

ನವದೆಹಲಿ: ದೇಶಾದ್ಯಂತ ಹೆಚ್ಚು ಯುವಕರೇ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಈ ಆತಂಕದ ಸಮಯದಲ್ಲಿ 81 ವರ್ಷದ ವೃದ್ಧೆ ಐದು ಬಾರಿ ಹೃದಯಾಘಾತದಿಂದ ಪಾರಾಗಿರುವ ಸುದ್ದಿ ಹೃದಯಾಘಾತ ಎಂದರೆ ಹೆದರುವ ಮಂದಿಗೆ ಧೈರ್ಯ ತುಂಬಿದಂತಿದೆ.
ಹೌದು, ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಇಂಥದ್ದೊಂದು ಪವಾಡ ನಡೆದಿದೆ. ವೈದ್ಯರ ಪ್ರಕಾರ, ವೃದ್ಧೆಯು ತೀವ್ರ ಉಸಿರಾಟದ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶೇ. 25ರಷ್ಟು ಕಡಿಮೆ ಹೃದಯದ ಬಡಿತದಿಂದ ವೃದ್ಧೆಯು ಕುಸಿದು ಬೀಳುವ ಮತ್ತು ತೀವ್ರವಾದ ಉಸಿರಾಟದ ಸ್ಥಿತಿಯಲ್ಲಿದ್ದಳು ಎಂದು ವೈದ್ಯರು ಹೇಳಿದ್ದಾರೆ.
ವೃದ್ಧೆಯು ಆಸ್ಪತ್ರೆಯಲ್ಲಿ ಆರು ದಿನಗಳ ಕಾಲ ತಂಗಿದ್ದಾಗ, ಐದು ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದು, ತಕ್ಷಣ ವಿದ್ಯುತ್ ಶಾಕ್ ಬಳಸಿ ಆಕೆಗೆ ಮರುಜೀವ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮ್ಯಾಕ್ಸ್ ಹೆಲ್ತ್‌ಕೇರ್‌ನ ಹೃದ್ರೋಗ ಶಾಸ್ತ್ರದ ಅಧ್ಯಕ್ಷ ಡಾ.ಬಲ್ಬೀರ್ ಸಿಂಗ್ ಮಾತನಾಡಿ, ರೋಗಿಯನ್ನು ಭೇಟಿ ಮಾಡಿದಾಗ ಉಸಿರಾಟದ ತೊಂದರೆ ಮತ್ತು ಅನಿಯಮಿತ ಹೃದಯ ಬಡಿತ ಅನುಭವಿಸುತ್ತಿದ್ದರು ಎಂದು ಹೇಳಿದರು. ಮೊದಲ ಆ್ಯಂಜಿಯೋಗ್ರಫಿ ಮಾಡಲಾಯಿತು ಮತ್ತು ಆಗಾಗ ವೆಂಟ್ರಿಕ್ಯುಲರ್ ಟಾಕಿಕಾರ್ಡಿಯಾದ ಕಾರಣ ತಾತ್ಕಾಲಿಕ ಪೇಸ್‌ಮೇಕರ್ ಅನ್ನು ಅಳವಡಿಸಲಾಗುತ್ತಿತ್ತು. ಆಕೆಯ ಪೇಸ್ ಮೇಕರ್ ಪ್ಯಾರಾಮೀಟರ್ ಅನ್ನು ಸರಿಹೊಂದಿಸಿದ ಬಳಿಕ ಮತ್ತೆ ಆಕೆಗೆ ಹೃದಯಾಘಾತವಾಯಿತು ಎಂದು ಹೇಳಿದರು.
ಇದಾದ ಬಳಿಕ ವೈದ್ಯರು ಆಟೋಮ್ಯಾಟಿಕ್ ಇಂಪ್ಲಾಂಟಬಲ್ ಕಾರ್ಡಿಯೋವರ್ಟರ್ ಡಿಫಿಬ್ರಿಲೇಟರ್ (AICD) ಅನ್ನು ಅಳವಡಿಸಿದರು. ಇದು ಅಸಹಜ ಹೃದಯದ ಲಯವನ್ನು ಅಥವಾ ಅನಿಮಿಯತ ಹೃದಯ ಬಡಿತವನ್ನು ಮೇಲ್ವಿಚಾರಣೆ ಮಾಡಲು ಮತ್ತು ಸರಿಪಡಿಸಲು ಎದೆಯೊಳಗೆ ಅಳವಡಿಸಲಾದ ಒಂದು ಸಣ್ಣ ಎಲೆಕ್ಟ್ರಾನಿಕ್ ಸಾಧನವಾಗಿದೆ. ಈ ಸಾಧನಗಳನ್ನು ಗಂಭೀರ ಮತ್ತು ಮಾರಣಾಂತಿಕ ಅನಿಮಿಯತ ಹೃದಯಬಡಿತ ಚಿಕಿತ್ಸೆಗೆ ಬಳಸಲಾಗುತ್ತದೆ ಮತ್ತು ಇದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಡಾ. ಸಿಂಗ್ ತಿಳಿಸಿದರು.
ಚಿಕಿತ್ಸೆಯು ಯಶಸ್ವಿಯಾಗಿದ್ದು, ವೃದ್ಧೆಯನ್ನು ಸಾಮಾನ್ಯ ಸ್ಥಿತಿಗೆ ತಂದು, ಆಕೆಯ ಜೀವವನ್ನು ಉಳಿಸಿದೆ. ಅವಳು ಅನುಭವಿಸಿದ ಐದು ಹೃದಯಾಘಾತದಿಂದ ಆಕೆ ಬದುಕುಳಿದಿದ್ದು ನಿಜಕ್ಕೂ ಪವಾಡವೇ ಆಗಿತ್ತು ಎಂದು ಹೃದ್ರೋಗ ಶಾಸ್ತ್ರದ ಅಧ್ಯಕ್ಷ ಡಾ.ಬಲ್ಬೀರ್ ಸಿಂಗ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ವೃದ್ಧೆಯ ಪ್ರಕರಣದಲ್ಲಿ ಯಾವುದೇ ಔಷಧಿ ಕೆಲಸ ಮಾಡದ ಕಾರಣ, ಕುಟುಂಬವು ಆಕೆಯ ಮೇಲಿನ ಭರವಸೆಯನ್ನು ಕೈಬಿಟ್ಟಿತ್ತು. ಆದಾಗ್ಯೂ, ಆಕೆಯ ಪ್ರಕರಣದಲ್ಲಿ ಅನೇಕ ತಂತ್ರಗಳನ್ನು ಅನ್ವಯಿಸಿದ ನಂತರ ವೃದ್ಧೆ ಬದುಕುಳಿದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈಗ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಶಾಶ್ವತವಾಗಿ ಮುಟ್ಚು ನಿಲ್ಲುವ ಮಹಿಳೆಯರು ಹೆಚ್ಚಿನ ಹೃದಯಾಘಾತದ ಅಪಾಯವನ್ನು ಹೊಂದಿರುತ್ತಾರೆ ಎಂದು ಇದೇ ಸಂದರ್ಭದಲ್ಲಿ ವೈದ್ಯರು ಎಚ್ಚರಿಸಿದರು. (ಏಜೆನ್ಸೀಸ್)