

ವಿಜಯವಾಣಿ ಸುದ್ದಿಜಾಲ, ಬೆಂಗಳೂರು:
ಜಲಾಶಯಗಳಿಗೆ ಇದ್ದ ನೀರಿನ ಸಂಗ್ರಹ ಕೊರತೆ ಜುಲೈ ಅಂತ್ಯದಲ್ಲಿ ನೀಗಿದ್ದು, ಈ ಬಾರಿ ಒಂದು ಬೆಳೆಗೆ ನೀರಿನ ಸಮಸ್ಯೆ ತಲೆದೋರುವ ಲಕ್ಷಣಗಳಿಲ್ಲ.
ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಈಗಾಗಲೇ ಶೇ.80 ನೀರು ಸಂಗ್ರಹವಾಗಿದ್ದರೆ, ಕೃಷ್ಣ ಕಣಿವೆಯ ಜಲಾಶಯಗಳಲ್ಲಿ ಶೇ.75ರಷ್ಟು ನೀರು ಸಂಗ್ರಹವಾಗಿದೆ. ಕಳೆದ ಎರಡು ದಿನಗಳಿಂದ ಮಳೆಯ ಆರ್ಭಟ ಕಡಿಮೆಯಾಗಿದ್ದು, ಜಲಾಶಯಗಳಿಗೆ ನೀರಿನ ಒಳಹರಿವು ಇಳಿಕೆಯಾಗಿದೆ.
ಕಾವೇರಿ ಕಣಿವೆಯಲ್ಲಿರುವ ಕಬಿನಿ ಮತ್ತು ಹಾವೇರಿ ಜಲಾಶಯ ಭರ್ತಿಯಾಗಿದ್ದು, ಕ್ರಸ್ಟ್ ಗೇಟ್‌ನಲ್ಲಿ ನೀರು ಬಿಡಲಾಗಿದೆ.
37 ಟಿಎಂಸಿ ಸಾಮರ್ಥ್ಯದ ಹೇಮಾವತಿ ಜಲಾಶಯದಲ್ಲಿ 29.634 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯ ಭರ್ತಿಗೆ ಇನ್ನು ಕೇವಲ 7 ಟಿಎಂಸಿ ಮಾತ್ರ ಬಾಕಿ ಇದೆ.
49 ಟಿಎಂಸಿ ಸಾಮರ್ಥ್ಯದ ಕೆಆರ್‌ಎಸ್ ಜಲಾಶಯದಲ್ಲಿ 35 ಟಿಎಂಸಿ ನೀರಿದೆ. ಕಳೆದ ವರ್ಷ ಜಲಾಶಯ ಭರ್ತಿಯಾಗಿತ್ತು. ಈ ವರ್ಷ ಶೇ.71ರಷ್ಟು ಮಾತ್ರ ಜಲಾಶಯದಲ್ಲಿ ನೀಡಿದೆ.
ತ.ನಾಡು ತಕರಾರು
ಜುಲೈ ಅಂತ್ಯಕ್ಕೆ ತಮಿಳುನಾಡಿಗೆ 40 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ, ಜೂನ್ ತಿಂಗಳಲ್ಲಿ ಮಳೆ ಬೀಳದ ಕಾರಣ ಜಲಾಶಯಗಳಿಗೆ ಒಳಹರಿವು ಬರಲಿಲ್ಲ. ಜುಲೈ ತಿಂಗಳಲ್ಲಿ ಕೊನೆಯಲ್ಲಿ ಮಳೆ ಬಿದ್ದ ಹಿನ್ನೆಲೆಯಲ್ಲಿ ಈ ತನಕ 11.50 ಟಿಎಂಸಿ ನೀರು ಹರಿಸಲಾಗಿದೆ. ಮೆಟ್ಟೂರು ಜಲಾಶಯದಲ್ಲಿ 30 ಟಿಎಂಸಿ ನೀರು ಮಾತ್ರ ಇದ್ದು, ಭತ್ತದ ಬೆಳೆಗೆ ನೀರು ಸಾಕಾಗುವುದಿಲ್ಲ. ಈ ತಿಂಗಳಲ್ಲಿಯೇ ಬಾಕಿ 29 ಟಿಎಂಸಿ ನೀರು ಹರಿಸಬೇಕಾದ ಒತ್ತಡವಿದೆ. ನೀರು ಬಿಡುವಂತೆ ಆಗ್ರಹಿಸಿ ಈಗಾಗಲೇ ತಮಿಳುನಾಡು ಕಾವೇರಿ ನಿರ್ವಹಣಾ ಸಮಿತಿ ಎದುರು ಅರ್ಜಿಯನ್ನು ಸಲ್ಲಿಸಿದೆ.
ಕೃಷ್ಣ ಕಣಿವೆಯಲ್ಲಿ
ಶೇ.75ರಷ್ಟು ನೀರು
123 ಟಿಎಂಸಿ ಸಂಗ್ಹ ಸಾಮರ್ಥ್ಯದ ಆಲಮಟ್ಟಿ ಜಲಾಶಯಕ್ಕೆ ಮಂಗಳವಾರ 1,28158 ಟಿಎಂಸಿ ನೀರು ಹರಿದು ಬರುತ್ತಿದ್ದು, ಶೇ.88 ನೀರಿನ ಸಂಗ್ರಹವಿದೆ. ಕಳೆದ ವರ್ಷವೂ ಇಷ್ಟೆ ಪ್ರಮಾಣದ ನೀರು ಜಲಾಶಯದಲ್ಲಿತ್ತು. ಭದ್ರ ಜಲಾಶಯದಲ್ಲಿ ಶೇ.63 ನೀರಿದ್ದರೆ, ತುಂಗಭದ್ರದಲ್ಲಿ ಶೇ.74, ಘಟಪ್ರಭದಲ್ಲಿ ಶೇ.70, ಮಲಪ್ರಭದಲ್ಲಿ ಶೇ.52 ನೀರಿದ್ದರೆ, ನಾರಾಯಣಪುರದಲ್ಲಿ ಮಾತ್ರ ಶೇ.93ರಷ್ಟು ನೀರಿನ ಸಂಗ್ರಹವಿದೆ. ಆಲಮಟ್ಟಿಗೆ ನೀರಿನ ಒಳಹರಿವು ಹೆಚ್ಚಾಗಿದ್ದು, 57 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.
ತುಂಬುವ ನಿರೀಕ್ಷೆಯಲ್ಲಿ
ವಾಣಿವಿಲಾಸ ಸಾಗರ
ಹಿರಿಯೂರು ಬಳಿ ಇರುವ ವಾಣಿ ವಿಲಾಸ ಸಾಗರ ಜಲಾಶಯವೂ ಈ ಬಾರಿ ತುಂಬುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಈ ಹೊತ್ತಿಗೆ ಜಲಾಶಯದಲ್ಲಿ ಶೇ.84 ರಷ್ಟು ನೀರು ಸಂಗ್ರಹವಾಗಿತ್ತು. ಈ ಬಾರಿ ಶೇ.82.40 ನೀರು ಸಂಗ್ರಹವಾಗಿದೆ. ಅಂದರೆ ಕೇವಲ ಒಂದು ಅಡಿ ಕಡಿಮೆಯಷ್ಟೆ ನೀರಿದೆ. 6 ಟಿಎಂಸಿ ನೀರು ಬಂದರೆ ಈ ಬಾರಿಯೂ ಜಲಾಶಯ ಭರ್ತಿಯಾದ ದಾಖಲೆ ಸೃಷ್ಟಿಯಾಗಲಿದೆ.