ಮರಣ ಪ್ರಮಾಣ ಪತ್ರದಲ್ಲಿ ಉಜ್ವಲ ಭವಿಷ್ಯ ಸಿಗಲೆಂದು ಶುಭಕೋರಿದ ಗ್ರಾಮದ ಮುಖ್ಯಸ್ಥ!

Village Head'
Published on

ಲಖನೌ: ಈವರೆಗೂ ಮೃತ ವ್ಯಕ್ತಿಗೆ ಯಾರಾದರೂ ಪ್ರಜ್ವಲ ಭವಿಷ್ಯ ದೊರಕಲಿ ಎಂದು ಶುಭಕೋರಿದ್ದನ್ನು ಎಲ್ಲಾದರೂ ಕೇಳಿದ್ದೀರಾ? ಆದರೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಗ್ರಾಮವೊಂದರಲ್ಲಿ ಈ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಗ್ರಾಮದ ಮುಖ್ಯಸ್ಥರೊಬ್ಬರು ಕಳೆದ ತಿಂಗಳು ಮೃತಪಟ್ಟ ವ್ಯಕ್ತಿಯ ಹೆಸರಲ್ಲಿ ನೀಡಿದ ಮರಣ ಪ್ರಮಾಣ ಪತ್ರದಲ್ಲಿ ಪ್ರಜ್ವಲ ಭವಿಷ್ಯ ದೊರಕಲಿ ಎಂದು ಶುಭಕೋರಿರುವುದು ಚರ್ಚೆಗೆ ಗ್ರಾಸವಾಗಿದೆ.

ಈ ಪ್ರಸಂಗ ಉನ್ನಾವೋ ಜಿಲ್ಲೆಯ ಸಿರವಾರಿಯಾ ಗ್ರಾಮದ ಅಸೊಹಾ ಬ್ಲಾಕ್​ನಲ್ಲಿ ಜರುಗಿದೆ. ಇಲ್ಲಿನ ನಿವಾಸಿ ಲಕ್ಷ್ಮಿ ಶಂಕರ್​ ದೀರ್ಘಕಾಲದ ಅನಾರೋಗ್ಯದಿಂದಾಗಿ ಕಳೆದ ಜನವರಿ 22ರಂದು ಮರಣ ಹೊಂದಿದ್ದ. ಹೀಗಾಗಿ ಮರಣ ಪ್ರಮಾಣ ಪತ್ರಕ್ಕಾಗಿ ಗ್ರಾಮದ ಮುಖ್ಯಸ್ಥ ಬಬೂಲ್ ಅವರಿಗೆ ಮೃತನ ಮಗ ಮನವಿ ಮಾಡಿದ್ದ. ಹಣದ ವ್ಯವಹಾರಕ್ಕಾಗಿ ಪ್ರಮಾಣ ಪತ್ರವನ್ನು ಕೇಳಿದ್ದ.​

ಬಳಿಕ ಬಬೂಲ್​ ಮರಣ ಪ್ರಮಾಣ ಪತ್ರವನ್ನು ವಿತರಿಸಿದ್ದಾರೆ. ಅಲ್ಲದೆ, ಪ್ರಮಾಣ ಪತ್ರದಲ್ಲಿ ಉಜ್ವಲ ಭವಿಷ್ಯ ದೊರಕಲಿ ಎಂದು ಶುಭಕೋರಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. "ಆತನಿಗೆ ಉಜ್ವಲ ಭವಿಷ್ಯ ಸಿಗಲೆಂದು ನಾನು ಬಯಸುತ್ತೇನೆ" ಎಂದು ಪ್ರಮಾಣ ಪತ್ರದಲ್ಲಿ ಬರೆಯಲಾಗಿತ್ತು.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಮರಣ ಪ್ರಮಾಣ ಪತ್ರ ಸಿಕ್ಕಾಪಟ್ಟೆ ಸದ್ದು ಮಾಡಿದೆ. ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತ ಗ್ರಾಮದ ಮುಖ್ಯದ್ಥ ಕ್ಷಮೆಯಾಚಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net