, ಯೋಜನಾಧಿಕಾರಿ ವಿ. ಭಾಸ್ಕರ್, ಗ್ರಾಮದ ಮುಖಂಡರಾದ ಕೃಷ್ಣೇಗೌಡ, ಕೆಂಪಯ್ಯ, ಟಿ.ಮಂಜು, ಮರಿಗೌಡ, ತನಿರಾಜ್, ಜನ ಜಾಗೃತಿ ವೇದಿಕೆ ಸದಸ್ಯರಾದ ನಾಗಣ್ಣ, ಕನ್ನಡ ಪ್ರಮೋದ್, ವಿನಯ್ ಭಜರಂಗಿ, ಜೆ.ಪಿ. ಶಿವರಾಜು, ಒಕ್ಕೂಟದ ಅಧ್ಯಕ್ಷ ಮರಿಲಿಂಗಯ್ಯ, ನಾಗಯ್ಯ, ಶಿವಪ್ರಕಾಶ್, ಸಂಸ್ಥೆಯ ಕೃಷಿ ಅಧಿಕಾರಿ ರಾಜು ಇತರರಿದ್ದರು.