

ಶಿವಮೊಗ್ಗ: ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದಾಳಿ ಮತೀಯ ಸಂಘಟನೆಗಳ ಕೆಲಸವಲ್ಲ. ಅಲ್ಲಿನ ಸರ್ಕಾರದ ಪ್ರಯೋಜಕತ್ವದಲ್ಲೇ ಈ ಕೃತ್ಯ ನಡೆಯುತ್ತಿದೆ. ಬಾಂಗ್ಲಾದ ಮೇಲೆ ರಾಜತಾಂತ್ರಿಕ ನಿರ್ಬಂಧ ವಿಧಿಸುವುದೊಂದೇ ಇದಕ್ಕೆ ಪರಿಹಾರ ಎಂದು ಕೂಡಲಿ ಶೃಂಗೇರಿ ಮಠದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟರು.
ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಅಲ್ಲಿನ ಸಾಧು-ಸಂತರ ರಕ್ಷಣೆಗೆ ಆಗ್ರಹಿಸಿ ಹಿಂದು ಹಿತರಕ್ಷಣಾ ಸಮಿತಿಯಿಂದ ಮಂಗಳವಾರ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಬಾಂಗ್ಲಾದೊಂದಿಗೆ ಭಾರತ ಆರ್ಥಿಕ ವ್ಯವಹಾರವನ್ನು ಸ್ಥಗಿತಗೊಳಿಸಬೇಕು. ಅಲ್ಲಿಂದ ಯಾವುದೇ ವಸ್ತುಗಳನ್ನು ಆಮದು ಮಾಡಿಕೊಳ್ಳಬಾರದು. ಇಲ್ಲಿಗೆ ಯಾವುದನ್ನೂ ರಫ್ತು ಮಾಡಬಾರದು ಎಂದು ಆಗ್ರಹಿಸಿದರು.
ದೇಶದ ಸಂವಿಧಾನವನ್ನೂ ಮೀರಿ ಅಲ್ಲಿನ ಒಂದು ದೊಡ್ಡ ಸಮಾಜ ಇನ್ನೊಂದು ಸಣ್ಣ ಸಮುದಾಯದ ಮೇಲೆ ದೌರ್ಜನ್ಯ ನಡೆಸುತ್ತಿದೆ. ಹೀಗಿದ್ದರೂ ಅಲ್ಲಿನ ಸರ್ಕಾರ ಕಾನೂನು ಕ್ರಮ ಜರುಗಿಸುತ್ತಿಲ್ಲ ಎಂದರೆ ಪರೋಕ್ಷವಾಗಿ ಸರ್ಕಾರ ಇದನ್ನು ಪ್ರೋತ್ಸಾಹಿಸುತ್ತಿದೆ ಎಂದೇ ಅರ್ಥ. ಹೀಗಾಗಿ ಅದು ಸರ್ಕಾರಿ ಪ್ರಾಯೋಜಿತ ಕೃತ್ಯ ಎಂದು ದೂರಿದರು.
ಆರ್ಥಿಕ ದಿಗ್ಬಂಧನದಂತಹ ಕ್ರಮಗಳು ಇಲ್ಲಿ ಹೆಚ್ಚು ಪ್ರಸ್ತುತವಾಗುತ್ತವೆ. ಜತೆಗೆ ಆ ದೇಶದೊಂದಿಗೆ ಆರ್ಥಿಕ ಚಟುವಟಿಕೆ ನಡೆಸದಂತೆ ವಿಶ್ವದ ಇತರ ದೇಶಗಳ ಮೇಲೂ ಭಾರತ ಒತ್ತಡ ಹೇರಬೇಕು. ಭಾರತದಲ್ಲಿರುವ ಬಾಂಗ್ಲಾ ನಿವಾಸಿಗಳನ್ನು ಅಲ್ಲಿಗೆ ಕಳಿಸಬೇಕು. ಅಕ್ರಮ ನುಸುಳುಕೋರರನ್ನೂ ಆ ದೇಶಕ್ಕೆ ಮರಳಿಸಬೇಕು. ಬಾಂಗ್ಲಾದಲ್ಲಿರುವ ಜನರ ಮೇಲೆ, ಅಲ್ಲಿನ ಸರ್ಕಾರದ ಮೇಲೆ ನಾವು ಒತ್ತಡ ಹೇರುವುದು ಸಾಧ್ಯವಿಲ್ಲ. ಅಂತಹ ಜನರಿಂದ ಸೌಹಾರ್ದ ಬಯಸುವುದು ಅರ್ಥವಿಲ್ಲದ್ದು. ಹೀಗಾಗಿ ರಾಜತಾಂತ್ರಿಕ ಕ್ರಮಕ್ಕಾಗಿ ನಮ್ಮದೇ ಸರ್ಕಾರವನ್ನು ಒತ್ತಾಯಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್, ವಿಭಾಗ ಸಹಕಾರ್ಯವಾಹ ಮಧುಕರ ಮತ್ತೂರು, ಜಿಲ್ಲಾ ಸಂಘಚಾಲಕ ಬಿ.ಎ.ರಂಗನಾಥ, ವಿಎಚ್‌ಪಿ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ್, ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರವೀಣ್, ಬಜರಂಗದಳದ ವಿಭಾಗ ಸಂಯೋಜಕ ರಾಜೇಶ್ ಗೌಡ, ದೇವರಾಜ್ ಅರಳೇಹಳ್ಳಿ ಇತರರಿದ್ದರು. ಪ್ರತಿಭಟನಾ ಸಭೆ ಬಳಿಕ ಡಿಸಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.