ಪಾಕ್​ ಪ್ರಧಾನಿಗೆ ಉಗ್ರನೇ ಹೀರೋ; ಜಾಗತಿಕ ಭಯೋತ್ಪಾದಕನನ್ನು ಹುತಾತ್ಮ ಎಂದ ಇಮ್ರಾನ್​ ಖಾನ್​

Imran Khan vvani
Published on

ಇಸ್ಲಾಮಾಬಾದ್​: ಪಾಕಿಸ್ತಾನ ಉಗ್ರರಿಗೆ ಸ್ವರ್ಗವಾಗಿದೆ ಎಂದು ಅಮೆರಿಕ ಘೋಷಿಸಿದ ಬೆನ್ನಲ್ಲೇ, ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಅದಕ್ಕೆ ಸಮ್ಮತಿ ಸೂಚಿಸುವಂತೆಯೇ ನಡೆದುಕೊಂಡಿದ್ದಾರೆ.

ಅಲ್​ಕೈದಾ ಮುಖ್ಯಸ್ಥ, ಜಾಗತಿಕ ಉಗ್ರ ಒಸಮಾ ಬಿನ್​ ಲಾಡೆನ್​ನನ್ನು ಸಂಸತ್​ ಕಲಾಪದಲ್ಲಿ ಹುತಾತ್ಮ ಎಂದು ಕರೆದಿದ್ದಾರೆ. ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಪಾಕಿಸ್ತಾನ ಸಾವಿರಾರು ಜೀವಗಳನ್ನು ಕಳೆದುಕೊಂಡಿದೆ. ಹೀಗಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಹೀಗಳೆಯಲಾಗುತ್ತಿದೆ ಎಂದೂ ಇಮ್ರಾನ್​ ಖಾನ್​ ನೋವು ತೋಡಿಕೊಂಡಿದ್ದಾರೆ.

ಭಯೋತ್ಪಾದನೆ ವಿರುದ್ಧ ಸಮರದಲ್ಲಿ ನಾವು ಅಮೆರಿಕಕ್ಕೆ ನೆರವು ನೀಡಿದೆವು. ಅದರಿಂದಾಗಿಯೇ ಅವಮಾನ ಎದುರಿಸಬೇಕಾಯಿತು. ಅಫಘಾನಿಸ್ತಾನದಲ್ಲಿ ಅವರು ಯಶಸ್ವಿಯಾಗದಿದ್ದರೂ ಅದಕ್ಕೂ ಪಾಕಿಸ್ತಾನವನ್ನೇ ಹೊಣೆಯಾಗಿಸುತ್ತಾರೆ ಎಂದು ಇಮ್ರಾನ್​ ಹೇಳಿದ್ದಾರೆ.
ಅಬೋಟಾಬಾದ್​ನಲ್ಲಿ ಅಮೆರಿಕದವರು ಒಸಾಮಾ ಬಿನ್​ ಲಾಡೆನ್​ನನ್ನು ಹುತಾತ್ಮರಾಗಿಸಿದರು. ಆ ಬಳಿಕ ಏನಾಯ್ತು? ಇಡೀ ಜಗತ್ತೇ ನಮ್ಮನ್ನು ನಿಂದಿಸಿತು. ನಮ್ಮ ಅನುಮತಿ ಇಲ್ಲದೇ, ನಮ್ಮ ನೆಲಕ್ಕೆ ಬಂದು ಹತ್ಯೆಗೈದದ್ದು ಭಾರಿ ಅವಮಾನದ ಸಂಗತಿ ಎಂದು ಇಮ್ರಾನ್​ ಉದಾಹರಣೆ ನೀಡಿದರು.

ಇನ್ನೊಂದು ನಿದರ್ಶನದಲ್ಲಿ, ಪಾಕ್​ ನೆಲದಲ್ಲಿ ಡ್ರೋನ್​ ದಾಳಿ ನಡೆಸಿ ಮತ್ತೆ ಅವಮಾನಿಸಿದರು ಎಂದು ಇಮ್ರಾನ್​ ಹೇಳಿದರು. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ, ಪಾಕ್​ನ ಪ್ರತಿಪಕ್ಷಗಳು ಹಾಗೂ ನೆಟ್ಟಿಗರು ಇಮ್ರಾನ್​ ನಡೆಯನ್ನು ಖಂಡಿಸಿದ್ದಾರೆ.

ಒಸಮಾ ಬಿನ್​ ಲಾಡೆನ್​ ಪ್ರಧಾನಿಗಳ ಪಾಲಿಗೆ ಹಿರೋ ಆಗಿರಬಹುದು. ಆದರೆ, ದೇಶಕ್ಕಲ್ಲ ಎಂದು ಟೀಕಿಸಿದ್ದಾರೆ. ಒಸಮಾನನ್ನು ಈ ಹಿಂದೆಯೂ ಇಮ್ರಾನ್​ ಖಾನ್​ ಶ್ಲಾಘಿಸಿದ್ದರು. ತಮ್ಮ ಹೇಳಿಕೆಗೆ ಇಮ್ರಾನ್​ ಸ್ಪಷ್ಟನೆಯನ್ನೂ ನೀಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net