

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ರೂಪಾಂತರಿ ತಳಿ ಜೆಎನ್.1 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಸೋಮವಾರ ಬಂದ ಜಿನೋಮಿಕ್ ಸೀಕ್ವೆನ್ಸಿಸ್ ಪರೀಕ್ಷಾ ವರದಿಯಲ್ಲಿ 167 ಮಂದಿಯಲ್ಲಿ ಜೆಎನ್.1 ದೃಢಪಟ್ಟಿದೆ. 18 ಎಕ್ಸ್‌ಬಿಬಿ ತಳಿ ಹಾಗೂ 27 ಇತರೆ ತಳಿಗಳು ಪತ್ತೆಯಾಗಿವೆ.
ಕೋವಿಡ್ ಸೋಂಕು ದೃಢ ಪ್ರಕರಣಗಳಲ್ಲಿ 601 ಮಂದಿಯ ಗಂಟಲು ಮಾದರಿ ಸಂಗ್ರಹಿಸಿ ಜಿನೋಮಿಕ್ ಸೀಕ್ವೆನ್ಸಿಸ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ 262 ಮಾದರಿಗಳ ವರದಿ ಬಂದಿವೆ. ಇದರೊಂದಿಗೆ ರಾಜ್ಯದಲ್ಲಿ ಜೆಎನ್.1 ಪ್ರಕರಣಗಳ ಸಂಖ್ಯೆ 199ಕ್ಕೆ ಏರಿಕೆಯಾಗಿದೆ. ಎಕ್ಸ್‌ಬಿಬಿ ಪ್ರಕರಣಗಳ ಸಂಖ್ಯೆ 28 ಹಾಗೂ ಇತರೆ ಉಪ ತಳಿಗಳ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.