

ನವದೆಹಲಿ: ಈ ವರ್ಷಾಂತ್ಯಕ್ಕೆ ನಡೆಯುವ ಬಿಹಾರ ವಿಧಾನಸಭೆ ಚುನಾವಣೆ ಹಾಗೂ ಈ ಸಮಯದಲ್ಲಿ ನಡೆಯುವ ಉಪ ಚುನಾವಣೆಗಳಲ್ಲಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಭಾರತೀಯ ಚುನಾವಣೆ ಆಯೋಗ ಶುಕ್ರವಾರ ಪ್ರಕಟಿಸಿದೆ. ಚುನಾವಣೆ ಪ್ರಚಾರ ವೇಳೆ ಅನುಸರಿಸಬೇಕಾದ ನಿಯಮಗಳನ್ನೂ ಪ್ರಕಟಿಸಲಾಗಿದೆ. ಚುನಾವಣೆ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗುವ ಪ್ರತಿಯೊಬ್ಬರೂ ಮುಖಗವಸು (ಮಾಸ್ಕ್) ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಸೋಂಕಿತರ ಮತದಾನ ಹೇಗೆ?
ಕೋವಿಡ್-19 ಸೋಂಕಿತರು ಹಾಗೂ ಕ್ವಾರಂಟೈನ್ನಲ್ಲಿ ಇರುವ ಮತದಾರರಿಗೆ ಸಂಬಂಧಪಟ್ಟ ಮತಗಟ್ಟೆಯಲ್ಲಿ ದಿನದ ಕೊನೆ ಹಂತದಲ್ಲಿ ಮತ ಚಲಾಯಿಸಲು ಅವಕಾಶ ನೀಡಲಾಗುತ್ತದೆ.
ಗರಿಷ್ಠ 1000 ಮತದಾರರು
ಇದುವರೆಗಿನ ಚುನಾವಣೆಗಳಲ್ಲಿ ಒಂದು ಮತಗಟ್ಟೆಯಲ್ಲಿ ಗರಿಷ್ಠ 1500 ಮತದಾರರಿಗೆ ಅವಕಾಶ ನೀಡಲಾಗುತ್ತಿತ್ತು. ಈಗ ಅದನ್ನು 1000ಕ್ಕೆ ಮಿತಿಗೊಳಿಸಲಾಗಿದೆ. ಮತದಾನದ ಮುನ್ನಾದಿನ ಮತಗಟ್ಟೆಗಳನ್ನು ನಿರ್ಮಲೀಕರಿಸಲಾಗುತ್ತದೆ.
ನಿಯಮಗಳು ಹೀಗಿವೆ
ಆನ್ಲೈನ್ ನಾಮಪತ್ರ
ಜನರು ಗುಂಪು ಸೇರುವುದನ್ನು ತಪ್ಪಿಸುವ ಉದ್ದೇಶದಿಂದ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ನಾಮಪತ್ರ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಠೇವಣಿ ಹಣ ಸಂದಾಯ ಮಾಡಲು ಅನುಕೂಲ ಕಲ್ಪಿಸಲಾಗುತ್ತದೆ. ಕೋವಿಡ್-19 ಹರಡುವುದನ್ನು ತಡೆಯಲು ಗೃಹ ಸಚಿವಾಲಯ ಹೊರಡಿಸಿರುವ ನಿಯಮಗಳಿಗೆ ಅನುಗುಣವಾಗಿ ಸಾರ್ವಜನಿಕ ಸಭೆ ಹಾಗೂ ರೋಡ್ ಷೋ ನಡೆಸಲು ಅವಕಾಶ ನೀಡಲಾಗುವುದೆಂದು ಆಯೋಗ ಸ್ಪಷ್ಟಪಡಿಸಿದೆ. ಮನೆ-ಮನೆ ಪ್ರಚಾರದಲ್ಲಿ ಅಭ್ಯರ್ಥಿ ಸಹಿತ ಐದು ಜನರು ಮಾತ್ರ ಭಾಗವಹಿಸಬಹುದು.