ಹಟ್ಟಿಯಲ್ಲಿ ರಸ್ತೆಗಳಲ್ಲಿಯೇ ಬಿಡಾಡಿ ದನಗಳ ಬಿಡಾರ

Hutti Street Cattels
ಹಟ್ಟಿಯಲ್ಲಿ ರಸ್ತೆಗಳ ಮಧ್ಯೆ ಬಿಡಾಡಿ ದನಗಳು ನಿಂತಿರುವುದು.
Published on

ಹಟ್ಟಿಚಿನ್ನದಗಣಿ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಮಿತಿ ಮೀರಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ವಿಶೇಷವಾಗಿ ಬೆಳಗ್ಗೆ, ಸಂಜೆ ಸಮಯದಲ್ಲಿ ದನಗಳು ಗುಂಪುಗೂಡಿ ರಸ್ತೆ ಮಧ್ಯೆ ಠಿಕಾಣಿ ಹೂಡುವುದರಿಂದ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಇದರಿಂದ ಶಾಲಾ-ಕಾಲೇಜು ಮಕ್ಕಳಿಂದ ಹಿಡಿದು ತುರ್ತು ಕಾರ್ಯನಿಮಿತ್ತ ತೆರಳುವವರಿಗೆ ತೊಂದರೆ ಉಂಟಾಗಿದೆ. ಈ ಕುರಿತು ನಾಗರಿಕರು ಹಲವು ಸಲ ಹಟ್ಟಿ ಪಟ್ಟಣ ಪಂಚಾಯಿತಿಗೆ ದೂರು ಸಲ್ಲಿಸಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪವಿದೆ.

ರಸ್ತೆಗಳಲ್ಲಿ ಬಿಡಾಡಿ ದನಗಳು ತಿರುಗಾಡುವುದರಿಂದ ಜನರಿಗೆ ಸುರಕ್ಷತೆ ಇಲ್ಲವಾಗಿದೆ. ತುರ್ತು ಸಮಯದಲ್ಲಿ ಆಂಬುಲೆನ್ಸ್‌ಗಳು ಸಮಯಕ್ಕೆ ಸರಿಯಾಗಿ ತಲುಪದ ಪರಿಸ್ಥಿತಿ ಉಂಟಾಗಿದೆ. ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಮತ್ತು ಹಿರಿಯರು, ವಾಹನ ಸವಾರರು, ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಏನಾದರೂ ಅನಾಹುತ ನಡೆದರೆ ಯಾರು ಹೊಣೆ ಎಂಬ ಪ್ರಶ್ನೆ ಮೂಡಿದೆ.

ತಕ್ಷಣವೇ ಬಿಡಾಡಿ ದನಗಳ ನಿಯಂತ್ರಣಕ್ಕೆ ವಿಶೇಷ ತಂಡ ರಚಿಸಿ, ಸುಗಮ ಸಂಚಾರಕ್ಕೆ ಪಟ್ಟಣ ಪಂಚಾಯಿತಿ ಅನುಕೂಲ ಮಾಡಿಕೊಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಈಗಾಗಲೇ ದನಗಳ ಮಾಲಿಕರಿಗೆ ಸಾಕಷ್ಟು ಬಾರಿ ಸೂಚನೆ ನೀಡಲಾಗಿದೆ. ಆದರೂ ಅವರು ಕೇಳುತ್ತಿಲ್ಲ. ಆದ್ದರಿಂದ ಆದಷ್ಟು ಬೇಗ ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಬಿಡಲಾಗುವುದು. | ಜಗನ್ನಾಥ ಜೋಶಿ ಮುಖ್ಯಾಧಿಕಾರಿ, ಹಟ್ಟಿ ಪಪಂ ರಸ್ತೆ ಮೇಲೆ ಓಡಾಡುವ ಬಿಡಾಡಿ ದನಗಳಿಂದ ಅಪಾಯವಿದ್ದು, ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಪಪಂಗೆ ಹಲವು ಸಲ ಮನವಿ ಸಲ್ಲಿಸಿದ್ದೇವೆ. ತಕ್ಷಣ ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಾವೇ ಬಿಡಾಡಿ ದನಗಳನ್ನು ಗೋಶಾಲೆಗೆ ಒಪ್ಪಿಸುತ್ತೇವೆ. ರಘುಗೌಡ | ಶ್ರೀರಾಮಸೇನೆ ತಾಲೂಕಾಧ್ಯಕ್ಷ, ಹಟ್ಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net