_1774203602033.webp?w=480&auto=format%2Ccompress&fit=max)
_1774203602033.webp?w=480&auto=format%2Ccompress&fit=max)
ಪದ್ಮಮಹಾರಾಜನು ಯುದ್ಧದಲ್ಲಿ ಮರಣ ಹೊಂದಿದ. ಲೀಲಾ ಮಹಾರಾಣಿಯು ತನ್ನ ಪತಿಯಾದ ಆತನನ್ನು ಪುನಃ ತಾನು ಪಡೆಯಬೇಕೆಂದು ಶ್ರೀದೇವಿಯಲ್ಲಿ ಪ್ರಾರ್ಥಿಸಿಕೊಂಡಳು. ಅವಳ ಉಪಾಸ್ಯ ದೇವತೆಯಾದ ಶ್ರೀದೇವಿಯು ಅದಕ್ಕೆ ಅನುಗ್ರಹಿಸಿದಳು. ಶ್ರೀದೇವಿಯ ಆದೇಶದಂತೆ ಪದ್ಮಮಹಾರಾಜನ ಶರೀರವನ್ನು ಪುಷ್ಪಮಂಚದ ಮೇಲೆ ಇಟ್ಟು ಪುಷ್ಪಗಳಿಂದ ಆಚ್ಛಾದಿಸಲಾಯಿತು. ಅಂತಃಪುರ ಮಂಟಪದಲ್ಲಿ ಆ ಶರೀರವು ಇನ್ನೂ ಹಾಗೆಯೇ ಇದೆ. ಶ್ರೀದೇವಿಯ ಅನುಗ್ರಹದಿಂದ ನಿರ್ವಿಕಲ್ಪ ಸಮಾಧಿಯನ್ನು ಪಡೆದ ಲೀಲಾ ಮಹಾರಾಣಿಯು ತನ್ನ ಸ್ಥೂಲ ಶರೀರವನ್ನು ಬಿಟ್ಟು (ಸ್ಥೂಲ ಶರೀರ ಅಭಿಮಾನವನ್ನು ಬಿಟ್ಟು) ಅನೇಕ ದಿವ್ಯ ಅನುಭವಗಳನ್ನು ಪಡೆದಳು. ಇದೇ ದಂಪತಿಗಳ ಹಿಂದಿನ ಜನ್ಮ ಆಗಿ ಹೋದ ಸ್ಥಳಕ್ಕೂ ಹೋಗಿ ಬಂದಳು. ಅಂದರೆ ತನ್ನ ಪೂರ್ವಜನ್ಮ ಘಟಿಸಿದ ಪ್ರದೇಶಕ್ಕೂ ಸೂಕ್ಷ್ಮ ಶರೀರದ ಮೂಲಕವೇ ಶ್ರೀದೇವಿಯ ಜತೆಯಲ್ಲಿ ಹೋಗಿ ಬಂದಳು. ನಂತರ ಲೋಕಾಂತರಗಳನ್ನೆಲ್ಲ ನೋಡುತ್ತಾ ಬ್ರಹ್ಮಾಂಡದ ಆಚೆಗೂ ಹೋಗಿ ಬಂದಳು. ಅಲ್ಲದೆ ತನ್ನ ಹಿಂದಿನ ಅನೇಕ ಜನ್ಮಗಳನ್ನು ಕೂಡ ನೋಡುತ್ತಿರುವ ಹಾಗೆಯೇ ನೆನಪಿಸಿಕೊಂಡಳು. ಪದ್ಮ ಮಹಾರಾಜನು ಮರಣಾನಂತರ ಪಡೆದಿರುವ ಮುಂದಿನ ಜನ್ಮವನ್ನು ನೋಡುವ ಕುತೂಹಲ ಅವಳಿಗೆ ಉಂಟಾಯಿತು.
ಶ್ರೀದೇವಿಯ ಅನುಗ್ರಹದಿಂದ ಸೂಕ್ಷ್ಮಾವಸ್ಥೆಯಲ್ಲಿ ಇರುವಾಗಲೇ ಅವಳಿಗೆ ಇದು ಸಾಧ್ಯವಾಯಿತು. ಪದ್ಮ ಮಹಾರಾಜನು ಮುಂದಿನ ಜನ್ಮದಲ್ಲಿ ಭರತಖಂಡದಲ್ಲಿ ವಿದೂರಥನೆಂಬ ಚಕ್ರವರ್ತಿಯಾಗಿದ್ದಾನೆ. ಅವನ ರಾಜಧಾನಿಗೆ ಇವರಿಬ್ಬರು ಸೂಕ್ಷ್ಮ ರೂಪದಿಂದ ಹೋದ ವೇಳೆಗೆ ಒಂದು ದೊಡ್ಡ ಯುದ್ಧ ಅಲ್ಲಿ ನಡೆದಿತ್ತು. ವಿದೂರಥನ ಸಾಮಂತ ರಾಜರಲ್ಲಿಯೇ ಕೆಲವರು ಅವನ ವಿರುದ್ಧ ಸಿಡಿದೆದ್ದಿದ್ದರಿಂದ ಯುದ್ಧ ನಡೆಯುತ್ತಿತ್ತು. ಬೆಳಗಿನಿಂದ ಸಂಜೆಯವರೆಗೆ ಘೊರ ಯುದ್ಧ ನಡೆದರೂ ಯಾವ ಪಕ್ಷದವರೂ ಗೆಲ್ಲಲು ಸಾಧ್ಯವಾಗಲಿಲ್ಲ. ಆದ್ದರಿಂದ ಸಂಜೆ ವೇಳೆಗೆ ಯುದ್ಧ ನಿಲ್ಲಿಸಬೇಕೆಂಬ ನಿರ್ಣಯಕ್ಕೆ ಎರಡೂ ಪಕ್ಷದವರು ಬಂದಿದ್ದರು. ಯುದ್ಧ ಮುಗಿದು ರಾತ್ರಿ ವಿದೂರಥನು ತನ್ನ ಅಂತಃಪುರದಲ್ಲಿ ವಿಶ್ರಾಂತಿಗೆ ಹೋದ ವೇಳೆಯಲ್ಲಿ ಈ ಇಬ್ಬರು ಸೂಕ್ಷ್ಮಶರೀರಿಗಳು ಮುಚ್ಚಿದ ಕಿಟಕಿಯ ರಂಧ್ರದ ಮೂಲಕವೇ ಒಳಗೆ ಪ್ರವೇಶಿಸಿದರು.
ಸೂಕ್ಷ್ಮ ಶರೀರದ ಮೂಲಕ ಪ್ರವೇಶಿಸಿದರು. ಸೂಕ್ಷ್ಮಶರೀರವೇ ಆತಿವಾಹಿಕ ಶರೀರ. ಆತಿವಾಹಿಕ ಶರೀರದ ಬಗ್ಗೆ ಈ ಹಂತದಲ್ಲಿ ಶ್ರೀರಾಮನು ಕೆಲವು ಪ್ರಶ್ನೆಗಳನ್ನು ಕೇಳಿದನು. ಅವನ ಪ್ರಶ್ನೆಗಳಿಗೆ ಕೊಡುತ್ತಿರುವ ಉತ್ತರ ಈಗ ಮುಕ್ತಾಯ ಹಂತದಲ್ಲಿದೆ.‘ಶ್ರೀರಾಮ! ಜೀವಾತ್ಮನು ತನ್ನ ಸೂಕ್ಷ್ಮ ಶರೀರದ ಮುಖ್ಯ ಭಾಗವಾಗಿರುವ ಮನಸ್ಸಿನಿಂದ ಮನನ ಮಾಡುತ್ತಿರುವುದ ರಿಂದ ಈ ಜಗತ್ತು ತೋರಿಕೊಂಡಿದೆ. ಪರಬ್ರಹ್ಮವೆಂಬ ಚಿದಾಕಾಶದಲ್ಲಿಯೇ ಈ ಜಗತ್ತು ತೋರಿ ಕೊಂಡಿದೆ. ಆ ಚಿದಾಕಾಶಕ್ಕೆ ಸೇರಿದ ಅನಾದಿ ಮಾಯೆ ಎಂಬ ಮಾಯಾಕಾಶದಲ್ಲಿ ಈ ಜಗತ್ತು ತೋರಿಕೊಂಡಿದೆ. (ವೇದಾಂತದಲ್ಲಿ ಪರಬ್ರಹ್ಮವನ್ನು, ಮಾಯೆಯನ್ನು ಮತ್ತು ಪಂಚ ಮಹಾ ಭೂತ ಗಳಲ್ಲಿ ಒಂದಾಗಿರುವ ಭೂತಾಕಾಶವನ್ನು - ಈ ಮೂರನ್ನು ಹೇಳಲು ಆಕಾಶ ಶಬ್ದವು ಬಳಕೆಯಾಗುತ್ತದೆ. ಕೆಲವು ಕಡೆ ಚಿತ್ತವನ್ನು ಆಕಾಶ ಶಬ್ದದಿಂದ ಹೇಳುವುದು ಉಂಟು.) ಆ ಮಾಯಾಕಾಶದಲ್ಲಿರುವ ಸೂಕ್ಷ್ಮ ಭೂತಗಳಿಂದಾದ ಚಿತ್ತವೆಂಬ ಆಕಾಶದಲ್ಲಿ ಜೀವಭಾವದ ಮೂಲಕ ಈ ನಾಮರೂಪಾತ್ಮಕವಾದ ಜಗತ್ತು ತೋರಿಕೊಂಡಿದೆ. ಜೀವಭಾವದ ಮೂಲಕ ಬಂದ ಸ್ಪುರಣೆಯೇ ನಾಮ ರೂಪಗಳ ಮೂಲಕ ಅನೇಕ ಬಗೆಯಾಗಿ ತೋರುತ್ತಿರುವ ಜಗತ್ತು. ಐಂದ್ರಜಾಲಿಕನು ಪ್ರಯೋಗಿಸುವ ಮಣಿಯಲ್ಲಿ (ಮಣಿಯೊಳಗಿರುವ ಆಕಾಶದಲ್ಲಿ) ಅನೇಕ ಪ್ರಕಾರದ ಗಂಧರ್ವ ನಗರಗಳು ತೋರಿಕೊಳ್ಳುತ್ತವೆ. ಅವನ ಮಣಿಯೊಳಗಿರುವ ಆಕಾಶವೇ ಸತ್ಯ. ಹಾಗೆಯೇ ಆ ಪರಬ್ರಹ್ಮವೆಂಬ ಚಿದಾಕಾಶವೇ ಪರಮಾರ್ಥ, ಕಟ್ಟಕಡೆಯ ಸತ್ಯ.’‘ಇಷ್ಟರವರೆಗೆ ಹೇಳಿದ್ದನ್ನು ಸಾರವಾಗಿ ಇನ್ನೊಮ್ಮೆ ಹೇಳುತ್ತೇನೆ. ಇಲ್ಲಿ ಪರಮ ಅಮೃತ ಸ್ವರೂಪವಾದ ಪರಬ್ರಹ್ಮ ಒಂದೇ ಪರಮಾರ್ಥ ಸತ್ಯವಾಗಿದೆ.
ಜಗತ್ತೆಂಬ ಶಬ್ದದಿಂದ ಹೇಳಲ್ಪಟ್ಟ ದೃಶ್ಯ ಪ್ರಪಂಚಕ್ಕೆ ಆ ಪರಬ್ರಹ್ಮವೇ ಅಧಿಷ್ಠಾನ. ಅದರ ಇರುವಿಕೆಯೇ ಜಗತ್ತಿನ ಇರುವಿಕೆ. ಆ ಪರಬ್ರಹ್ಮವು ‘ನಾನು’ ಎಂಬ ಶಬ್ದದಿಂದ ಹೇಳಲ್ಪಟ್ಟಿರುವ ಸಾಕ್ಷಿ ಚೇತನನೇ ಆಗಿದ್ದಾನೆ. ಈ ದೃಶ್ಯ ಜಗತ್ತಾದರೋ ಆ ಸಾಕ್ಷಿ ಚೇತನನಿಗೆ ವಿಷಯವಾಗಿರುವುದರಿಂದ ದೃಶ್ಯ ಜಗತ್ತನ್ನು ‘ನಾನು’ ಶಬ್ದಕ್ಕೆ ವಿರುದ್ಧ ಶಬ್ದವಾಗಿರುವ ‘ನೀನು’ ಎಂಬ ಶಬ್ದದಿಂದ ಹೇಳಬೇಕಾಗುತ್ತದೆ. ಆ ‘ನೀನು’ ಎಂಬ ಶಬ್ದಕ್ಕೆ ಯೋಗ್ಯವಾಗಿರುವ ಜಗತ್ತಿನ ಇರುವಿಕೆ ಆರೋಪಿತವಾದ ಇರುವಿಕೆ. ಆದ್ದರಿಂದ ‘ನೀನು’ ಎಂಬ ಶಬ್ದಕ್ಕೆ ಯೋಗ್ಯವಾಗಿರುವ ಜಗತ್ತು ಪರಮಾರ್ಥತಃ ಇಲ್ಲವೇ ಇಲ್ಲ. ಅಲ್ಲದೆ ಆ ‘ನಾನು’ ಎಂಬ ಸಾಕ್ಷಿ ಚೇತನನು ಚೈತನ್ಯಮಾತ್ರಸ್ವರೂಪನು. ಅವನಿಗೆ ಕಟ್ಟಿಕೊಂಡಿರುವ ಜೀವಸ್ವಭಾವ ಪರಮಾರ್ಥ ಸತ್ಯವಲ್ಲ. ಚಿನ್ಮಾತ್ರ ಸ್ವರೂಪವೇ ಪರಮಾರ್ಥ ಸತ್ಯ. ಆದ್ದರಿಂದ ಪರಮಾರ್ಥತಃ ಜೀವಸ್ವಭಾವವು ಇಲ್ಲವೇ ಇಲ್ಲ. ಯಾಕೆಂದರೆ ಜೀವಸ್ವಭಾವವು, ಸಾಕ್ಷಿಚೈತನ್ಯಕ್ಕಿಂತ ಬೇರೆಯಾಗಿದ್ದು ಅವನ ನೋಡುವಿಕೆಗೆ ವಿಷಯವಾಗಿರುವುದರಿಂದ, ‘ನಾನು’ ಶಬ್ದಕ್ಕೆ ವಿರುದ್ಧ ಶಬ್ದವಾಗಿರುವ ‘ನೀನು’ ಎಂಬ ಶಬ್ದದಿಂದ ಹೇಳಲ್ಪಡಲು ಯೋಗ್ಯವಾಗಿದೆ.’
‘ಹೀಗಾಗಿ ಲೀಲಾ ಮಹಾರಾಣಿ ಮತ್ತು ಸರಸ್ವತೀ ದೇವಿ ಇಬ್ಬರೂ ಆತಿವಾಹಿಕ ಶರೀರಧಾರಿಗಳಾಗಿ ವಿದೂರಥನ ಅಂತಃಪುರದೊಳಗೆ ಸೂಕ್ಷ್ಮ ರಂಧ್ರದ ಮೂಲಕ ಪ್ರವೇಶಿಸಿದರು. ಅವರಿಬ್ಬರಿಗೂ ಈಗ ಸತ್ಯಸಂಕಲ್ಪದಿಂದ ನಿಂತಿರುವ ಚಿತ್ತವೆಂಬ ಆಕಾಶದಂತಹ ಶರೀರವಿದೆ. ಪರಮಾತ್ಮನಂತೆ ಪುಣ್ಯಮಯ ಸ್ವಚ್ಛ ಸ್ವರೂಪ ಉಳ್ಳವರಾಗಿದ್ದಾರೆ. ಆದ್ದರಿಂದ ಅತ್ಯಂತ ಸೂಕ್ಷ್ಮವಾದ ರಂಧ್ರದಲ್ಲಿಯೂ ಪ್ರವೇಶಿಸಲು ಅವರಿಗೆ ಯಾವುದೇ ಅಡೆತಡೆಯಿರುವುದಿಲ್ಲ.’