

ನವದೆಹಲಿ: ಕರೊನಾ ಸೋಂಕು ನಿಯಂತ್ರಣಕ್ಕೆ ನೂರಾರು ದೇಶಗಳು ಇನ್ನಿಲ್ಲದಂತೆ ಶ್ರಮ ವಹಿಸುತ್ತಿವೆ. ಇದರ ನಡುವೆಯೇ, ನಿರ್ಬಂಧಗಳನ್ನು ಸಡಿಲಿಸಿ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ಕರೊನಾದಿಂದಾಗಿ ಜಗತ್ತಿನಾದ್ಯಂತ ಶೈಕ್ಷಣಿಕ ಚಟುವಟಿಕೆಗಳಿಗೆ ಭಾರಿ ಹಿನ್ನಡೆಯಾಗಿದೆ. ಈ ಕಾರಣಕ್ಕಾಗಿಯೇ ಸ್ಪೇನ್ನಲ್ಲಿ ಮುಂದಿನ ತಿಂಗಳು (ಸೆಪ್ಟಂಬರ್) ಶಾಲಾ- ಕಾಲೇಜುಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಶಾಲಾರಂಭದ ಬಗ್ಗೆ ಈ ಹಿಂದೆ ಮಾಹಿತಿ ನೀಡಲಾಗಿತ್ತು. ಆದರೆ, ಮ್ಯಾಡ್ರಿಡ್ ಹಾಗೂ ಇತರೆಡೆಗಳಲ್ಲಿ ತಕ್ಕ ಸಿದ್ಧತೆಗಳನ್ನು ಕೈಗೊಳ್ಳಲಾಗಿಲ್ಲ ಎಂಬ ಆಕ್ರೋಶವೂ ಸ್ಥಳೀಯರಲ್ಲಿ ವ್ಯಕ್ತವಾಗಿದೆ.
ಈ ನಡುವೆ ಹೆಚ್ಚುತ್ತಿರುವ ಕರೊನಾ ಸೋಂಕಿತರ ಸಂಖ್ಯೆ ಆತಂಕಕ್ಕೂ ಕಾರಣವಾಗಿದೆ. ಸ್ಪೇನ್ನಲ್ಲಿ ಸದ್ಯ ಒಟ್ಟು ಪ್ರಕರಣಗಳ ಸಂಖ್ಯೆ 4 ಲಕ್ಷ ದಾಟಿದೆ. ಕಳೆದ ಮೂರು ದಿನಗಳಲ್ಲಿ ಒಟ್ಟು 19,000ಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮೃತರ ಸಂಖ್ಯೆ 28,838ಕ್ಕೆ ಏರಿಕೆಯಾಗಿದೆ.
ಸ್ಪೇನ್ನಲ್ಲಿ ಕರೊನಾ ಸಮುದಾಯಕ್ಕೆ ವ್ಯಾಪಿಸಿದೆ. ಸೋಂಕಿನ ಮೂಲವೇ ಗೊತ್ತಾಗುತ್ತಿಲ್ಲ. ಹೀಗಾಗಿ ನಿಯಂತ್ರಣ ಸವಾಲಾಗಿ ಪರಿಣಮಿಸಿದೆ ಎಂದು ಕೋವಿಡ್ ಉಸ್ತುವಾರಿ ಡಾ.ಫರ್ನಾಂಡೋ ಸೈಮನ್ ತಿಳಿಸಿದ್ದಾರೆ. ಜತೆಗೆ ಶಾಲಾರಂಭವಾದರೆ ಸೋಂಕಿನ ಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿದೆ ಎಂಬ ಆತಂಕವೂ ಎದುರಾಗಿದೆ ಎಂದು ಅವರು ಹೇಳಿದ್ದಾರೆ.
ಇಡೀ ದೇಶದಲ್ಲೀಗ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಾಮಾಜಿ ಸಭೆ- ಸಮಾರಂಭಗಳಿಗೆ ನಿರ್ಬಂಧ ವಿಧಿಸಲಾಗಿದೆ. 10ಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ. ಇನ್ನು ಕೆಲವೆಡೆ ಆರಕ್ಕಿಂತ ಹೆಚ್ಚು ಜನರು ಗುಂಪಾಗಿ ಇರುವಂತಿಲ್ಲ ಎಂದು ಸೂಚಿಸಲಾಗಿದೆ.