

ಬೆಂಗಳೂರು: ಬಹಳ ಕುತೂಹಲದಿಂದ ಕಾಯುತ್ತಿದ್ದ ಲೋಕಸಭಾ ಚುನಾವಣೆ 2024ರ ವೇಳಾಪಟ್ಟಿಗೆ ಇಂದು ತೆರೆಬಿದ್ದಿದ್ದು, ಚುನಾವಣೆಯ ದಿನಾಂಕ, ಎಷ್ಟು ಹಂತಗಳಲ್ಲಿ ನಡೆಯಲಿದೆ ಎಂಬುದರ ಸಂಪೂರ್ಣ ಪಟ್ಟಿ ಇದೀಗ ಅಧಿಕೃತವಾಗಿ ಹೊರಬಿದ್ದಿದೆ. 18ನೇ ಲೋಕಸಭಾ ಚುನಾವಣೆಯು ಒಟ್ಟು 543 ಕ್ಷೇತ್ರಗಳಲ್ಲಿ 7 ಹಂತಗಳಲ್ಲಿ ನಡೆಯಲಿದೆ. ಏಪ್ರಿಲ್ 19ರಂದು ಮತದಾನ ಆರಂಭವಾಗಲಿದ್ದು, ಜೂನ್ 4ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಈ ಕುರಿತಂತೆ ಇಂದು ಮಧ್ಯಾಹ್ನ 3 ಗಂಟೆಗೆ ರಾಷ್ಟ್ರ ರಾಜಧಾನಿ ದೆಹಲಿಯ ವಿಜ್ಞಾನ ಭವನದಲ್ಲಿ ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚುನಾವಣಾ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಯಿತು. ಕರ್ನಾಟಕದಲ್ಲಿ ಒಟ್ಟು 28 ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೊದಲನೇ ಹಂತ ಏಪ್ರಿಲ್ 26ರಂದು ಹಾಗೂ ಎರಡನೇ ಹಂತ ಮೇ 7ರಂದು ಸಂಭವಿಸಲಿದೆ.
ಇನ್ನು ಮತದಾರರ ವಿಷಯವನ್ನು ಗಮನಿಸುವುದಾದರೆ, 12 ರಾಜ್ಯದಲ್ಲಿ ಪುರುಷರಿಗಿಂತ ಹೆಚ್ಚು ಮಹಿಳಾ ಮತದಾರರೇ ಇದ್ದಾರೆ. 19.24 ಕೋಟಿ ಯುವ ಮತದಾರರು ಇದ್ದಾರೆ. 100 ವರ್ಷಕ್ಕೂ ಮೇಲ್ಪಟ್ಟವರು 2.8 ಲಕ್ಷವಿದ್ದಾರೆ. ಮತಗಟ್ಟೆಯಲ್ಲಿ ಒಟ್ಟು 55 ಲಕ್ಷ ಇವಿಎಂ ವ್ಯವಸ್ಥೆ ಮಾಡಲಾಗಿದ್ದು, 12 ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ ಎಂದು ವರದಿ ಉಲ್ಲೇಖಿಸಿದೆ.
ಲೋಕ ಸಮರ 2024ರ ದಿನಾಂಕ ಹೊರಬೀಳುತ್ತಿದ್ದಂತೆ ಇದೀಗ ಚುನಾವಣೆಗೆ ಬೇಕಾದ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಎಲೆಕ್ಷನ್ ಕೆಲಸಕ್ಕಾಗಿ ಒಟ್ಟು ಒಂದೂವರೆ ಕೋಟಿ ಸಿಬ್ಬಂದಿ, ಭದ್ರತಾ ಅಧಿಕಾರಿಗಳು ನಿಯೋಜನೆಗೊಳಿಸಲಾಗಿದೆ. ಅಭ್ಯರ್ಥಿಗಳು ಕ್ರಿಮಿನಲ್ ಕೇಸ್ ಇದ್ದರೆ ಅದರ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯವಾಗಿರುತ್ತದೆ, ಅದನ್ನು ಯಾವುದೇ ಕಾರಣಕ್ಕೂ ಮುಚ್ಚಿಡುವಂತಿಲ್ಲ.
ಇನ್ನೂ ಮತಗಟ್ಟೆಗಳಿಗೆ ಬರುವ ಮತದಾರರನ್ನು ಗಮನದಲ್ಲಿಟ್ಟುಕೊಂಡು ಅವರಿಗೆಂದು ಪ್ರತ್ಯೇಕ ನೀರಿನ ವ್ಯವಸ್ಥೆ, 80 ವರ್ಷ ಮೇಲ್ಪಟ್ಟವರನ್ನು ಕರೆತರಲು ವ್ಹೀಲ್ ಚೇರ್ ಸೇರಿದಂತೆ ಹಲವು ಮೂಲಸೌಕರ್ಯ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದೆ. ಇದರ ಜತೆಗೆ ನೀತಿ ಸಂಹಿತೆ ಉಲ್ಲಂಘಿಸುವಂತಿಲ್ಲ. ಆಯಾ ಪಕ್ಷಗಳಿಗೆ ವಿಶೇಷ ಎಚ್ಚರಿಕೆ ನೀಡಲಾಗಿದ್ದು, ಮತದಾರರಿಗೆ ಮದ್ಯ, ಹಣ, ಇತರ ವಸ್ತುಗಳನ್ನು ಹಂಚುವುದು, ಆಮಿಷ ಒಡ್ಡುವ ಮೂಲಕ ದಿಕ್ಕು ತಪ್ಪಿಸುವ ಕೆಲಸ ಮಾಡುವಂತಿಲ್ಲ ಎಂದು ತಿಳಿಸಿದೆ. ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).