ನಿರುದ್ಯೋಗಿಗಳ ಮಾಹಿತಿ ಕದ್ದು ಭತ್ಯೆ ಲಪಟಾಯಿಸಿದ ವಂಚಕರು

us fraud
Published on

ದೇಶದಾದ್ಯಂತ ಇರುವ ಲಕ್ಷಾಂತರ ನಿರುದ್ಯೋಗಿಗಳ ಮಾಹಿತಿಯನ್ನು ಕದ್ದಿರುವ ಸೈಬರ್​ ವಂಚಕರು ಅವರೆಲ್ಲರಿಗೆ ಸೇರಬೇಕಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ನಿರುದ್ಯೋಗ ಭತ್ಯೆಯನ್ನು ದೋಚಿದ್ದಾರೆ. ಸರ್ಕಾರ ಈ ಬಗ್ಗೆ ತನಿಖೆಗೆ ಆದೇಶಿಸಿದೆ.

ಅಮೆರಿಕದ ವಾಷಿಂಗ್ಟನ್​ನಲ್ಲಿರುವ ಲಕ್ಷಾಂತರ ನಿರುದ್ಯೋಗಿಗಳು ಈಗ ಕೆಲಸವೂ ಇಲ್ಲದೆ, ಇತ್ತ ಭತ್ಯೆಯೂ ಇಲ್ಲದೆ ಉಪವಾಸ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಈ ವಂಚನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕದ ಉದ್ಯೋಗ ಭದ್ರತಾ ಇಲಾಖೆ ತನಿಖೆಗೆ ಆದೇಶಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕದ ಉದ್ಯೋಗ ಭದ್ರತಾ ಇಲಾಖೆಯ ಕಮಿಷನರ್​ ಸುಜಿ ಲೆವೀನ್​, ಫೆಡರಲ್​ ಪೊಲೀಸರು ಈಗಾಗಲೆ ತನಿಖೆ ಆರಂಭಿಸಿದ್ದಾರೆ. ಹಣಕಾಸು ಸಂಸ್ಥೆಗಳು ಮತ್ತು ಅಮೆರಿಕದ ಕಾರ್ಮಿಕ ಇಲಾಖೆಯ ಸಹಕಾರದೊಂದಿಗೆ ತನಿಖೆ ನಡೆಯುತ್ತಿದೆ. ವಂಚಕರ ಬ್ಯಾಂಕ್​ ಖಾತೆಗೆ ಸಂದಾಯವಾಗಿರುವ ಹಣವನ್ನು ವಾಪಸು ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಎಷ್ಟು ನಿರುದ್ಯೋಗಿಗಳಿಗೆ ವಂಚನೆಯಾಗಿದೆ, ವಂಚನೆಯ ಮೊತ್ತ ಎಷ್ಟು ಎಂಬ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿರುವ ಸುಜಿ ಲೆವೀನ್​, ಸರ್ಕಾರ ತಕ್ಷಣವೇ ನಿರುದ್ಯೋಗ ಭತ್ಯೆ ವಿತರಣೆಯನ್ನು ಸ್ಥಗಿತಗೊಳಿಸಿದೆ. ತನ್ಮೂಲಕ ಕೋಟ್ಯಂತರ ಡಾಲರ್​ ಮೊತ್ತದ ಹಣದ ಉಳಿತಾಯವಾಗಿದೆ ಎಂದು ಹೇಳಿದ್ದಾರೆ.

ಸದ್ಯಕ್ಕೆ ನಿರುದ್ಯೋಗ ಭತ್ಯೆಗೆ ಸಲ್ಲಿಸಿರುವ ಎಲ್ಲ ಮನವಿಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಈ ಹಿಂದೆ ನಿರುದ್ಯೋಗಿಗಳು ಅರ್ಜಿ ಸಲ್ಲಿಸಿದ 24ರಿಂದ 48 ಗಂಟೆಯೊಳಗೆ ಭತ್ಯೆಯನ್ನು ಅವರವರ ಬ್ಯಾಂಕ್​ ಖಾತೆಗಳಿಗೆ ನೇರವಾಗಿ ಸಂದಾಯ ಮಾಡಲಾಗುತ್ತಿತ್ತು. ಆದರೆ, ಈಗ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿರುವುದರಿಂದ, ಭತ್ಯೆ ಹಂಚಿಕೆಯಲ್ಲಿ ಎರಡು ದಿನ ವಿಳಂಬವಾಗುತ್ತಿದೆ ಎಂದು ವಿವರಿಸಿದ್ದಾರೆ.

ನೈಜೀರಿಯಾದವರ ಕೈವಾಡ: ನಿರುದ್ಯೋಗ ಭತ್ಯೆ ವಂಚನೆ ಪ್ರಕರಣದ ಹಿಂದೆ ನೈಜೀರಿಯಾದವರ ಕೈವಾಡ ಇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೆಲ ವಾರಗಳ ಹಿಂದಷ್ಟೇ ಅಮೆರಿಕ ಬೇಹುಗಾರಿಕಾ ಪಡೆ ಸಿಬ್ಬಂದಿ ವಾಷಿಂಗ್ಟನ್​ನಲ್ಲಿ ಬೃಹತ್​ ವಂಚನೆ ಎಸಗಲು ನೈಜೀರಿಯಾದ ವಂಚಕರ ಜಾಲ ಸಕ್ರಿಯವಾಗಿರುವುದಾಗಿ ಎಚ್ಚರಿಕೆ ನೀಡಿತ್ತು. ನ್ಯೂಯಾರ್ಕ್​ ಟೈಮ್ಸ್​ ಮತ್ತು ಸಿಯಾಟಲ್​ ಟೈಮ್ಸ್​ ಪತ್ರಿಕೆಗಳು ಈ ಬಗ್ಗೆ ವರದಿ ಮಾಡಿದ್ದವು. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಲು ಸುಜಿ ಲೆವೀನ್​ ನಿರಾಕರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net