

ಬೆಂಗಳೂರು: ಪಾದಯಾತ್ರೆಯಲ್ಲಿ ಎರಡು ದಿನದಿಂದ ವೈಯಕ್ತಿಕ ಟೀಕೆ ಹೆಚ್ಚಾಗಿದೆ. ಇದರಿಂದ ಪಾದಯಾತ್ರೆಯಲ್ಲಿ ಕಾರ್ಯಕರ್ತರ ಹುಮ್ಮಸ್ಸು ಕಡಿಮೆಯಾಗುತ್ತಿದೆ ಅನಿಸುತ್ತದೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ವಿಕಾಸಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ವೈಯಕ್ತಿಕ ಟೀಕೆಯ ಭರದಲ್ಲಿ ಮುಖ್ಯಮಂತ್ರಿ ವಿರುದ್ಧ ಹೋರಾಟ ಮರೆತೇ ಬಿಟ್ಟರು ಅನಿಸುತ್ತಿದೆ. ನಮ್ಮ ಗುರಿ ಇರುವುದು ಸಿಎಂ ರಾಜೀನಾಮೆ. ನಿರಂತರವಾಗಿ ಅದಕ್ಕೆ ಒತ್ತು ಕೊಡಬೇಕು ಎಂದು ಹೇಳಿದರು.
ಮುಡಾ ಹಗರಣದ ಹೋರಾಟ ರಾಷ್ಟ್ರವ್ಯಾಪಿ ತಲುಪಿತ್ತು. ಇದರ ನಡುವೆ ಪಾದಯಾತ್ರೆ ಕೂಡ ಪ್ರಾರಂಭವಾಗಿದೆ. ಈ ನಡುವೆ ನಡುವೆ ಪಾದಯಾತ್ರೆ ಡೈವರ್ಟ್ ಆಗಿದೆ ಅನಿಸುತ್ತದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿ ನಡುವಿನ ವೈಯಕ್ತಿಕ ಟೀಕೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಎಲ್ಲರೂ ಆಸ್ತಿ ಡಿಕ್ಲೇರ್ ಮಾಡಿಕೊಂಡಿರುತ್ತಾರೆ. ಆದರೆ ಡಿಸಿಎಂ ಸ್ಥಾನದಲ್ಲಿರುವ ಡಿಕೆಶಿ ಕಲ್ಲನ್ನು ಕೆಸರಿಗೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ವೈಯಕ್ತಿಕ ಟೀಕೆ-ಟಿಪ್ಪಣಿ ಕುರಿತು ಬೇರೆ ವೇದಿಕೆ ಕಲ್ಪಿಸಿಕೊಡಬೇಕು ಎಂದರು.
ವಿಜಯೇಂದ್ರ, ಬಿ.ಎಸ್.ಯಡಿಯೂರಪ್ಪ ಅವರದ್ದೂ ಬಿಚ್ಚಿಡುತ್ತೇನೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ಕುರಿತ ಪ್ರಶ್ನೆಗೆ, ಈಗ ಆಡಳಿತದಲ್ಲಿ ಇರುವುದು ಅವರೇ ತಾನೆ? ಈಗಾಗಲೇ ಬಿಚ್ಚಿಡಬೇಕಿತ್ತು.
ಆ ರೀತಿ ಹೇಳಿ ಜನರ ಗಮನ ಬೇರೆ ಕಡೆ ಸೆಳೆಯುತ್ತಿದ್ದಾರೆ. ಈಗಾಗಲೇ ನಮ್ಮ ಕಾಲದ ಹಗರಣ ಬಿಚ್ಚಿಡಬೇಕಿತ್ತು. ಏನೇ ಇದ್ದರೂ ದಾಖಲೆ ಸಮೇತ ಬಿಚ್ಚಿಡಬೇಕಿತ್ತು. ಏಕೆ ಬಿಚ್ಚಿಟ್ಟಿಲ್ಲ ಎಂದು ಪ್ರಶ್ನಿಸಿದರು.
ವಿಜಯೇಂದ್ರ ಮತ್ತು ಬಿಎಸ್ ವೈ ವಿರುದ್ಧ ಕ್ರಮ ಕೈಗೊಳ್ಳದಿದ್ರೆ ನನ್ನ ವಿರುದ್ದ ಯಾಕೆ ಕ್ರಮ ಕೈಗೊಳ್ಳಬೇಕು ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಶ್ವನಾಥ್, ಯತ್ನಾಳ್ ಹೇಳಿಕೆಗಳನ್ನು ವರಿಷ್ಠರು ಕೂಡ ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ. ಪಕ್ಷಕ್ಕಿಂತ ಯಾರೂ ಕೂಡ ದೊಡ್ಡವರಲ್ಲ.
ಈ ಹಿಂದೆಯೂ ರಾಜ್ಯದ ಮುಖ್ಯಮಂತ್ರಿ ಆಗಿದ್ದವರನ್ನೇ ಉಚ್ಛಾಟನೆ ಮಾಡಿರುವ ಉದಾಹರಣೆ ಇವೆ. ಏನಾದರೂ ಇದ್ದರೆ ನಾಲ್ಕು ಗೋಡೆ ಮಧ್ಯ ಇರಬೇಕು. ಈ ರೀತಿಯ ಹೇಳಿ ಕೊಟ್ಟು ಕಾರ್ಯಕರ್ತರ ವಿಶ್ವಾಸ ಕಡಿಮೆ ಮಾಡಿದಂತಾಗುತ್ತದೆ. ಅದನ್ನು ಅವರೂ ಕೂಡ ಅರ್ಥ ಮಾಡಿಕೊಳ್ಳಬೇಕು. ಅವರಿಗೆ ನೋವು ಆಗಿದ್ದರೆ ಅದನ್ನು ಹೈಕಮಾಂಡ್ ಮುಂದೆ ಹೇಳಬೇಕು ಎಂಧು ಎಸ್.ಆರ್.ವಿಶ್ವನಾಥ್ ಹೇಳಿದರು.