

ನವದೆಹಲಿ: ಹೊಸ ಪಾಕಿಸ್ತಾನದ ಭರವಸೆ ನೀಡಿದ ಇಮ್ರಾನ್ ಖಾನ್ನನ್ನು ಪೊಲೀಸರು ಬಂಧಿಸಿದ್ದಾರೆ. ಜತೆಗೆ ಐವರು ಬೆಂಬಲಿಗರನ್ನೂ ಜೈಲಿನ ಒಳಗೆ ಹಾಕಿದ ಪ್ರಸಂಗ ನಡೆದಿದೆ. ಗೆದ್ದು ಬೀಗಿದ ಇವರೆಲ್ಲ ಕೆಲವೇ ಕ್ಷಣಗಳಲ್ಲಿ ತಲೆ ಕೆಡಿಸಿಕೊಳ್ಳುವಂತಾಗಿದೆ.
ಹೀಗೊಂದು ಪ್ರಕರಣ ಉತ್ತರಪ್ರದೇಶದ ಅಮೇಠಿಯಲ್ಲಿ ನಡೆದಿದೆ. ಇಲ್ಲಿ ನೂತನವಾಗಿ ಆಯ್ಕೆ ಆದ ಗ್ರಾಮ ಪ್ರಧಾನ್ ಇಮ್ರಾನ್ ಖಾನ್ ಎಂಬಾತನೇ ಬಂಧಿತ ಆರೋಪಿ. ಈತ ವಿಜಯೋತ್ಸವ ಆಚರಣೆ ವೇಳೆ ಹೊಸ ಪಾಕಿಸ್ತಾನದ ಭರವಸೆ ನೀಡುವಂತೆ ಸಂದೇಶ ರವಾನಿಸಿದ್ದರಿಂದ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ರಾಮ್ಗಂಜ್ ಪ್ರದೇಶದ ಮಂಗ್ರಾ ಗ್ರಾಮದ ಪ್ರಧಾನ್ ಆಗಿ ಆಯ್ಕೆಯಾದ ಇಮ್ರಾನ್, ಮೇ 4ರಂದು ವಿಜಯೋತ್ಸವ ಆಚರಿಸಿದ್ದಾನೆ. ಈ ವೇಳೆ ಬೆಂಬಲಿಗರೊಂದಿಗೆ 'ದೇಖೋ ಇಮ್ರಾನ್ ಖಾನ್ ಆಯಾ, ನಯಾ ಪಾಕಿಸ್ತಾನ್ ಲಾಯಾ' ಎಂಬ ಹಾಡಿನೊಂದಿಗೆ ಮೆರವಣಿಗೆ ಸಾಗಿದ್ದಾನೆ. ಈ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಅಮೇಠಿ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟರ್ ಅರುಣ್ ಕುಮಾರ್ ತನಿಖೆಗೆ ಆದೇಶಿಸಿದ್ದರು.
ಪರಿಣಾಮವಾಗಿ ಇಮ್ರಾನ್ ಖಾನ್ ಹಾಗೂ ಆತನ ಬೆಂಬಲಿಗರ ವಿರುದ್ಧ ಮೇ 6ರಂದು ಎಫ್ಐಆರ್ ದಾಖಲಾಗಿತ್ತು. ಮಾತ್ರವಲ್ಲ ಅದರ ಮಾರನೇ ದಿನವೇ ಅವರನ್ನು ಬಂಧಿಸಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ವಿಜಯೋತ್ಸವ ಆಚರಿಸುವುದನ್ನು ನಿಷೇಧಿಸಿದ್ದರೂ ಇಮ್ರಾನ್ ಆ ನಿಯಮವನ್ನೂ ಉಲ್ಲಂಘಿಸಿದ್ದಾನೆ. ಆ ಬಗ್ಗೆಯೂ ಕೇಸ್ ದಾಖಲಿಸಿಕೊಳ್ಳಲಾಗಿದೆ. ಇಮ್ರಾನ್ ಖಾನ್ನ ಬೆಂಬಲಿಗರಾದ ಜಬೀರ್ ರೆಹಮಾನ್, ಮಕ್ಸೂದ್, ಇಷ್ತಿಕಾರ್, ಅಲೀಂ, ಶಾರುಖ್ ಖಾನ್ ಎಂಬವರನ್ನು ಪೊಲೀಸರು ಬಂಧಿಸಿದ್ದು, ಮೂರು ಸ್ಪೋರ್ಟ್ಸ್ ಬೈಕ್ಗಳನ್ನೂ ವಶ ಪಡಿಸಿಕೊಳ್ಳಲಾಗಿದೆ.