

ನವದೆಹಲಿ: ಅಮೆರಿಕದ ಇದಾಹೋ ರಾಜ್ಯದಲ್ಲಿ ಸೋಮವಾರ ಬೆಳಗ್ಗೆ ಆಕಾಶದಲ್ಲಿ ಹಾರಾಡುತ್ತಿದ್ದಾಗಲೇ ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಇದಾಹೋದ ಕೋವರ್ ದಿ ಅಲೇನ್ ಸರೋವರದ ಮೇಲೆ ಈ ಅಪಘಾತ ಸಂಭವಿಸಿದ್ದು, ವಿಮಾನದ ಅವಶೇಷಗಳು ಸರೋವರದೊಳಗೆ ಬಿದ್ದಿವೆ. ಒಟ್ಟು 8 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸ್ಥಳೀಯ ಪೊಲಿಸರು ಈ ವಿಷಯವನ್ನು ಖಚಿತಪಡಿಸಿದ್ದಾರೆ. ಎರಡು ವಿಮಾನಗಳ ಪೈಕಿ ಒಂದು ವಿಮಾನದ ಗುರುತು ಪತ್ತೆಯಾಗಿದ್ದು, ಅದು ಸೆಸ್ನಾದಲ್ಲಿ ತಯಾರಾಗಿದ್ದು ಎನ್ನಲಾಗಿದೆ. ಇನ್ನೊಂದು ವಿಮಾನದ ಗುರುತು ಪತ್ತೆ ಮಾಡಬೇಕಿದೆ.
ಅಪಘಾತಕ್ಕೆ ಕಾರಣ ಏನೆಂಬುದು ತಕ್ಷಣವೇ ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯಕ್ಕೆ ಇಬ್ಬರು ಶವಗಳನ್ನು ಮೇಲಕ್ಕೆ ತೆಗೆಯಲಾಗಿದೆ. ಇನ್ನೂ ಆರು ಮಂದಿಯ ಶವಕ್ಕಾಗಿ ಹುಡುಕಾಟ ನಡೆದಿದೆ. ಆದರೆ ಎರಡೂ ವಿಮಾನದಲ್ಲಿ ಹೆಚ್ಚಿನ ಪ್ರಯಾಣಿಕರು ಇದ್ದರು ಎನ್ನಲಾಗುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.