ಪ್ರತ್ಯೇಕ ಪ್ರಕರಣ ರೈಲಿಗೆ ಸಿಲುಕಿ ಇಬ್ಬರು ಆತ್ಮಹತ್ಯೆ

rail new train new
Published on

ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವೈದ್ಯ ಸೇರಿ ಇಬ್ಬರು ನಗರದಲ್ಲಿ ಬುಧವಾರ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯಲಹಂಕ ರೈಲು ನಿಲ್ದಾಣದ ಬಳಿ ಅನಂತ ಪ್ರಸಾದ್ ಎಂಬ ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲತಃ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಅವರು ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಪತ್ನಿಯೊಂದಿಗೆ ಹೆಬ್ಬಾಳ ಬಳಿಯ ಕೆಂಪಾಪುರದಲ್ಲಿ ವಾಸವಾಗಿದ್ದ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘‘ನನ್ನ ಸಾವಿಗೆ ನಾನೇ ಕಾರಣ,’ ಎಂದು ಅನಂತ ಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಮರಣ ಪತ್ರ ಬರೆದಿಟ್ಟಿದ್ದಾರೆ. ಅವರ ಪ್ಯಾಂಟ್ ಜೇಬಿನಲ್ಲಿ ಆ ಪತ್ರ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಯಶವಂತಪುರ ರೈಲು ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಆತ್ಮಹತ್ಯೆ
ಮತ್ತೊಂದು ಪ್ರಕರಣದಲ್ಲಿ ದೀಪಾಂಜಲಿನಗರ ರೈಲ್ವೆ ಸೇತುವೆ ಬಳಿ ಬುಧವಾರ ರಾತ್ರಿ ಚನ್ನಬಾಸು ಅಶೋಕ್ ಸ್ಟ್(೨೨) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಅವರು ವೈಟ್‌ಫೀಲ್ಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ವಿಜಯನಗರ ಸಮೀಪದ ಆರ್‌ಪಿಸಿ ಲೇಔಟ್‌ನ ಸಂಬಂಧಿಕರ ಮನೆಯಲ್ಲಿ ಚನ್ನಬಾಸು ಅಶೋಕ್ ವಾಸವಾಗಿದ್ದರು. ಪ್ರತಿನಿತ್ಯದಂತೆ ಬುಧವಾರ ಆಸ್ಪತ್ರೆಗೆ ಹೋಗಿ ಕೆಲಸ ಮಾಡಿ ಸಂಜೆ ಮನೆಗೆ ಹಿಂದಿರುಗಿದ್ದರು. ನಂತರ ಸ್ನೇಹಿತರನ್ನು ಭೇಟಿ ಮಾಡಿ ಬರುವುದಾಗಿ ಹೇಳಿ ಮನೆಯಿಂದ ಹೊರ ಹೋಗಿದ್ದ ಅವರು ರಾತ್ರಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈಲ್ವೆ ಹಳಿ ಬಳಿ ಗುರುವಾರ ಬೆಳಗ್ಗೆ ಅವರ ಶವ ಪತ್ತೆಯಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗರ ರೈಲು ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net