ನುಡಿದಂತೆ ನಡೆ: ಇಲ್ಲೀಗ ಸಂಪೂರ್ಣ ಸ್ವದೇಶಿ ಉತ್ಪನ್ನ- ಅಮಿತ್​ ಷಾ ಟ್ವೀಟ್​

military1
Published on

ನವದೆಹಲಿ: ವಿದೇಶಿ ವಸ್ತುಗಳ ಅವಲಂಬನೆಯಿಂದ ಭಾರತದ ಆರ್ಥಿಕತೆಗೆ ಪೆಟ್ಟು ಬೀಳುತ್ತಿರುವುದು ಮಾತ್ರವಲ್ಲದೇ, ಅದು ಎಷ್ಟು ದುಷ್ಪರಿಣಾಮ ಬೀರುತ್ತಿದೆ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆಯಷ್ಟೇ ಭಾಷಣದಲ್ಲಿ ಹೇಳಿದ್ದರು. ಆದ್ದರಿಂದ ಎಲ್ಲರೂ ವಿದೇಶಿ ಬ್ರ್ಯಾಂಡ್​ ವ್ಯಾಮೋಹ ತೊರೆದು ಸ್ವದೇಶಿಯತ್ತ ಮುಖ ಮಾಡುವಂತೆಯೂ ಅವರು ಸೂಚಿಸಿದ್ದರು.

ಅದರದ್ದೇ ಭಾಗವಾಗಿ ಇದೀಗ ಜೂನ್ 1ರಿಂದ ಅರೆ ಸೇನಾಪಡೆ ಕ್ಯಾಂಟೀನ್​ಗಳಲ್ಲಿ ಸ್ವದೇಶಿ ನಿರ್ಮಿತ ವಸ್ತುಗಳನ್ನು ಮಾತ್ರ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ತಾನು ನುಡಿದಂತೆಯೇ ನಡೆಯಬೇಕು ಎನ್ನುವ ಘೋಷವಾಕ್ಯದೊಂದಿಗೆ ಇದೀಗ ಸ್ವದೇಶಿಯತ್ತ ಮೊದಲ ದಿಟ್ಟ ಹೆಜ್ಜೆಯನ್ನು ಕೇಂದ್ರ ಸರ್ಕಾರ ಇಟ್ಟಿದೆ.

ಇನ್ನು ಮುಂದೆ ಆತ್ಮ ನಿರ್ಭರ್ ಭಾರತ್ ಅಥವಾ ಸ್ವಾವಲಂಬನೆ ಮತ್ತು ಸ್ಥಳೀಯತೆಗೆ ಆದ್ಯತೆ ಕೊಡಬೇಕೆಂದು ಹೇಳಿದ್ದರು. ಅಂದರೆ ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ವಸ್ತುಗಳಿಗೆ ಜನರು ಉತ್ತೇಜನ ಕೊಡಬೇಕೆಂಬುದು ಅವರು ಸೂಚ್ಯವಾಗಿ ವಿವರಿಸಿದ್ದರು. ಅದರಂತೆಯೇ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಇದರ ಬಗ್ಗೆ ಟ್ವೀಟ್​ ಮಾಡಿರುವ ಗೃಹ ಸಚಿವ ಅಮಿತ್ ಷಾ, ಜನರು ಸ್ವಾವಲಂಬಿಗಳಾಗಬೇಕು ಮತ್ತು ಸ್ಥಳೀಯ ವಸ್ತುಗಳಿಗೆ ಆದ್ಯತೆ ಕೊಡಬೇಕು ಎಂದು ನಿನ್ನೆ ಮೋದಿಯವರು ಭಾಷಣ ಮಾಡುತ್ತಿದ್ದಾಗ ಹೇಳಿದ್ದರು. ಇದರಿಂದ ಮುಂದಿನ ದಿನಗಳಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ನಾಯಕತ್ವದತ್ತ ಕೊಂಡೊಯ್ಯಲಿದೆ. ಇದರ ಭಾಗವಾಗಿ ಪ್ಯಾರಾಮಿಲಿಟರಿಯ ಕ್ಯಾಂಟೀನ್​ನಲ್ಲಿ ಸ್ವದೇಶಿ ನಿರ್ಮಿತ ವಸ್ತುಗಳನ್ನು ಮಾರಾಟ ಮಾಡಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.

ಇದು ಜೂನ್ 1ರಿಂದ ಅನ್ವಯವಾಗಲಿದೆ. ಸುಮಾರು 10 ಲಕ್ಷ ಸಿಎಪಿಎಫ್ ಸಿಬ್ಬಂದಿ ಮತ್ತು 50 ಲಕ್ಷ ಅವರ ಕುಟುಂಬ ಸದಸ್ಯರು ಸ್ವದೇಶಿ ವಸ್ತುಗಳನ್ನು ಬಳಸಲಿದ್ದಾರೆ ಎಂದು ಷಾ ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net