_1782110931469.webp?w=480&auto=format%2Ccompress&fit=max)
_1782110931469.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಪಂದ್ಯದ 21ನೇ ನಿಮಿಷದಲ್ಲಿ ಸಿಕ್ಕ ಫ್ರೀ-ಕಿಕ್ ಅವಕಾಶವನ್ನು ಬಳಸಿಕೊಂಡ ಪಿನಾ, ದೂರದಿಂದಲೇ ಬಾರಿಸಿದ ಅದ್ಭುತ ಶಾಟ್ ಉರುಗ್ವೆ ಗೋಲ್‌ಕೀಪರ್ ಫರ್ನಾಂಡೊ ಮುಸ್ಲೆರಾ ಮೀರಿಸಿ ಗೋಲು ಪೆಟ್ಟಿಗೆಯೊಳಗೆ ಸೇರಿತು.
ಇದು ಕೇಪ್ ವರ್ಡೆ ತಂಡದ ವಿಶ್ವಕಪ್ ಇತಿಹಾಸದಲ್ಲೇ ಮೊದಲ ಗೋಲು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಗೋಲು ದಾಖಲಾಗುತ್ತಿದ್ದಂತೆ ಮಿಯಾಮಿ ಕ್ರೀಡಾಂಗಣ ಸಂಭ್ರಮದಿಂದ ಕಂಗೊಳಿಸಿತು.
ಕೇಪ್ ವರ್ಡೆಯ ರಾಜಧಾನಿ ಪ್ರಾಯಾದಲ್ಲಿ ಜನಿಸಿದ ಕೆವಿನ್ ಪಿನಾ ಪ್ರಸ್ತುತ ರಷ್ಯಾದ FC Krasnodar ತಂಡದ ಪರ ಆಡುತ್ತಿದ್ದಾರೆ. ಕಳೆದ ಋತುವಿನಲ್ಲಿ ರಷ್ಯನ್ ಪ್ರೀಮಿಯರ್ ಲೀಗ್‌ನಲ್ಲಿ 27 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.
2018ರಲ್ಲಿ ಪೋರ್ಚುಗಲ್‌ನ ಎರಡನೇ ವಿಭಾಗದ ಒಲಿವೈರೆನ್ಸೆ ಕ್ಲಬ್ ಪರ ವೃತ್ತಿಜೀವನ ಆರಂಭಿಸಿದ್ದ ಪಿನಾ, ನಂತರ ಕ್ರಾಸ್ನೊಡಾರ್ ಕ್ಲಬ್ ಜೊತೆ ಮೂರು ವರ್ಷದ ಒಪ್ಪಂದ ಮಾಡಿಕೊಂಡರು. ಬಳಿಕ ಅವರ ಒಪ್ಪಂದವನ್ನು 2027ರವರೆಗೆ ವಿಸ್ತರಿಸಲಾಯಿತು. 2021ರ ಕೊನೆಯಲ್ಲಿ 2022ರ ವಿಶ್ವಕಪ್ ಅರ್ಹತಾ ಪಂದ್ಯಗಳಿಗಾಗಿ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದ ಅವರು, 2022ರಲ್ಲಿ ಲಿಚೆನ್‌ಸ್ಟೈನ್ ವಿರುದ್ಧದ ಸ್ನೇಹಪೂರ್ವಕ ಪಂದ್ಯದಲ್ಲಿ ರಾಷ್ಟ್ರೀಯ ತಂಡದ ಪರ ಪದಾರ್ಪಣೆ ಮಾಡಿದ್ದರು.
ಪಿನಾ ಗೋಲಿನಿಂದ ಮುನ್ನಡೆ ಪಡೆದ ಕೇಪ್ ವರ್ಡೆಗೆ ಮೊದಲಾರ್ಧದ ಅಂತ್ಯದ ವೇಳೆಗೆ ಉರುಗ್ವೆ ತಿರುಗೇಟು ನೀಡಿತು. ಮ್ಯಾಕ್ಸಿಮಿಲಿಯಾನೊ ಅರೌಜೊ ಮತ್ತು ಅಗಸ್ಟಿನ್ ಕ್ಯಾನೋಬ್ಬಿಯೊ ತಲಾ ಒಂದು ಗೋಲು ಹೊಡೆದು ಉರುಗ್ವೆಗೆ 2-1 ಮುನ್ನಡೆ ತಂದುಕೊಟ್ಟರು. ಆದರೆ ಎರಡನೇ ಭಾಗರ್ಧದಲ್ಲಿ ಉರುಗ್ವೆ ಗೋಲ್‌ಕೀಪರ್ ಮುಸ್ಲೆರಾ ಮಾಡಿದ ತಪ್ಪಿನ ಲಾಭ ಪಡೆದ ಹೆಲಿಯೊ ವರೆಲಾ ಕೇಪ್ ವರ್ಡೆ ಪರ ಮತ್ತೊಂದು ಗೋಲು ದಾಖಲಿಸಿದರು. ಬಳಿಕ ಎರಡೂ ತಂಡಗಳು ಗೆಲುವಿನ ಗೋಲು ಗಳಿಸಲು ವಿಫಲವಾದ ಕಾರಣ ಪಂದ್ಯ 2-2 ಸಮಬಲದಲ್ಲಿ ಅಂತ್ಯವಾಯಿತು.
ಸುಮಾರು 5.3 ಲಕ್ಷ ಜನಸಂಖ್ಯೆ ಹೊಂದಿರುವ ಕೇಪ್ ವರ್ಡೆ ತಂಡವು ಇದೀಗ ವಿಶ್ವಕಪ್‌ನ 32ರ ಸುತ್ತಿಗೆ ಪ್ರವೇಶಿಸುವ ಕನಸಿನ ಅಂಚಿನಲ್ಲಿದೆ. ಮುಂದಿನ ಶನಿವಾರ ನಡೆಯಲಿರುವ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಗೆದ್ದರೆ ಮುಂದಿನ ಹಂತಕ್ಕೆ ಪ್ರವೇಶ ಖಚಿತವಾಗಲಿದೆ,(ಏಜೆನ್ಸೀಸ್).