ಬೇರೆಯವರ ಬದಲು NEET ಮರುಪರೀಕ್ಷೆ ಬರೆಯುತ್ತಿದ್ದ 9 ಮಂದಿ ಸೇರಿ 30 ಜನರ ಬಂಧನ!
NEET
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನೀಟ್ ರೀ-ಎಗ್ಜಾಂನಲ್ಲಿ ನಕಲಿ ಅಭ್ಯರ್ಥಿಗಳ ಜಾಲ ಪತ್ತೆ; 30 ಜನ ಅರೆಸ್ಟ್
ಬಿಹಾರದಲ್ಲಿ ನೀಟ್ ಮರುಪರೀಕ್ಷೆ ವೇಳೆ ಅಕ್ರಮಕ್ಕೆ ಕಡಿವಾಣ
ಬೇರೆಯವರ ಹೆಸರಲ್ಲಿ ಪರೀಕ್ಷೆ ಬರೆಯುತ್ತಿದ್ದ 9 ಮಂದಿ ಸೆರೆ
ಲಖಿಸರಾಯಿ (ಬಿಹಾರ): NEET ಯುಜಿ 2026 ಮರುಪರೀಕ್ಷೆ ವೇಳೆ ಬಿಹಾರದ ಲಖಿಸರಾಯಿ ಜಿಲ್ಲೆಯ ಹಲವು ಪರೀಕ್ಷಾ ಕೇಂದ್ರಗಳಲ್ಲಿ ಬೇರೆಯವರ ಬದಲು ಪರೀಕ್ಷೆ ಬರೆಯುತ್ತಿದ್ದ 9 ಮಂದಿ ಸೇರಿದಂತೆ ಒಟ್ಟು 30 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಪರೀಕ್ಷಾ ಅಕ್ರಮ ಮತ್ತು ವಂಚನೆ ಆರೋಪದಡಿ ಈ ಕ್ರಮ ಕೈಗೊಳ್ಳಲಾಗಿದೆ.
ವಿವಿಧ ಕೇಂದ್ರಗಳಲ್ಲಿ ಸಿಕ್ಕಿಬಿದ್ದ ಆರೋಪಿಗಳು
ಅಧಿಕಾರಿಗಳ ಮಾಹಿತಿ ಪ್ರಕಾರ, ಕೆಆರ್‌ಕೆ ಹೈ ಸ್ಕೂಲ್ ಪರೀಕ್ಷಾ ಕೇಂದ್ರದಿಂದ ಒಬ್ಬ ಆರೋಪಿಯನ್ನು, ಕೇಂದ್ರೀಯ ವಿದ್ಯಾಲಯ ಕೇಂದ್ರದಿಂದ 7 ಮಂದಿಯನ್ನು ಹಾಗೂ ಹಸನ್‌ಪುರ ಶಾಲಾ ಕೇಂದ್ರದಿಂದ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತರು ವಿವಿಧ ಜಿಲ್ಲೆಗಳ ನಿವಾಸಿಗಳಾಗಿದ್ದಾರೆ ಎನ್ನಲಾಗಿದೆ.
21 ಮಂದಿಯ ಪಾತ್ರದ ತನಿಖೆ
ಬೇರೆಯವರ ಬದಲು ಪರೀಕ್ಷೆ ಬರೆಯುತ್ತಿದ್ದ 9 ಮಂದಿಯ ಜೊತೆಗೆ, ಪರೀಕ್ಷಾ ಅಕ್ರಮಕ್ಕೆ ಸಂಬಂಧ ಹೊಂದಿರುವ ಶಂಕೆಯ ಮೇರೆಗೆ ಇನ್ನೂ 21 ಮಂದಿಯನ್ನು ಬಂಧಿಸಲಾಗಿದೆ. ಈ ಅಕ್ರಮ ಜಾಲದಲ್ಲಿ ಅವರ ಪಾತ್ರ ಏನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎಸ್‌ಡಿಎಂ ಪ್ರಭಾಕರ್ ಕುಮಾರ್ ಹಾಗೂ ಎಸ್‌ಡಿಪಿಒ ಶಿವಂ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ. ವಿಚಾರಣೆ ವೇಳೆ ಲಭಿಸಿದ ಮಾಹಿತಿಯ ಆಧಾರದಲ್ಲಿ ವಿಶೇಷ ಪೊಲೀಸ್ ತಂಡವು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ.
ಜಿಲ್ಲಾಧಿಕಾರಿ ಶೈಲೇಂದ್ರ ಕುಮಾರ್ ಮತ್ತು ಪೊಲೀಸ್ ಅಧೀಕ್ಷಕಿ ಪ್ರೇರಣಾ ಕುಮಾರ್ ಪ್ರಕರಣದ ತನಿಖೆಯನ್ನು ನೇರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಈ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.
ಎಸ್‌ಡಿಪಿಒ ಶಿವಂ ಕುಮಾರ್ ಮಾತನಾಡಿ, “ನೀಟ್ ಮರುಪರೀಕ್ಷೆ ವೇಳೆ ಒಟ್ಟು 30 ಮಂದಿಯನ್ನು ಬಂಧಿಸಲಾಗಿದೆ. ಅವರಲ್ಲಿ 9 ಮಂದಿ ಬೇರೆಯವರ ಪರವಾಗಿ ಪರೀಕ್ಷೆ ಬರೆಯುತ್ತಿದ್ದರು. ಉಳಿದ 21 ಮಂದಿ ಅಕ್ರಮಕ್ಕೆ ಸಂಬಂಧ ಹೊಂದಿರುವುದು ಕಂಡುಬಂದಿದೆ” ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).