

ಒಂದೆಡೆ ಪಾಕಿಸ್ತಾನದ ಕಿರಿಕಿರಿ, ಮತ್ತೊಂದೆಡೆ ಚೀನಾದ ಉಪಟಳ. ಲಡಾಖ್ ಗಡಿಯಲ್ಲಂತೂ ಕಳೆದ ಐದಾರು ತಿಂಗಳಿಂದ ಡ್ರ್ಯಾಗನ್ ರಾಷ್ಟ್ರ ಉದ್ವಿಗ್ನ ಸ್ಥಿತಿ ಸೃಷ್ಟಿಸಲು ಯತ್ನಿಸುತ್ತ, ವಾಸ್ತವ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಲು ಯತ್ನಿಸುತ್ತಲೇ ಇದೆ. ಹಿಮಪಾತ ಆರಂಭವಾಗುತ್ತಿದ್ದಂತೆಯೇ ಜಮ್ಮು-ಕಾಶ್ಮೀರದ ಗಡಿಯ ಮೂಲಕ ಪಾಕಿಸ್ತಾನ ಭಯೋತ್ಪಾದಕರನ್ನು ಭಾರತದೊಳಕ್ಕೆ ನುಸುಳಿಸಲು ಯತ್ನಿಸುತ್ತದೆ. ಈ ಎಲ್ಲ ಷಡ್ಯಂತ್ರ, ಕುತಂತ್ರಗಳಿಗೆ ದಿಟ್ಟವಾದ ಉತ್ತರ ನೀಡುತ್ತಿರುವ ಭಾರತ, ಜತೆಜತೆಗೆ ಮೂಲಸೌಕರ್ಯ ವಿಚಾರದಲ್ಲಿ ಮಹತ್ವದ ಯೋಜನೆಗಳನ್ನು ಸಾಕಾರಗೊಳಿಸಿ ಜನಸಾಮಾನ್ಯರಿಗೂ, ಸೈನಿಕರಿಗೂ ಅನುಕೂಲ ಮಾಡಲು ಹೊರಟಿದೆ. ಲೇಹ-ಲಡಾಖ್ ಪ್ರದೇಶವನ್ನು ಹಿಮಾಚಲಪ್ರದೇಶಕ್ಕೆ ಜೋಡಿಸುವ ಮಹತ್ವದ ಅಟಲ್ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 3ರಂದು ಉದ್ಘಾಟಿಸಿದ್ದರು. ಇದರ ಬೆನ್ನಲ್ಲೇ, ಶ್ರೀನಗರ ಕಣಿವೆಯಿಂದ ಲೇಹ್ಗೆ ಸಂಪರ್ಕ ಕಲ್ಪಿಸುವ ಸರ್ವಋತು ಸುರಂಗ ಮಾರ್ಗ ನಿರ್ವಣಕ್ಕೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಗುರುವಾರ ಚಾಲನೆ ನೀಡಿದ್ದಾರೆ.
ಶ್ರೀನಗರ-ಕಾರ್ಗಿಲ್-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ 11,578 ಅಡಿ ಎತ್ತರದಲ್ಲಿ ಜೋಜಿಲಾ ಪಾಸ್ ಇದೆ. ಹೀಗಾಗಿ ಇದು ವ್ಯೂಹಾತ್ಮಕ ಮಹತ್ವವನ್ನೂ ಪಡೆದುಕೊಂಡಿದೆ. ಮುಂಚೆ ಭಾರಿ ಹಿಮಪಾತದಿಂದ ಈ ಮಾರ್ಗ ವರ್ಷದ ಆರೇಳು ತಿಂಗಳು ಸಂಪರ್ಕ ಕಡಿದುಕೊಳ್ಳುತ್ತಿತ್ತು. ಜೋಜಿಲಾ ಸುರಂಗ ಮಾರ್ಗ ನಿರ್ವಣಗೊಂಡರೆ ವರ್ಷದ 12 ತಿಂಗಳೂ ಸುಗಮ ಸಂಚಾರಕ್ಕೆ ಸಾಧ್ಯವಾಗಲಿದೆ ಅಲ್ಲದೆ ಈ ಮಾರ್ಗದಲ್ಲಿ ಸಂಚಾರದ ಅವಧಿ ಮೂರು ಗಂಟೆಯಿಂದ ಕೇವಲ 15 ನಿಮಿಷಕ್ಕೆ ಇಳಿಯಲಿದೆ ಎಂಬುದು ಮಹತ್ವದ ಸಂಗತಿ. ಇದರಿಂದ ಸೈನಿಕರಿಗೆ, ಭದ್ರತಾ ಪಡೆಗಳಿಗೆ ಭಾರಿ ಅನುಕೂಲವಾಗಲಿದ್ದು, ತುರ್ತು ಕಾರ್ಯಾಚರಣೆ ಮತ್ತು ಇತರ ಸಂದರ್ಭಗಳಲ್ಲಿ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡಲಿದೆ. -ಠಿ; 6,800 ಕೋಟಿ ವೆಚ್ಚದ ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ 2018 ಮೇನಲ್ಲಿ ಶಿಲಾನ್ಯಾಸ ನೆರವೇರಿಸಿ, ‘ಜೋಜಿಲಾ ಸುರಂಗ ಆಧುನಿಕ ಕಾಲದ ಅದ್ಭುತವಾಗಲಿದೆ’ ಎಂದು ಬಣ್ಣಿಸಿದ್ದರು. ಈ ಯೋಜನೆಯಿಂದ ಜಮ್ಮು ಮತ್ತು ಕಾಶ್ಮೀರದ ಸರ್ವಾಂಗೀಣ ಆರ್ಥಿಕ ಅಭಿವೃಧಿ ಹಾಗೂ ಸಾಮಾಜಿಕ-ಸಾಂಸ್ಕೃತಿಕ ಏಕೀಕರಣಕ್ಕೂ ನೆರವಾಗಲಿದೆ.
ಲಡಾಖ್, ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಗಡಿಗಳಲ್ಲಿ ಭಾರಿ ಪ್ರಮಾಣದಲ್ಲಿ ಮಿಲಿಟರಿ ಚಟುವಟಿಕೆಗಳು ನಡೆಯುತ್ತಿರುವುದರಿಂದ ದೇಶದ ರಕ್ಷಣೆಯಲ್ಲೂ ಜೋಜಿಲಾ ಸುರಂಗ ಮಹತ್ವದ ಪಾತ್ರ ವಹಿಸಲಿದೆ. ನಿಜಾರ್ಥದಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗಲು ಇಂಥ ಯೋಜನೆಗಳು ಅತ್ಯಂತ ಅವಶ್ಯ. ಒಂದೆಡೆ, ಜನಸಾಮಾನ್ಯರ ಅನುಕೂಲ, ಆರ್ಥಿಕ ಚಟುವಟಿಕೆಗಳ ಹೆಚ್ಚಳವನ್ನು ಗಮನದಲ್ಲಿ ಇರಿಸಿದ್ದರೆ, ಮತ್ತೊಂದೆಡೆ ಸೈನಿಕರಿಗೂ ಬಲ ಬರಲಿದೆ. ವರ್ತಮಾನದ ಅಗತ್ಯದ ಜತೆಗೆ ದೂರದೃಷ್ಟಿಯನ್ನು ಇರಿಸಿಕೊಂಡಾಗ ಇಂಥ ಅದ್ಭುತಗಳು ಸಾಕಾರಗೊಳ್ಳುತ್ತವೆ. ಮೂಲಸೌಕರ್ಯ ಕ್ಷೇತ್ರದಲ್ಲೂ ಮಹತ್ವದ ಬದಲಾವಣೆ ಸಾಕಾರವಾಗುತ್ತದೆ. ಇಂಥ ಯೋಜನೆ, ಇಂಜಿನಿಯರಿಂಗ್ ಕೌಶಲಗಳ ಅದ್ಭುತಗಳ ಮೂಲಕ ಕೇಂದ್ರ ಸರ್ಕಾರ ದೇಶದ ಆತ್ಮಸ್ಥೈರ್ಯ ಹೆಚ್ಚಿಸಲು ಹೊರಟಿರುವುದು ಉತ್ತಮವಾದ ಬೆಳವಣಿಗೆ.