

ಬೆಳಗಾವಿ: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಅನುಪಾತದಲ್ಲಿ ವ್ಯತ್ಯಾಸ, ಬಜೆಟ್ ಕೊರತೆ ಮಕ್ಕಳ ಶಿಕ್ಷಣದ ಗುಣಮಟ್ಟ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರುತ್ತಿದೆ ಎಂದು ಭಾರತ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ ವರದಿ ಕಳವಳ ವ್ಯಕ್ತಪಡಿಸಿದೆ.
ಪ್ರಾಥಮಿಕ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿ ಕುರಿತು ವಿಧಾನಸಭೆಯಲ್ಲಿ ಗುರುವಾರ ಸಿಎಜಿ ವರದಿ ಮಂಡಿಸಲಾಗಿದೆ. 2017-18 ರಿಂದ 2021-22ರ ಅವಧಿಯ ಕಾರ್ಯವಿಧಾನ ಪರಾಮರ್ಶೆ, ಪರಿಶೀಲನೆ, ಇಲಾಖೆ ಅಧಿಕಾರಿಗಳೊಂದಿಗೆ ರ್ಚಚಿಸಿ ಈ ವರದಿ ಸಿದ್ಧಪಡಿಸಿದೆ.
ಶಿಕ್ಷಕರ ಖಾಲಿ ಹುದ್ದೆಯು ಮಂಜೂರಾದ ಒಟ್ಟು ಸಾಮರ್ಥ್ಯದ ಶೇ.10 ಮೀರಬಾರದು. ಆದರೆ ಗ್ರಾಮೀಣ ಪ್ರದೇಶದಲ್ಲಿ ಶೇ.27, ನಗರ ಪ್ರದೇಶದಲ್ಲಿ ಶೇ.21 ಹುದ್ದೆಗಳು ಖಾಲಿಯಿವೆ. ಕೊಪ್ಪಳ (ಶೇ.20.90), ವಿಜಯಪುರದಲ್ಲಿ (ಶೇ.18.70) ಅಧಿಕ ಹುದ್ದೆಗಳು ಖಾಲಿ ಇವೆ. ಶಾಲಾ ಶಿಕ್ಷಕರ ಕೊರತೆ ನೀಗಿಸಲು 27 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಆದರೆ ನಿವೃತ್ತಿಯಂತಹ ಸಂಗತಿಯನ್ನು ಪರಿಗಣಿಸಿ ನಿಯಮಿತವಾಗಿ ನೇಮಿಸುವುದು ಅಗತ್ಯವಾಗಿದೆ. ಅಲ್ಲದೆ, ಎಂಟು ಜಿಲ್ಲೆಗಳಲ್ಲಿ 31,770 ಶಿಕ್ಷಕರ ಅವಶ್ಯಕತೆಯಿದ್ದರೆ, ಉಳಿದ ಜಿಲ್ಲೆಗಳಲ್ಲಿ 18,391 ಹೆಚ್ಚುವರಿ ಶಿಕ್ಷಕರಿದ್ದಾರೆ. ಎಂಟು ಜಿಲ್ಲೆಗಳಲ್ಲಿ ಹೆಚ್ಚುವರಿ ಶಿಕ್ಷಕರ ಮರು ನಿಯೋಜನೆ, ತರ್ಕಬದ್ಧಗೊಳಿಸುವುದರಿಂದ ಶೇ.58 ಶಿಕ್ಷಕರ ಅಗತ್ಯತೆ ಪೂರೈಸಬಹುದಾಗಿದೆ. ಹಾಗೆಯೇ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಜಿಲ್ಲಾವಾರು ಅನುಪಾತದ ವ್ಯತ್ಯಾಸ ಸರಿಪಡಿಸಲು ಸಾಧ್ಯವಿದೆ ಎಂದು ಸಿಎಜಿ ಹೇಳಿದೆ.
ಪಂಚಾಯಿತಿ ಸಂಸ್ಥೆಗಳಿಗೆ ಸಿಬ್ಬಂದಿ ಕೊರತೆ: ಪಂಚಾಯತ್ರಾಜ್ ಸಂಸ್ಥೆಗಳಲ್ಲಿ ಅಗತ್ಯ ಸಿಬ್ಬಂದಿಯಿಲ್ಲದೆ ಸೊರಗುತ್ತಿವೆ ಹಾಗೂ 2021ರ ಫೆಬ್ರವರಿಯಲ್ಲಿ ನಡೆಯಬೇಕಿದ್ದ ಚುನಾವಣೆ ನಡೆಯದಿರುವುದರಿಂದ ಆಗಿರುವ ಸಮಸ್ಯೆಗಳ ಬಗ್ಗೆ ಸಿಎಜಿ ಆತಂಕ ವ್ಯಕ್ತಪಡಿಸಿದೆ. ಪಂಚಾಯತ್ರಾಜ್ ಸಂಸ್ಥೆಗಳ 2017-22ರ ಅವಧಿಗೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧನಾ ವರದಿ ನೀಡಿದ್ದು, ಅನಿರ್ಬಂಧಿತ ಅನುದಾನಗಳ ಹಂಚಿಕೆಯ ಶೇ.20ಕ್ಕೆ ಬದಲಾಗಿ ಶೇ.10 ರಿಂದ 18 ಇತ್ತು. ಹಾಗಾಗಿ ಸ್ಥಳೀಯ ಅಗತ್ಯಗಳು ಮತ್ತು ವಿವೇಚನಾ ಕಾರ್ಯಗಳಿಗೆ ಹಣ ಬಳಸುವಲ್ಲಿ ಪಂಚಾಯತ್ರಾಜ್ ಸಂಸ್ಥೆಗಳ ಸ್ವಾತಂತ್ರ್ಯವೇ ಮೊಟಕಾಗಿದೆ. 2019ರ ಆಗಸ್ಟ್ ರಿಂದ 2022ರ ಮಾರ್ಚ್ ಅವಧಿಯಲ್ಲಿ ಕೆಐಎಡಿಬಿ 19.65 ಕೋಟಿ ರೂ.ಗಳ ಆಸ್ತಿ ತೆರಿಗೆ ಸಂಗ್ರಹಿಸಿದ್ದು, ಇದನ್ನು ಗ್ರಾಪಂಗಳಿಗೆ ವರ್ಗಾವಣೆ ಮಾಡಿಲ್ಲ. ಕೆಐಎಡಿಬಿಗೆ ಆಸ್ತಿ ತೆರಿಗೆ ಸಂಗ್ರಹಿಸಲು ಕಾನೂನಿನಲ್ಲಿ ಅವಕಾಶವೇ ಇಲ್ಲವೆಂದು ಸಿಎಜಿ ವರದಿ ಹೇಳಿದೆ. ಸಿಬ್ಬಂದಿ ನೇಮಕದ ಅಧಿಕಾರವನ್ನು ಸರ್ಕಾರ ಹೊಂದಿದೆ. ಅದರ ಪರಿಣಾಮ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರವೇ ಇಲ್ಲವಾಗಿದೆ. ವಿವಿಧ ಹಂತದ ಅಧಿಕಾರಿಗಳ ಕೊರತೆ ಶೇ.25 ರಿಂದ 100 ಇದೆ. 851 ಗ್ರಾಪಂಗಳಲ್ಲಿ ಪಿಡಿಒಗಳಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಬಜೆಟ್ ಕೊರತೆ: ಸಾರ್ವಜನಿಕ ವೆಚ್ಚದ ಶೇ.15ರಿಂದ 20 ಶಿಕ್ಷಣಕ್ಕಾಗಿ ಹಂಚಿಕೆ ಮಾಡುವಂತೆ ವಿಷನ್ 2030 ಡಾಕ್ಯುಮೆಂಟ್ ಶಿಫಾರಸು ಮಾಡಿತ್ತು. ಆದರೆ ಸರ್ಕಾರವು ಶೇ.12 ಮತ್ತು ಜಿಎಸ್ಡಿಪಿಯ ಶೇ.2 ವ್ಯಯಿಸಿದೆ. ವಿಷನ್ ಡಾಕ್ಯುಮೆಂಟ್ ಪ್ರಕಾರ 14,527.91 ಕೋಟಿ ರೂ. ಅಗತ್ಯವಿದೆ. ಇದರಿಂದ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು ಸಾಧ್ಯ ಎಂದು ಹೇಳಿದ್ದರೂ ಹೆಚ್ಚುವರಿ ಸಂಪನ್ಮೂಲಗಳನ್ನು ಸಜ್ಜುಗೊಳಿಸುವ ತಂತ್ರಗಳನ್ನು ಖಚಿತಪಡಿಸಿಲ್ಲ.
ನ್ಯಾಯಬೆಲೆ ಅಂಗಡಿಗಳ ತಪಾಸಣೆ: ನ್ಯಾಯಬೆಲೆ ಅಂಗಡಿಗಳ ಕಾರ್ಯಾಚರಣೆಯನ್ನು ನಿಯಮಿತವಾಗಿ ಆಹಾರ ಇಲಾಖೆ ತಪಾಸಣೆ ನಡೆಸುವ ಅಗತ್ಯವಿದೆ ಎಂದು ಮಹಾ ಲೆಕ್ಕ ಪರಿಶೋಧಕರು ಸೂಚನೆ ನೀಡಿದ್ದಾರೆ. ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯಗಳ ಕೊರತೆ ಅಥವಾ ಹೆಚ್ಚುವರಿಯನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಾಗಿದ್ದಲ್ಲಿ ನ್ಯಾಯಬೆಲೆ ಅಂಗಡಿ ಪರವಾನಗಿಯನ್ನು ಮುಲಾಜಿಲ್ಲದೆ ರದ್ದು ಮಾಡಬೇಕು ಎಂದು ಶಿಫಾರಸು ಮಾಡಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ದಾಸ್ತಾನು ಬಗ್ಗೆ ಲೆಕ್ಕವಿಡುವುದಕ್ಕೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕು. ತೂಕದ ಯಂತ್ರಗಳ ಮಾಪನಾಂಕ ಮಾಡಿರುವ ಬಗ್ಗೆ ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ವರದಿಯಲ್ಲಿ ಹೇಳಿದೆ.
ಎಂಎಸ್ಐಎಲ್ ವಿರುದ್ಧ ಕ್ರಮ: ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಕಂಪನಿಯಲ್ಲಿ 2019-20ರ ಅವಧಿಯಲ್ಲಿ ನಿಷ್ಪಲ ವೆಚ್ಚ, ನದಿ ಮರಳು ಆಮದು ಮೇಲೆ ಮಾಡಿದ ಅನುತ್ಪಾದಕ, ಹೆಚ್ಚುವರಿ ವೆಚ್ಚಗಳು ಹಾಗೂ ಕರ್ನಾಟಕ ಭವನ ನಿರ್ವಣದ ಹೂಡಿಕೆ ವೆಚ್ಚ ಮತ್ತು ವರಮಾನದಲ್ಲಿ ಅಕ್ರಮಗಳಾಗಿದ್ದು, ಸಾರ್ವಜನಿಕ ಉದ್ದಿಮೆ ಸಮಿತಿಯು ಕ್ರಮಕ್ಕೆ ಸೂಚಿಸಿದೆ. ಸಾಬೂನು ಮಾರುಕಟ್ಟೆಯಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದರೂ ಹೊಸ ಉತ್ಪನ್ನಗಳನ್ನು ಪರಿಚಯಿಸುವ ನೆಪದಲ್ಲಿ ಖಾಸಗಿ ಕಂಪನಿಯಿಂದ ಉತ್ಪನ್ನ ಖರೀದಿಸಿರುವುದರಿಂದ ನಿಗಮಕ್ಕೆ ಲಕ್ಷಾಂತರ ರೂ. ಹಾನಿ ಆಗಿದೆ. ಎಂಎಸ್ಐಎಲ್ ಸಂಸ್ಥೆ ಕಾರ್ಯವ್ಯಾಪ್ತಿ ಬಿಟ್ಟು ಮರಳು ಸಾಗಾಣಿಕೆ ಕುರಿತು ಯೋಚಿಸಿದ್ದು ಮತ್ತು ಮರಳು ಆಮದಿನ ಮೇಲಿನ ಅನುತ್ಪಾದಕ ವೆಚ್ಚದ ಬಗ್ಗೆ ಉಲ್ಲೇಖಿಸಿರುವ ಸಮಿತಿ, ಮರಳು ಸಾಗಾಣಿಕೆಗೆ ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿದ ಸಂದರ್ಭದಲ್ಲಿ ಮಾರ್ಗ ಬದಲಾಯಿಸಲು ಕಂಪನಿ ತೀರ್ವನಿಸಿದ್ದು ಆಶ್ಚರ್ಯ ತಂದಿದೆ. ಆದಷ್ಟು ಬಗ್ಗೆ ಮರಳು ವಿಲೇವಾರಿ ಬಗ್ಗೆ ಕಂಪನಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದಿದೆ.
ವಾಷಿಂಗ್ ಮಷಿನ್ಗಾಗಿ ₹11 ಕೋಟಿ ನಷ್ಟ: ಮಾರುಕಟ್ಟೆ ದರಗಳನ್ನು ಪರಿಶೀಲಿಸದೆ ಹೆಚ್ಚುವರಿ ವೆಚ್ಚದಲ್ಲಿ ಕಿಯೋನಿಕ್ಸ್ ಮೂಲಕ ಅಲ್ಪಸಂಖ್ಯಾತ ಇಲಾಖೆಗೆ 270 ವಾಷಿಂಗ್ ಮಷಿನ್ ಮತ್ತು 82 ಚಪಾತಿ ಮಾಡುವ ಸಾಧನಗಳ ಖರೀದಿಯಿಂದ ಸರ್ಕಾರಕ್ಕೆ 11 ಕೋಟಿ ರೂ. ನಷ್ಟವಾಗಿದೆ ಎಂದು ಲೆಕ್ಕಪರಿಶೋಧನೆ ವರದಿಯಲ್ಲಿ ಬಹಿರಂಗಗೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಯಂತ್ರೋಪಕರಣಗಳ ದರಗಳು ಸ್ಪಷ್ಟವಾಗಿದ್ದರೂ ಹೆಚ್ಚುವರಿ ಬೆಲೆಗೆ ಖರೀದಿಸಲಾಗಿದೆ ಎಂದು ತಿಳಿಸಲಾಗಿದೆ ಮತ್ತು ಖರೀದಿದಾರರಿಂದ ಹೆಚ್ಚುವರಿ ಮೊತ್ತ ವಸೂಲಿ ಮಾಡುವುದು, ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ, ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸಾರ್ವಜನಿಕ ಉದ್ದಿಮೆ ಸಮಿತಿ ಶಿಫಾರಸು ಮಾಡಿದೆ.