

ನವದೆಹಲಿ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸತತ 2 ಬಾರಿ ಮಣಿಸಿ ದಿಟ್ಟವಾಗಿ ಪ್ರಶಸ್ತಿ ಸುತ್ತಿಗೇರಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಳೆದ ವರ್ಷ ಕೈತಪ್ಪಿದ ಪ್ರಶಸ್ತಿಯನ್ನು ಈ ಬಾರಿ ಒಲಿಸಿಕೊಳ್ಳುವ ಹಂಬಲದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ವುಮೆನ್ಸ್ ಪ್ರೀಮಿಯರ್ ಲೀಗ್ 2ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಭಾನುವಾರ ಮುಖಾಮುಖಿ ಆಗಲಿವೆ. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಕಾದಾಟದಲ್ಲಿ ಸ್ಮೃತಿ ಮಂದನಾ ಮತ್ತು ಮೆಗ್ ಲ್ಯಾನಿಂಗ್ ಸಾರಥ್ಯದ ತಂಡಗಳಲ್ಲಿ ಯಾವುದೇ ಗೆದ್ದರೂ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಸಾಧನೆ ಮಾಡಲಿದೆ. ಜತೆಗೆ ಐಪಿಎಲ್ನಲ್ಲಿ ಆಡುವ ತನ್ನ ಫ್ರಾಂಚೈಸಿಯ ಪುರುಷರ ತಂಡಕ್ಕಿಂತ ಮುನ್ನ ಪ್ರಶಸ್ತಿ ಒಲಿಸಿಕೊಂಡ ವಿಶೇಷ ಮೈಲಿಗಲ್ಲು ನೆಡಲಿದೆ.
ಫೈನಲ್ನಲ್ಲಿ ತವರು ಪ್ರೇಕ್ಷಕರ ಬೆಂಬಲದ ಬಲವನ್ನು ಪಡೆಯಲಿರುವ ಡೆಲ್ಲಿ ತಂಡ, ಲೀಗ್ ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 2 ಸೋಲಿನ ನಡುವೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿತ್ತು. ಈ ಮೂಲಕ ಡೆಲ್ಲಿ ಸತತ 2ನೇ ಬಾರಿ ನೇರವಾಗಿ ಫೈನಲ್ಗೇರಿದ್ದರೆ, ಆರ್ಸಿಬಿ ತಂಡ ಎಲಿಮಿನೇಟರ್ನಲ್ಲಿ ಹರ್ಮಾನ್ಪ್ರೀತ್ ಕೌರ್ ಸಾರಥ್ಯದ ಮುಂಬೈ ಇಂಡಿಯನ್ಸ್ ವಿರುದ್ಧ 5 ರನ್ಗಳಿಂದ ರೋಚಕವಾಗಿ ಗೆಲುವು ದಾಖಲಿಸಿ ಚೊಚ್ಚಲ ಫೈನಲ್ ಪ್ರವೇಶಿಸಿದೆ.
ಉಭಯ ತಂಡಗಳು ಟೂರ್ನಿಯ 2 ಆವೃತ್ತಿಗಳಲ್ಲಿ ಇದುವರೆಗೆ ಒಟ್ಟು 4 ಬಾರಿ ಮುಖಾಮುಖಿ ಆಗಿದ್ದು, ಎಲ್ಲ ಪಂದ್ಯದಲ್ಲೂ ಡೆಲ್ಲಿ ಗೆಲುವು ದಾಖಲಿಸಿದೆ. ಆದರೆ ಈ ಬಾರಿ ಲೀಗ್ ಹಂತದ ಕೊನೇ ಮುಖಾಮುಖಿಯಲ್ಲಿ ಆರ್ಸಿಬಿ ಕೇವಲ 1 ರನ್ನಿಂದ ಡೆಲ್ಲಿ ಎದುರು ಸೋತಿತ್ತು. ಹೀಗಾಗಿ ಫೈನಲ್ನಲ್ಲಿ ಸ್ಮೃತಿ ಮಂದನಾ ಬಳಗ ಅದಕ್ಕೆ ಸೇಡು ತೀರಿಸಿಕೊಂಡು ಪ್ರಶಸ್ತಿಗೆ ಮುತ್ತಿಕ್ಕುವ ನಿರೀಕ್ಷೆ ಆರ್ಸಿಬಿ ಅಭಿಮಾನಿಗಳದ್ದಾಗಿದೆ.
ಆರ್ಸಿಬಿಗೆ ಪೆರ್ರಿ ಬಲ
ಆಸೀಸ್ ಆಲ್ರೌಂಡರ್ ಎಲ್ಲಿಸ್ ಪೆರ್ರಿ ತೋರುತ್ತಿರುವ ಅಮೋ ನಿರ್ವಹಣೆಯಿಂದ ಆರ್ಸಿಬಿ ಯಶಸ್ಸು ಕಂಡಿದೆ. ಒಂದೇ ಪಂದ್ಯದಲ್ಲಿ 6 ವಿಕೆಟ್ ಕಬಳಿಸಿ ಬೀಗಿದ್ದ ಪೆರ್ರಿ ಒಟ್ಟು 312 ರನ್ ಗಳಿಸಿ ಟೂರ್ನಿಯ ಗರಿಷ್ಠ ರನ್ ಸ್ಕೋರರ್ ಎನಿಸಿದ್ದಾರೆ. ಅವರಿಗೆ ಸ್ಮೃತಿ, ರಿಚಾ ಘೋಷ್, ಸೋಫಿ ಡಿವೈನ್, ಮೊಲಿನೆಕ್ಸ್ರಿಂದ ಬ್ಯಾಟಿಂಗ್ನಲ್ಲಿ ಹೆಚ್ಚಿನ ಬೆಂಬಲ ಸಿಗಬೇಕಿದೆ. ಬೌಲಿಂಗ್ನಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್, ಆಶಾ ಶೋಭನಾ, ಜಾರ್ಜಿಯಾ ವಾರೆಹ್ಯಾ, ರೇಣುಕಾ ಸಿಂಗ್ ಎಲಿಮಿನೇಟರ್ ನಿರ್ವಹಣೆ ಮುಂದುರಿಸಬೇಕಿದೆ.
ಭರ್ಜರಿ ಲಯದಲ್ಲಿ ಡೆಲ್ಲಿ
ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಬಲ್ಲ ಬ್ಯಾಟರ್ಗಳೇ ಡೆಲ್ಲಿ ತಂಡದ ಶಕ್ತಿ. ನಾಯಕಿ ಮೆಗ್ ಲ್ಯಾನಿಂಗ್ ಜತೆಗೆ ಜೆಮೀಮಾ ರೋಡ್ರಿಗಸ್, ಶೆಾಲಿ ವರ್ಮ ಬ್ಯಾಟಿಂಗ್ನಲ್ಲಿ ಉತ್ತಮ ಲಯದಲ್ಲಿದ್ದರೆ, ಅಲಿಸ್ ಕ್ಯಾಪ್ಸಿ ಮತ್ತು ಮಾರಿಜಾನ್ ಕಾಪ್ ಆಲ್ರೌಂಡ್ ಬಲ ತುಂಬಿದ್ದಾರೆ. ಬೌಲಿಂಗ್ನಲ್ಲಿ ಜೆಸ್ ಜೊನಾಸೆನ್, ಶಿಖಾ ಪಾಂಡೆ ಮತ್ತು ಎಡಗೈ ಸ್ಪಿನ್ನರ್ ರಾಧಾ ಯಾದವ್ ಡೆಲ್ಲಿಗೆ ಯಶ ತಂದಿದ್ದಾರೆ.
*ಮುಖಾಮುಖಿ: 4
ಆರ್ಸಿಬಿ: 0, ಡೆಲ್ಲಿ: 4
*ಫೈನಲ್ ಆರಂಭ: ರಾತ್ರಿ 7.30
*ನೇರಪ್ರಸಾರ: ಸ್ಪೋರ್ಟ್ಸ್18, ಜಿಯೋಸಿನಿಮಾ.
ಪುರುಷರನ್ನು ಮೀರಿಸುವ ಹಂಬಲ
ಆರ್ಸಿಬಿ-ಡೆಲ್ಲಿ ತಂಡಗಳಲ್ಲಿ ಯಾರೇ ಗೆದ್ದರೂ, ಐಪಿಎಲ್ನಲ್ಲಿ ಆಡುವ ಪುರುಷರ ತಂಡಗಳಿಗಿಂತ ಮುನ್ನ ಪ್ರಶಸ್ತಿಯೊಂದನ್ನು ಗೆದ್ದ ಇತಿಹಾಸ ನಿರ್ಮಾಣವಾಗಲಿದೆ. ಆರ್ಸಿಬಿ ಪುರುಷರ ತಂಡ ಐಪಿಎಲ್ನಲ್ಲಿ ಇದುವರೆಗೆ 3 ಬಾರಿ (2009, 2011, 2016) ಫೈನಲ್ಗೇರಿದ್ದರೂ, ರನ್ನರ್ಅಪ್ಗೆ ನಿರಾಸೆ ಅನುಭವಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಪುರುಷರ ತಂಡವೂ 2020ರ ಐಪಿಎಲ್ನಲ್ಲಿ ಫೈನಲ್ಗೇರಿ ರನ್ನರ್ಅಪ್ಗೆ ತೃಪ್ತಿಪಟ್ಟಿತ್ತು. ಹೀಗಾಗಿ ಆರ್ಸಿಬಿ-ಡೆಲ್ಲಿ ತಂಡಗಳಲ್ಲಿ ಯಾರೇ ಡಬ್ಲ್ಯುಪಿಎಲ್ ಪ್ರಶಸ್ತಿ ಗೆದ್ದರೂ, ಪುರುಷರ ತಂಡಕ್ಕೆ ಕಳೆದ 16 ವರ್ಷಗಳಿಂದ ಸಾಧ್ಯವಾಗದ ಸಾಧನೆಯನ್ನು ಮಾಡಿದಂತಾಗುತ್ತದೆ.
ನನಸಾಗುವುದೇ ಆರ್ಸಿಬಿ ಅಭಿಮಾನಿಗಳ ಕಪ್ ಕನಸು?
ಆರ್ಸಿಬಿ ತಂಡ ಐಪಿಎಲ್ನಲ್ಲಿ ಕಪ್ ಗೆಲ್ಲದ ಹೊರತಾಗಿಯೂ ಅಭಿಮಾನಿಗಳ ಅಪಾರ ಪ್ರೀತಿ ಸಂಪಾದಿಸಿದೆ. ಡಬ್ಲ್ಯುಪಿಎಲ್ ಶುರುವಾದ ಬಳಿಕ ಆರ್ಸಿಬಿ ಮಹಿಳಾ ತಂಡಕ್ಕೂ ಅಂಥದ್ದೇ ಪ್ರೀತಿ ಲಭಿಸಿದೆ. ಈ ಬಾರಿ ಬೆಂಗಳೂರಿನಲ್ಲಿ ನಡೆದ ಡಬ್ಲ್ಯುಪಿಎಲ್ ಪಂದ್ಯಗಳಿಗೆ ಭಾರಿ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದು ಇದಕ್ಕೆ ಸಾಕ್ಷಿ. ಇದೀಗ ಮಹಿಳೆಯರ ಫೈನಲ್ ಪ್ರವೇಶದೊಂದಿಗೆ ಪುರುಷರಿಗಿಂತ ಮುನ್ನ ಮಹಿಳೆಯರೇ ಅಭಿಮಾನಿಗಳ ಕಪ್ ಕನಸು ನನಸಾಗಿಸುವ ನಿರೀಕ್ಷೆ ಹರಡಿದೆ. "ಈ ಸಲ ಕಪ್ ನಮ್ದೆ' ಎಂದು ಪ್ರತಿ ಐಪಿಎಲ್ ಸಮಯದಲ್ಲೂ ಹೇಳುತ್ತ ಕೊನೆಗೆ ನಿರಾಸೆ ಅನುಭವಿಸುವ ಅಭಿಮಾನಿಗಳು ಈಗ, "ಪುರುಷರು ಅಥವಾ ಮಹಿಳೆಯರೇ ಗೆಲ್ಲಲಿ. ಕಪ್ ಯಾವತ್ತಿದ್ದರೂ ಕಪ್' ಎಂಬ ಹೊಸ ಡೈಲಾಗ್ ಹೊಡೆಯುತ್ತಿದ್ದಾರೆ.
ಆರ್ಸಿಬಿ ಫೈನಲ್ ಹಾದಿ...
*ಯುಪಿ ವಾರಿಯರ್ಸ್ ವಿರುದ್ಧ 2 ರನ್ ಜಯ
*ಗುಜರಾತ್ ಜೈಂಟ್ಸ್ ವಿರುದ್ಧ 8 ವಿಕೆಟ್ ಜಯ
*ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 25 ರನ್ ಸೋಲು
*ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಸೋಲು
*ಯುಪಿ ವಾರಿಯರ್ಸ್ ವಿರುದ್ಧ 23 ರನ್ ಗೆಲುವು
*ಗುಜರಾತ್ ಜೈಂಟ್ಸ್ ವಿರುದ್ಧ 19 ರನ್ ಸೋಲು
*ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 1 ರನ್ ಸೋಲು
*ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಜಯ
*ಎಲಿಮಿನೇಟರ್: ಮುಂಬೈ ವಿರುದ್ಧ 5 ರನ್ ಜಯ