1ನೇ ಹಂತದ ಚುನಾವಣೆಯಲ್ಲಿ 153 ಕೋಟ್ಯಧಿಪತಿಗಳು!

Bihar
Published on

ಪಟನಾ: ಬಿಹಾರ ವಿಧಾನಸಭೆಗೆ ಅ.28ರಂದು ನಡೆಯುವ ಮೊದಲ ಹಂತದ ಚುನಾವಣೆ ಕಣದಲ್ಲಿ ಬರೋಬ್ಬರಿ 153 ಕೋಟ್ಯಧಿಪತಿ ಅಭ್ಯರ್ಥಿಗಳಿದ್ದಾರೆ. 1065 ಹುರಿಯಾಳುಗಳು ಅಂತಿಮ ಕಣದಲ್ಲಿದ್ದು, ಶೇ. 31 ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ.

ಗಯಾ ಜಿಲ್ಲೆಯ ಅತ್ರಿ ಕ್ಷೇತ್ರದ ಅಭ್ಯರ್ಥಿ ಜೆಡಿಯು ನಾಯಕಿ ಹಾಗೂ ಎಂಎಲ್​ಸಿ ಮನೋರಮಾ ದೇವಿ ಅತ್ಯಂತ ಸಿರಿವಂತ ಅಭ್ಯರ್ಥಿಯಾಗಿದ್ದು, ಅವರ ಆಸ್ತಿ ಮೊತ್ತ 53 ಕೋಟಿ ರೂಪಾಯಿ. ಕಾಂಗ್ರೆಸ್ ಸ್ಪರ್ಧಿ ರಾಕೇಶ್ ಕುಮಾರ್ 33.6 ಕೋಟಿ ರೂ.ಒಡೆಯ. ನವಾಡಾದಿಂದ ಸ್ಪರ್ಧಿಸಿರುವ ಜೆಡಿಯುನ ಕೌಶಲ್ ಯಾದವ್​ಗೆ 26.13 ಕೋಟಿ ರೂ. ಮೊತ್ತದ ಚರ ಮತ್ತು ಸ್ಥಿರಾಸ್ತಿ ಇದೆ. ಅವರ ಪ್ರತಿಸ್ಪರ್ಧಿ ಆರ್​ಜೆಡಿಯ ವಿಭಾ ದೇವಿ ಸಂಪತ್ತು 22.47 ಕೋಟಿ ರೂಪಾಯಿ.

244 ಅಭ್ಯರ್ಥಿಗಳ ವಿರುದ್ಧ ಗಂಭೀರ ಸ್ವರೂಪದ ಪ್ರಕರಣಗಳು ಇವೆ. ಆರ್​ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಮಹಾ ಮೈತ್ರಿಕೂಟದ ಶೇಕಡ 58 ಅಭ್ಯರ್ಥಿಗಳು ಹಾಗೂ ಬಿಜೆಪಿ, ಜೆಡಿಯು, ಎಚ್​ಎಎಂ-ಎಸ್ ಮತ್ತು ವಿಐಪಿ ಒಳಗೊಂಡ ಎನ್​ಡಿಎ ಕೂಟದ ಶೇಕಡ 60 ಹುರಿಯಾಳುಗಳು 1 ಕೋಟಿಯಿಂದ 53 ಕೋಟಿ ರೂಪಾಯಿ ವರೆಗಿನ ಆಸ್ತಿ ಹೊಂದಿದ್ದಾರೆ. ಆರ್​ಜೆಡಿ 41, ಬಿಜೆಪಿ 21, ಎಲ್​ಜೆಪಿ 24, ಕಾಂಗ್ರೆಸ್ 12, ಜೆಡಿಯು 15, ಬಿಎಸ್​ಪಿ 8 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ಇದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್್ಸರ್ (ಎಡಿಆರ್) ತಿಳಿಸಿದೆ.

ಜೆಡಿಯುಗೆ ತುರುಸಿನ ಪೈಪೋಟಿ

ಲಾಲು ಪ್ರಸಾದ್ ಯಾದವರ ಆರ್​ಜೆಡಿ ಅಭ್ಯರ್ಥಿಗಳು ಜೆಡಿಯುಗೆ ಹಂಚಿಕೆ ಆಗಿರುವ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎದುರಾಳಿ ಗಳಾಗಿದ್ದು, ಇಲ್ಲಿ ತೀವ್ರ ಪೈಪೋಟಿ ಇದೆ. ಬಿಜೆಪಿಗೆ ಹಂಚಿಕೆಯಾಗಿರುವ ಸ್ಥಾನಗಳಲ್ಲಿ ಆರ್​ಜೆಡಿ ಅಭ್ಯರ್ಥಿಗಳು ಕಣಕ್ಕೆ ಇಳಿದರೆ ಬಿಜೆಪಿಗೆ ಲಾಭವಾಗಲಿದೆ ಎನ್ನಲಾಗಿದೆ.

ಅಭ್ಯರ್ಥಿಗಳ ವೆಚ್ಚ ಮಿತಿ ಹೆಚ್ಚಳ

ಕರೊನಾ ಸಾಂಕ್ರಾಮಿಕತೆ ಹಿನ್ನೆಲೆಯಲ್ಲಿ ಲೋಕಸಭೆ ಹಾಗೂ ವಿಧಾನಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚ ಮಿತಿಯನ್ನು ಚುನಾವಣೆ ಆಯೋಗ ಶೇ.10ರಷ್ಟು ಏರಿಸಿದೆ. ಪ್ರಚಾರ ಕಾರ್ಯದಲ್ಲಿ ಎದುರಿಸಬೇಕಾದ ಸಮಸ್ಯೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ. ಉಪಚುನಾವಣೆ ನಡೆಯಲಿರುವ ಲೋಕಸಭೆ ಕ್ಷೇತ್ರದಲ್ಲಿ ಉಮೇದುವಾರರ ವೆಚ್ಚವನ್ನು 70 ಲಕ್ಷದಿಂದ 77 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಅಸೆಂಬ್ಲಿ ಕ್ಷೇತ್ರದ ಅಭ್ಯರ್ಥಿಗಳ ಗರಿಷ್ಠ ವೆಚ್ಚವನ್ನು 28 ಲಕ್ಷದಿಂದ 30.8 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ನಕ್ಸಲ್ ದಾಳಿಯ ಭಯ

ಚುನಾವಣೆಗಳನ್ನು ಅಸ್ತವ್ಯಸ್ತಗೊಳಿಸಲು ಹಾಗೂ ಹಿರಿಯ ಮೇಲೆ ದಾಳಿ ಮಾಡಲು ನಕ್ಸಲೀಯ ಸಂಘಟನೆಗಳು ಸಂಚು ರೂಪಿಸಿವೆ ಎಂದು ಬೇಹುಗಾರಿಕೆ ವರದಿಗಳು ಹೇಳಿದ್ದು ಆತಂಕ ಉಂಟಾಗಿದೆ. ಪ್ರಚಾರಕ್ಕಾಗಿ ಪ್ರಮುಖ ಸ್ಥಳಗಳಿಗೆ ಬರುವ ವಿವಿಐಪಿಗಳ ಮೇಲೆ ದಾಳಿಗೆ ಐಇಡಿ ಸ್ಪೋಟಕ ಅಥವಾ ನೆಲಬಾಂಬ್​ಗಳನ್ನು ನಕ್ಸಲೀಯರು ಬಳಸುವ ಸಾಧ್ಯೆತಯಿದೆ ಎಂದು ವರದಿಗಳು ಎಚ್ಚರಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net