

ನವದೆಹಲಿ: ದೇಶಕ್ಕೆ ಕರೊನಾ ಸಾಂಕ್ರಾಮಿಕ ಪಿಡುಗು ಒಕ್ಕರಿಸಿ ಸುಮಾರು ಒಂಬತ್ತು ತಿಂಗಳ ಬಳಿಕ ಈಗ ಸೋಂಕು ಸಮುದಾಯಕ್ಕೆ ಹರಡಿರುವುದನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಇದುವರೆಗೂ ಸೋಂಕು ಸಮುದಾಯಕ್ಕೆ ಹರಡಿದೆ ಅಥವಾ ಹರಡಿಲ್ಲ ಎಂಬ ಬಗ್ಗೆ ಸಾಕಷ್ಟು ಚರ್ಚೆ ಆಗಿದ್ದರೂ ಸ್ಪಷ್ಟತೆ ಇರಲಿಲ್ಲ.
ಆದರೆ ದೇಶದ ಒಂದಷ್ಟು ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ಸೋಂಕು ಸಮುದಾಯಕ್ಕೆ ಹರಡಿರುವುದು ನಿಜ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಒಪ್ಪಿಕೊಂಡಿದ್ದಾರೆ. ಅವರು ಪ್ರತಿ ವಾರ ನಡೆಸುತ್ತಿರುವ 'ಸಂಡೇ ಸಂವಾದ್' ಕಾರ್ಯಕ್ರಮದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕೆಲವೊಂದು ರಾಜ್ಯಗಳಲ್ಲಿ ಕರೊನಾ ಸೋಂಕು ಸಮುದಾಯಕ್ಕೆ ಹರಡಿರುವುದು ನಿಜ. ಆದರೆ ಅದು ದೇಶಾದ್ಯಂತ ಹರಡಿಲ್ಲ ಮತ್ತು ಕರೊನಾ ವೈರಸ್ ರೂಪಾಂತರ ಹೊಂದಿಲ್ಲ ಹಾಗೂ ಮತ್ತಷ್ಟು ಶಕ್ತಿಶಾಲಿ ಆಗಿಲ್ಲ ಎಂಬುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)