

ಬೆಂಗಳೂರು: ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಲಷ್ಕರ್‌ಎ-ತಯ್ಬ (ಎಲ್‌ಇಟಿ) ಶಂಕಿತ ಉಗ್ರನ ಜತೆಗೆ ಸಂಪರ್ಕ ಹೊಂದಿದ್ದ ಆರೋಪಿಯನ್ನು ಆರ್.ಟಿ.ನಗರ ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ.ನಗರದ ಮೊಹಮ್ಮದ್ ಅರ್ಷದ್ ಖಾನ್ (25) ಬಂಧಿತ. 17 ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ. ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ಆ.27ರಂದು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಸಲುವಾಗಿ ಕಸ್ಟಡಿಗೆ ಪಡೆಯಲಾಗಿದೆ. ಉಗ್ರ ಚಟುವಟಿಕೆಯಲ್ಲಿ ಮೊಹಮ್ಮದ್ ಪಾತ್ರ ಕಂಡುಬಂದಿಲ್ಲ ಎಂದು ಉತ್ತರ ವಿಭಾಗ ಡಿಸಿಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.
2017ರಲ್ಲಿ ಎಲ್‌ಇಟಿ ಶಂಕಿತ ಉಗ್ರ ಜುನೇದ್ ಮತ್ತು ಗ್ಯಾಂಗ್ ಆರ್.ಟಿ.ನಗರದಲ್ಲಿ ವ್ಯಾಪಾರಿಯನ್ನು ಹತ್ಯೆ ಮಾಡಿತ್ತು. ಇದರಲ್ಲಿ ಬಂಧನಕ್ಕೆ ಒಳಗಾಗಿದ್ದ 21 ಆರೋಪಿಗಳಲ್ಲಿ ಮೊಹಮ್ಮದ್ ಒಬ್ಬನಾಗಿದ್ದ. ಜಾಮೀನು ಪಡೆದು ಹೊರಬಂದ ಮೇಲೆ ಜುನೇದ್ ಜೊತೆಗೆ ಸಂಪರ್ಕ ಇರಲಿಲ್ಲ. ಆದರೆ, ರಾಬರಿ , ಸುಲಿಗೆ ಸೇರಿದಂತೆ 17 ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, 2020ರಲ್ಲಿ ರೌಡಿ ತೆರೆಯಲಾಗಿದೆ.
10 ಪ್ರಕರಣಗಳಲ್ಲಿ ಜಾಮೀನು ರಹಿತ ಬಂಧನ ವಾರಂಟ್ ಸಹ ಜಾರಿಯಾಗಿವೆ.
ಆದರೂ 4 ವರ್ಷದಿಂದ ಕೋರ್ಟ್‌ಗೆ ಹಾಜರಾಗದೆ ಪೊಲೀಸರಿಗೂ ಸಿಗದೇ ತಲೆಮರೆಸಿಕೊಂಡಿದ್ದ. ಪೊಲೀಸರು ಹಿಡಿಯಲು ಹೋದಾಗ ಕತ್ತು ಕೊಯ್ದುಕೊಳ್ಳುವ ನಾಟಕ ಮಾಡಿ ತಪ್ಪಿಸಿಕೊಳ್ಳುತ್ತಿದ್ದ. ಈತನ ಬಂಧನಕ್ಕೆ ರಚಿಸಿದ್ದ ವಿಶೇಷ ತಂಡ, ಮೊಹಮ್ಮದ್ ನೆಲೆಸಿದ್ದ ಆರ್.ಟಿ.ನಗರದ ಮನೆ ಮೇಲೆ ಕೆಲ ದಿನದಿಂದ ನಿಗಾವಹಿಸಿತ್ತು. ಮನೆಯಲ್ಲಿ ಇರುವುದನ್ನು ಖಚಿತಪಡಿಸಿಕೊಂಡ ಖಾಕಿ ಪಡೆ, ಆಗಸ್ಟ್ 27ರ ಬೆಳಗಿನ ಜಾವ 5 ಗಂಟೆಗೆ ಮನೆ ಮೇಲೆ ದಾಳಿ ನಡೆಸಿತ್ತು. ಆಗಲೂ ಮಾರಕಾಸದಿಂದ ಕತ್ತು ಕೊಯ್ದುಕೊಳ್ಳುವ ಹೈಡ್ರಾಮಾ ಮಾಡಿ 2ನೇ ಮಹಡಿಯಿಂದ ಜಿಗಿದು ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದ. ಕೊನೆಗೆ ಆರೋಪಿಯ ಬೆನ್ನತ್ತಿ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.