

ರೇಷನ್ ಅಂಗಡಿಗಳ ವಿಚಾರವಾಗಿ ಗಂಭೀರವಾಗಿ ನಡೆದ ವಾದ-ವಿವಾದ ಕೊನೆಗೆ ಗುಂಡು ಹಾರಿಸುವ ಹಂತಕ್ಕೆ ಹೋಗಿದ್ದು, ಒಬ್ಬನ ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ. ಜಯಪ್ರಕಾಶ್ ಎಂಬ 46 ವರ್ಷದ ವ್ಯಕ್ತಿ ಇದರಲ್ಲಿ ಹತ್ಯೆಗೀಡಾಗಿದ್ದು, ಧೀರೇಂದ್ರ ಸಿಂಗ್ ಎಂಬಾತ ಗುಂಡು ಹಾರಿಸಿದ್ದ.
ಉತ್ತರ ಪ್ರದೇಶದ ಬಲ್ಲಿಯ ಜಿಲ್ಲೆಯ ರಿಯೊಟಿ ಪ್ರದೇಶದ ದುರ್ಜನ್ಪುರ್ ಗ್ರಾಮದಲ್ಲಿ ಪಡಿತರ ಅಂಗಡಿಗಳ ಆಯ್ಕೆ ಕುರಿತು ಪಂಚಾಯತ್ ಭವನದಲ್ಲಿ ನಡೆದ ಸಭೆ ವೇಳೆ ಈ ಕೃತ್ಯ ನಡೆದಿದೆ. ಸ್ವಸಹಾಯ ಸಂಘಗಳ ವಿವಾದದಿಂದ ರದ್ದಾಗಿದ್ದ ರೇಷನ್ ಶಾಪ್ಗಳ ಕುರಿತು ಆಯೋಜಿಸಲಾಗಿದ್ದ ಸಭೆ ಸಂದರ್ಭ ದೊಡ್ಡ ಮಟ್ಟದಲ್ಲಿ ನಡೆದಿದ್ದ ವಾಗ್ವಾದವೇ ಇದಕ್ಕೆ ಕಾರಣ.
ಹತ್ಯೆಗೀಡಾದವನ ಸಹೋದರ ನೀಡಿದ ದೂರಿನ ಮೇರೆಗೆ 15ರಿಂದ 20 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕಾನೂನು ಸುವ್ಯವಸ್ಥೆಗಾಗಿ ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ನಾಥ್ ತಿಳಿಸಿದ್ದಾರೆ. (ಏಜೆನ್ಸೀಸ್)