ಕಾಶ್ಮೀರದಲ್ಲಿ ಸಹಜ ಜೀವನ ಸ್ಥಾಪಿಸಲು ಭಾರತ ಧನಾತ್ಮಕ ಹೆಜ್ಜೆ ಇಟ್ಟಿದ್ದರೂ ಕೆಲ ನಿರ್ಬಂಧ ಹಾಗೇ ಉಳಿದಿದೆ: ಯುರೋಪ್​​ ಒಕ್ಕೂಟ

European Union
Published on

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಹಜ ಜೀವನ ಸ್ಥಾಪಿಸಲು ಭಾರತವು ಧನಾತ್ಮಕ ಹೆಜ್ಜೆಯನ್ನು ಇಟ್ಟಿದೆ. ಆದರೆ, ಉಳಿದಿರುವ ನಿರ್ಬಂಧಗಳನ್ನು ಆದಷ್ಟು ಬೇಗ ತೆರವುಗೊಳಿಸುವುದು ಮುಖ್ಯವಾಗಿದೆ ಎಂದು ಯುರೋಪ್​​ ಒಕ್ಕೂಟ ಶುಕ್ರವಾರ ತಿಳಿಸಿದೆ.

ಯುರೋಪ್​​ ಒಕ್ಕೂಟವು ಸೇರಿ 25 ದೇಶದ ಪ್ರತಿನಿಧಿಗಳನ್ನು ಒಳಗೊಂಡ ನಿಯೋಗವು ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ಅವಲೋಕಿಸಲು ಕೆಲ ದಿನಗಳ ಹಿಂದಷ್ಟೇ ಜಮ್ಮು ಹಾಗೂ ಶ್ರೀನಗರಕ್ಕೆ ಭೇಟಿ ನೀಡಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ರಚನೆ ಮಾಡಿದ ಬಳಿಕ ಉಂಟಾದ ಪರಿಸ್ಥಿತಿಯನ್ನು ಅರಿಯಲು ನಿಯೋಗವು ಆಗಮಿಸಿತ್ತು.

ವಿದೇಶಿ ನಿಯೋಗದಲ್ಲಿ ಜರ್ಮನಿ, ಕೆನಡಾ, ಫ್ರಾನ್ಸ್​, ಇಟಲಿ, ಪೋಲೆಂಡ್, ನ್ಯೂಜಿಲೆಂಡ್​, ಮೆಕ್ಸಿಕೋ, ಅಫ್ಘಾನಿಸ್ಥಾನ, ಆಸ್ಟ್ರಿಯಾ, ಉಜ್ಬೇಕಿಸ್ತಾನ ಹಾಗೂ ಯುರೋಪ್​​ ಒಕ್ಕೂಟದ ಪ್ರತಿನಿಧಿಗಳಿದ್ದರು.

ಇದೀಗ ನಿಯೋಗವು ತಮ್ಮ ವರದಿಯನ್ನು ನೀಡಿದ್ದು, ಭಾರತ ಸರ್ಕಾರವು ಜಮ್ಮು ಕಾಶ್ಮೀರದಲ್ಲಿ ಸಹಜ ಸ್ಥಿತಿಯನ್ನು ಮರಳಿ ತರಲು ಪಾಸಿಟಿವ್​ ಹೆಜ್ಜೆಯನ್ನು ಇಟ್ಟಿದೆ. ಆದರೂ, ಕೆಲವು ನಿರ್ಬಂಧಗಳು ಹಾಗೇ ಉಳಿದುಕೊಂಡಿದೆ. ಅದರಲ್ಲೂ ಪ್ರಮುಖವಾಗಿ ಮೊಬೈಲ್​ ಸೇವೆಗಳ ಮೇಲಿನ ನಿರ್ಬಂಧ ಮತ್ತು ಕೆಲ ರಾಜಕೀಯ ನಾಯಕರ ಗೃಹಬಂಧನ ಹಾಗೇ ಉಳಿದಿದೆ ಎಂದು ಯುರೋಪ್​​ ಒಕ್ಕೂಟ ಶುಕ್ರವಾರ ಹೇಳಿದೆ.

ಭದ್ರತಾ ವಿಚಾರ ಬಂದಾಗ ನಿರ್ಬಂಧ ಹೇರುವುದು ಪ್ರಮುಖವೇ, ಆದರೂ ಆದಷ್ಟು ಬೇಗ ಅವುಗಳನ್ನು ತೆರವುಗೊಳಿಸಬೇಕು ಎಂದು ಯುರೋಪ್​​ ಒಕ್ಕೂಟದ ವಿದೇಶಾಂಗ ವ್ಯವಹಾರ ಮತ್ತು ಭದ್ರತಾ ನಿಯಮಗಳ ವಕ್ತರಾ ವಿರ್ಜಿನೈ ಬಟ್ಟು ಹೆನ್ರಿಕ್​ಸನ್​ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net