

ನವದೆಹಲಿ: ಎರಡು ದಿನಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಅಪ್ಪಳಿಸಿದ ಅಂಫಾನ್ ಚಂಡಮಾರುತಕ್ಕೆ ಸಿಲುಕಿ ಬುಡಮೇಲಾಗಿ ಬಿದ್ದಿದ್ದ ಮಾವಿನಹಣ್ಣಿನ ಮರವನ್ನು ಮರುನಾಟಿ ಮಾಡಿಸುವ ಮೂಲಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪರಿಸರ ಪ್ರೇಮ ಮೆರೆದಿದ್ದಾರೆ.
ಸೌರವ್ ಗಂಗೂಲಿ ಕೋಲ್ಕತಾದ ಬೆಹಲಾ ಬಡಾವಣೆಯಲ್ಲಿರುವ ಐಷಾರಾಮಿ ಮನೆಯಲ್ಲಿ ವಾಸವಾಗಿದ್ದಾರೆ. ಮನೆಯ ಸುತ್ತ ಹಲವು ಮರಗಿಡಗಳನ್ನು ಬೆಳೆಸಿದ್ದಾರೆ. ಎರಡು ದಿನಗಳ ಹಿಂದೆ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದ್ದ ಅಂಫಾನ್ ಚಂಡಮಾರುತಕ್ಕೆ ಸಿಲುಕಿ ಗಂಗೂಲಿ ಅವರ ಮನೆ ತೋಟದಲ್ಲಿದ್ದ ಹಳೆಯ ಮಾವಿನಮರ ಬುಡಮೇಲಾಗಿ ಬಿದ್ದಿತ್ತು.
ತಕ್ಷಣವೇ ಅದರ ಮರುನಾಟಿಗೆ ಕ್ರಮ ಕೈಗೊಂಡ ಅವರು, ಮರುನಾಟಿ ಪ್ರಕ್ರಿಯೆಯ ತಾವೂ ಸಹಿತ ಪಾಲ್ಗೊಂಡಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆ ಮರವನ್ನು ಮೇಲಕ್ಕೆ ಎತ್ತಿ, ಲಂಬಾಕಾರವಾಗಿ ನಿಲ್ಲಿಸಿ, ಮರುನಾಟಿ ಮಾಡಬೇಕಾಯಿತು. ಅದು ತುಂಬಾ ದೊಡ್ಡದಾಗಿದ್ದರಿಂದ, ಅದನ್ನು ಮರುನಾಟಿ ಮಾಡಲು ತುಂಬಾ ಪ್ರಯಾಸಪಡಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.