

ವಿಜಯಪುರ: ಅಮಲಿನಲ್ಲಿ ನೆನಪಾದ ಅಗಲಿದ ಕಂದನಂತಿದ್ದ ಅನ್ಯರ ಮಗುವನ್ನು ಕರೆದೊಯ್ದು, ಹಾಲು ಕುಡಿಸಿ, ಬಿಸ್ಕತ್ ತಿನ್ನಿಸಿ ಕಾಳಜಿ ಮಾಡಿ ವಾಪಸ್ ಕರೆತಂದು ಬಿಟ್ಟ ಕುತೂಹಲದ ಪ್ರಕರಣ ಬೆಳಕಿಗೆ ಬಂದಿದೆ !
ಕಾಯಕಲ್ಪ ಪ್ರಶಸ್ತಿ ವಿಜೇತ ವಿಜಯಪುರದ ಸರ್ಕಾರಿ ಜಿಲ್ಲಾಸ್ಪತ್ರೆಯಿಂದ ಶನಿವಾರ ಬೆಳಗ್ಗೆ ಏಕಾಏಕಿ ಕಾಣೆಯಾಗಿದ್ದ ಮಗುವಿನ ಪ್ರಕರಣ ಕ್ಷಣಕಾಲ ರಾಜ್ಯಾದ್ಯಂತ ಸದ್ದು ಮಾಡಿತಲ್ಲದೇ ಅಷ್ಟೇ ಬೇಗ ಸುಖಾಂತ್ಯ ಕಂಡಿದೆ. ವಿಚಿತ್ರವೆಂದರೆ ಮಗುವನ್ನು ಕರೆದೊಯ್ದ ವ್ಯಕ್ತಿಯೇ ವಾಪಸ್ ಕರೆತಂದಿದ್ದು, ಅಗಲಿ ಹೋದ ತನ್ನದೇ ಮಗುವಿನಂತೆ ಕಂಡ ಹಿನ್ನೆಲೆ ಕರೆದೊಯ್ದು ಕಾಳಜಿ ಮಾಡಿ ವಾಪಸ್ ತಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈತ ನಶೆಯಲ್ಲಿಯೇ ಕರೆದೊಯ್ದಿದ್ದು, ನಶೆ ಇಳಿದ ಮೇಲೆ ಕರೆ ತಂದಿದ್ದಾನೆನ್ನಲಾಗಿದ್ದು, ಆ ಬಗ್ಗೆ ಪೊಲೀಸರು ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆಗೊಳಪಡಿಸಿದ್ದು, ವರದಿಯ ನಿರೀಕ್ಷೆಯಲ್ಲಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳದ ರಾಮೇಶ್ವರಿ ರತನ ಸಾಳುಂಕೆ ಎಂಬುವವರು ಅನಾರೋಗ್ಯದ ಹಿನ್ನೆಲೆ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ತಾಯಿ ಪದ್ಮಾ ಪಾಂಡು ಪವಾರ್ ಎಂಬುವರ ಯೋಗಕ್ಷೇಮ ವಿಚಾರಿಸಲೆಂದು ಆಗಮಿಸಿದ್ದರು. ಜೊತೆಗೆ ಸಂದೀಪ ಎಂಬ ಒಂದು ವರ್ಷದ ತಮ್ಮ ಕಂದನನ್ನೂ ಕರೆತಂದಿದ್ದರು. ಪದ್ಮಾ ಅವರಿಗೆ ಕಫ ಹೆಚ್ಚಾದ ಹಿನ್ನೆಲೆ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಔಷಧ ತರಲೆಂದು ರಾಮೇಶ್ವರಿ ಮಗು ಸಂದೀಪನನ್ನು ವಾರ್ಡ್‌ನಲ್ಲಿಯೇ ಬಿಟ್ಟು ತೆರಳಿದ್ದಾರೆ. ವಾಪಸ್ ಬಂದು ನೋಡಲಾಗಿ ಮಗು ಇರಲಿಲ್ಲ. ಇಡೀ ಆಸ್ಪತ್ರೆ ತುಂಬ ಹುಡುಕಾಡಿದ್ದಾರೆ. ಕೊನೆಗೆ ಮಗು ಸಿಗದೇ ಆತಂಕಗೊಂಡ ರಾಮೇಶ್ವರಿ ಸ್ಥಳೀಯ ಗಾಂಧಿ ಚೌಕ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆಸ್ಪತ್ರೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿನ ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ. ಆಟೋವೊಂದರಲ್ಲಿ ಮಗುವನ್ನು ಹತ್ತಿಸಿಕೊಂಡು ಹೋಗುವ ದೃಶ್ಯ ಸೆರೆಯಾಗಿದ್ದು, ಅದನ್ನಾಧರಿಸಿ ಆಟೋ ಚಾಲಕರನ್ನು ವಿಚಾರಿಸಲಾಗಿ ಒಬ್ಬಾತ ಮಗುವನ್ನು ಕರೆದುಕೊಂಡು ರೈಲ್ವೆ ಪೊಲೀಸ್ ಸ್ಟೇಶನ್ ಕಡೆಗೆ ಕರೆದೊಯ್ದಿರುವುದು ಗೊತ್ತಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನಿಟ್ಟುಕೊಂಡು ವ್ಯಕ್ತಿಯ ಮಾಹಿತಿ ಕಲೆ ಹಾಕಲಾಗಿ ಆತ ದೇವರಹಿಪ್ಪರಗಿ ತಾಲೂಕಿನ ಚಟ್ನಳ್ಳಿ ಗ್ರಾಮದ ರವಿ ಛಲವಾದಿ (38) ಎಂಬುದು ಗೊತ್ತಾಗಿದೆ. ಆತನ ಪತ್ತೆಗೆ ಜಾಲ ಬೀಸಿರುವಾಗಲೇ ಭಾನುವಾರ ಏಕಾಏಕಿ ರವಿ ಜಿಲ್ಲಾಸ್ಪತ್ರೆಯಲ್ಲಿ ಮಗುವಿನೊಂದಿಗೆ ಕಾಣಿಸಿಕೊಂಡಿದ್ದಾನೆ. ಕೂಡಲೇ ಆಟೋ ಚಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆತನನ್ನು ಬಂಧಿಸಿ ವಿಚಾರಣೆಗೊಳಿಸಲಾಗಿ ಆತ ಬಿಚ್ಚಿಟ್ಟ ವಿವರ ಕುತೂಹಲದಾಯಕವಾಗಿದೆ.
‘ಮಗು ಅಳುತ್ತಿದ್ದಾಗ ತೀರಿ ಹೋದ ತನ್ನ ಒಂದು ವರ್ಷದ ಮಗು ನೆನಪಾಗಿದೆ. ಹೀಗಾಗಿ ಕರೆದೊಯ್ದಿದ್ದು, ಕಲಬುರಗಿಗೆ ಹೋಗಿ ಅಲ್ಲಿ ಒಂದು ದಿನ ತಂಗಿ ವಾಪಸ್ ಬಂದಿದ್ದೇನೆ’ ಎಂದು ರವಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಪೊಲೀಸರು ಆತನ ಹಿನ್ನೆಲೆ ಕೆದಿಕಿದ್ದಾರೆ. ಕೊನೆಗೆ ಆತ ಯಾವುದೇ ಅಪರಾಧಿಕ ಹಿನ್ನೆಲೆಯಿಂದ ಬಂದವನಲ್ಲವೆಂದು, ಮನೆಯಲ್ಲಿ ಜಗಳ ಮಾಡಿ ಜಿಲ್ಲಾಸ್ಪತ್ರೆಗೆ ಬಂದು ಚಿಕಿತ್ಸೆಗೂ ದಾಖಲಾಗದೆ ಎರಡು ದಿನಗಳಿಂದ ಠಿಕಾಣಿ ಹೂಡಿದ್ದನೆಂದು ತಿಳಿದು ಬಂದಿದೆ. ಕೊನೆಗೆ ಎಫ್‌ಐಆರ್ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.