

ನೈಸರ್ಗಿಕ ವಿಕೋಪಗಳ ವಿರುದ್ಧ ಸರ್ಕಾರಗಳು, ಜನರು ಆಗಾಗ ಸಂಘರ್ಷ ಮಾಡುತ್ತಲೇ ಬಂದಿದ್ದಾರೆ. ಆದರೆ, ಕರೊನಾ ಸೋಂಕಿನ ಸಂಕಟ ಹೊಸದು ಮತ್ತು ಅಷ್ಟೇ ತೀವ್ರ ಸ್ವರೂಪದ್ದು. ಏಕಾಏಕಿಯಾಗಿ ಬಂದು ಎರಗಿದ ಈ ಕಾಯಿಲೆ ವಿರುದ್ಧ ಹೋರಾಡುವುದು ಹೇಗೆ, ತಕ್ಷಣದ ಪರಿಹಾರ ಏನು ಎಂಬ ಬಗ್ಗೆ ಈಗಲೂ ಯಾರಿಗೂ ಸ್ಪಷ್ಟತೆ ಇಲ್ಲ. ಆದರೂ, ಒಂದಷ್ಟು ದಾರಿ ಕಂಡುಕೊಂಡು ಸೋಂಕಿನ ವಿರುದ್ಧ ಸಮರ ಸಾರಲಾಗಿದೆ. ಭಾರತ 130 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ದೇಶ. ಹಾಗಾಗಿ, ಉಳಿದ ಸಣ್ಣಪುಟ್ಟ ರಾಷ್ಟ್ರಗಳಿಗಿಂತಲೂ ಇಲ್ಲಿ ಕರೊನಾ ವಿರುದ್ಧದ ಸಂಘರ್ಷ ಹೆಚ್ಚು ಸವಾಲಿನಿಂದ ಕೂಡಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಾಗಿಯೇ, ಕೇಂದ್ರ ಸರ್ಕಾರ ಮತ್ತು ಎಲ್ಲ ರಾಜ್ಯ ಸರ್ಕಾರಗಳು ಪರಿಣಾಮಕಾರಿ ಕ್ರಮ ಕೈಗೊಂಡು, ಲಾಕ್ಡೌನ್ ಅನ್ನು ಬಿಗಿಗೊಳಿಸಿವೆ. ಹೀಗಿರುವಾಗ, ಎರಡನೇ ಹಂತದ ಲಾಕ್ಡೌನ್ ಆರಂಭವಾದ ಬಳಿಕ (ಏಪ್ರಿಲ್ 15-ಮೇ 3) ಕೇಂದ್ರ ಸರ್ಕಾರ ಸ್ಪಷ್ಟ ಮಾರ್ಗಸೂಚಿ ರೂಪಿಸಿ ಅದನ್ನು ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೂ ಕಳುಹಿಸಿಕೊಟ್ಟು, ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸೂಚಿಸಿದೆ.
ಯಾವೆಲ್ಲ ತುರ್ತು ಸೇವೆಗಳು ಇರುತ್ತವೆ, ಯಾವುದನ್ನೆಲ್ಲ ಮುಚ್ಚಬೇಕು ಎಂಬ ಸ್ಪಷ್ಟ ನಿರ್ದೇಶನ ಇದರಲ್ಲಿದೆ. ಆದರೂ, ಕೆಲ ರಾಜ್ಯಗಳು ಕೇಂದ್ರದ ಮಾರ್ಗಸೂಚಿಯನ್ನು ಮೀರಿ, ಲಾಕ್ಡೌನ್ ಸಡಿಲಿಸಿದ್ದು, ಜನಸಂಚಾರಕ್ಕೆ ಅನುವು ಮಾಡಿ ಕೊಟ್ಟಿವೆ. ದೇಶಾದ್ಯಂತ ಕರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹೊತ್ತಲ್ಲಿ, ಇಂಥ ಕ್ರಮಗಳು ಅಪಾಯವನ್ನು ತಂದೊಡ್ಡಬಲ್ಲವು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಕೇರಳ ದಿಗ್ಬಂಧನವನ್ನು ಸಡಿಲಿಸಿದ್ದು, ಕೆಲ ವಲಯಕ್ಕೆ ವ್ಯಾಪಾರದ ಅನುಮತಿ ನೀಡಿದೆ. ಹಾಗೆಂದ ಮಾತ್ರಕ್ಕೆ ಕೇರಳ ಕರೊನಾ ಸೋಂಕು ಪ್ರಕರಣಗಳಿಂದ ಮುಕ್ತವಾಗಿದೆ ಎಂದೇನಲ್ಲ. ಹಾಗಾಗಿಯೇ, ಕೇಂದ್ರವು ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕರ್ನಾಟಕದಲ್ಲೂ ದಿಗ್ಬಂಧನ ಸಡಿಲಿಸುವ ನಿರ್ಣಯವನ್ನು ಸರ್ಕಾರ ಪ್ರಕಟಿಸಿತ್ತಾದರೂ, ಮತ್ತೆ ಪರಿಸ್ಥಿತಿಯನ್ನು ಅವಲೋಕಿಸಿ ಕೇಂದ್ರದ ಮಾರ್ಗಸೂಚಿಯನ್ವಯವೇ ನಡೆದುಕೊಳ್ಳಲು ನಿರ್ಧರಿಸಿತು. ಆದ್ದರಿಂದ, ಲಾಕ್ಡೌನ್ನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ, ಆ ಸಂಖ್ಯೆಯನ್ನು ಮುಚ್ಚಿಡಲಾಗುತ್ತಿದೆ ಎಂಬ ಗುಮಾನಿ ಇದೆ. ವಾಸ್ತವ ಅರಿಯಲು ಕೇಂದ್ರದ ತಂಡ ಆ ರಾಜ್ಯಕ್ಕೆ ಭೇಟಿ ನೀಡುತ್ತಿರುವುದನ್ನು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ವಿರೋಧಿಸಿದೆ.
ಇಡೀ ಒಕ್ಕೂಟ ವ್ಯವಸ್ಥೆ ಸಮನ್ವಯದಿಂದ ಸಾಗಬೇಕಾದ ಹೊತ್ತು ಇದಾಗಿದೆ. ಇದು ಬಹುದೊಡ್ಡ ಮಾನವೀಯ ಸಂಕಟದ ಸಮಯ. ಹಾಗಾಗಿ, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ, ಅದನ್ನೆಲ್ಲ ಮೀರಿ ನಿಂತು ಒಟ್ಟಾಗಿ ಸಾಗಬೇಕು. ಕೇಂದ್ರ ನೀಡಿರುವ ಮಾರ್ಗಸೂಚಿಯನ್ನು ಚಾಚೂ ತಪ್ಪದೆ ಪಾಲಿಸಬೇಕು. ಇಲ್ಲದಿದ್ದರೆ, ರಾಜ್ಯಗಳು ಅವುಗಳದ್ದೇ ಹಾದಿ ಹಿಡಿದರೆ ಪರಿಸ್ಥಿತಿಯೇ ಕೈಮೀರಿ ಹೋಗುತ್ತದೆ. ಹಾಗೇನಾದರೂ ಆದರೆ ಮತ್ತೆ ನಿಯಂತ್ರಣಕ್ಕೆ ತರಲು ತುಂಬ ಕಷ್ಟ ಪಡಬೇಕಾಗುತ್ತದೆ. ಅಲ್ಲದೆ, ಭಾರತದ ಒಕ್ಕೂಟ ವ್ಯವಸ್ಥೆ ಶಕ್ತಿಶಾಲಿಯಾಗಿದ್ದು, ಹಲವು ಸಮರ್ಥ ಮಾದರಿಗಳನ್ನು ನಿರ್ವಿುಸಿದೆ. ಈ ಸಂದರ್ಭದಲ್ಲೂ ಅಂಥ ಐಕ್ಯತೆ ತೋರಬೇಕಿದ್ದು, ಕರೊನಾ ವಿರುದ್ಧದ ನಿರ್ಣಾಯಕ ಹೋರಾಟದಲ್ಲಿ ಅಂತಿಮ ವಿಜಯ ಕಾಣಬೇಕಿದೆ.