ಸಂಪಾದಕೀಯ: ಮಹತ್ವದ ಕ್ರಮ; ಸ್ವಾವಲಂಬನೆ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ

edit 3
Published on

‘ಕರೊನಾ ಸಂಕಷ್ಟವನ್ನೂ ಅವಕಾಶವಾಗಿ ಬಳಸಿಕೊಂಡು, ಮುಂದೆ ಸಾಗುತ್ತೇವೆ’ ಎಂದು ಪುನರುಚ್ಚರಿಸಿರುವ ಪ್ರಧಾನಿ ನರೇಂದ್ರ ಮೋದಿ ಕಲ್ಲಿದ್ದಲು ವಲಯವನ್ನು ಖಾಸಗಿ ಸಂಸ್ಥೆಗಳಿಗೆ ಮುಕ್ತಗೊಳಿಸುವ ಪ್ರಕ್ರಿಯೆಗೆ ಗುರುವಾರ ಚಾಲನೆ ನೀಡಿದರು. ಈ ಮೂಲಕ, ಕಲ್ಲಿದ್ದಲು ವಲಯದಲ್ಲಿ ಇರುವ ಸರ್ಕಾರದ ಏಕಸ್ವಾಮ್ಯ ರದ್ದುಗೊಂಡಿದೆ ಮತ್ತು ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಲಿದೆ. ಪ್ರಧಾನಿ ಪ್ರಸಕ್ತ 41 ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ಉದ್ಘಾಟಿಸಿ, ‘ಕಲ್ಲಿದ್ದಲು ವಲಯ ಅನ್​ಲಾಕ್ ಮಾಡಲಾಗಿದೆ’ ಎಂದಿದ್ದಾರೆ. ಖಾಸಗಿ ಸಹಭಾಗಿತ್ವದಿಂದ ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸುವಲ್ಲಿ ಈ ಕ್ರಮ ನೆರವಾಗಲಿದೆ.

ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪವನ್ನು ಹೊಂದಿದೆ. ಎರಡನೇ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಆದರೂ ವಿದ್ಯುತ್ ಉತ್ಪಾದನೆಯ ಅಗತ್ಯಗಳಿಗಾಗಿ ಕಲ್ಲಿದ್ದಲನ್ನು ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಒಂದಾಗಿದೆ. ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಕಲ್ಲಿದ್ದಲು ಗಣಿಗಾರಿಕೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದ್ದು, ಈ ಕ್ಷೇತ್ರದಲ್ಲಿ ಉದ್ಯೋಗಸೃಷ್ಟಿಗೂ ಪೂರಕವಾಗಿ ಪರಿಣಮಿಸಲಿದೆ. ಭಾರತದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಶೇಕಡ 65ಕ್ಕೂ ಹೆಚ್ಚು ಪಾಲು ಉಷ್ಣವಿದ್ಯುತ್​ನದ್ದು. ಬಹುತೇಕ ಉಷ್ಣವಿದ್ಯುತ್ ಘಟಕಗಳಲ್ಲಿ ಕಲ್ಲಿದ್ದಲನ್ನೇ ಬಳಸಲಾಗುತ್ತದೆ. ಈವರೆಗೆ ಭಾರತದ ಕಲ್ಲಿದ್ದಲ್ಲು ಗಣಿಗಾರಿಕೆಯಲ್ಲಿ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಸಂಸ್ಥೆಯ ಏಕಸ್ವಾಮ್ಯವಿತ್ತು. 2025-26ರ ವೇಳೆಗೆ ವಿದ್ಯುತ್ ಉತ್ಪಾದನೆಗಾಗಿ ವಾರ್ಷಿಕ 100 ಕೋಟಿ ಟನ್ ಕಲ್ಲಿದ್ದಲು ಬೇಕಾಗುವ ಅಂದಾಜಿದೆ. ಕಳೆದ ವರ್ಷ ದೇಶದಲ್ಲಿ 60 ಕೋಟಿ ಟನ್ ಕಲ್ಲಿದ್ದಲು ಉತ್ಪಾದಿಸಲಾಗಿದೆ. ಈಗ, ಗಣಿಗಾರಿಕೆಯನ್ನು ಖಾಸಗಿ ವಲಯಕ್ಕೆ ತೆರೆದಿರುವುದರಿಂದ ಉತ್ಪಾದನೆ ಹೆಚ್ಚಲಿದೆ. ಆ ಮೂಲಕ ಆಮದಿನ ಮೇಲಿನ ಅವಲಂಬನೆಯೂ ಗಣನೀಯವಾಗಿ ತಗ್ಗಲಿದೆ.

2004-09ರ ಅವಧಿಯಲ್ಲಿ ಕಲ್ಲಿದ್ದಲು ಗಣಿ ಹಂಚಿಕೆ ಹಗರಣ ಭಾರಿ ಸುದ್ದಿ ಮಾಡಿತ್ತು. ಈಗ, ಗಣಿಗಾರಿಕೆಯ ಷರತ್ತುಗಳನ್ನು ಸಡಿಲಿಸಲಾಗಿರುವುದರಿಂದ ಮತ್ತೆ ಅಂಥ ಅಪಸವ್ಯಗಳು, ಅವ್ಯವಹಾರಗಳು ನಡೆಯದಂತೆ ಜಾಗ್ರತೆ ವಹಿಸಬೇಕಿದೆ. ಅಲ್ಲದೆ, ಸರ್ಕಾರಿ ಸಂಸ್ಥೆ ಸಿಐಎಲ್​ನ ಮುಂದಿನ ಕಾರ್ಯಸ್ವರೂಪ ಹೇಗಿರಲಿದೆ, ಸರ್ಕಾರಿ ಸ್ವಾಮ್ಯದ ಇತರ ಕಂಪನಿಗಳಂತೆ ಇದೂ ನಷ್ಟದ ಕೂಪಕ್ಕೆ ಬೀಳಲಿದೆಯೇ ಎಂಬ ಪ್ರಶ್ನೆಗಳು ಎದುರಾಗಿವೆ. ಸರ್ಕಾರ ಈ ನಿಟ್ಟಿನಲ್ಲಿ ಸಮರ್ಪಕ ಉತ್ತರ ಕಂಡುಕೊಳ್ಳಬೇಕಿದೆ.

ಮತ್ತೊಂದೆಡೆ, ಕರೊನಾ ಹಾವಳಿ ಹೊತ್ತಲ್ಲಿ ಲಕ್ಷಾಂತರ ವಲಸೆ ಕಾರ್ವಿುಕರು ಸ್ವಗ್ರಾಮಗಳಿಗೆ ಮರಳಿದ್ದಾರೆ. ಅಲ್ಲಿ ಅವರ ಜೀವನ ಹೇಗಿರಲಿದೆ, ಮತ್ತೆ ಉದ್ಯೋಗದ ಸಮಸ್ಯೆ ತಲೆದೋರಲಿದೆಯೆ ಎಂಬ ಕಳವಳಕ್ಕೆ ಸರ್ಕಾರ ಪರಿಹಾರ ನೀಡಲು ಹೊರಟಿದೆ. ವಲಸೆ ಕಾರ್ವಿುಕರಿಗೆ ಉದ್ಯೋಗ ಒದಗಿಸಲು ಮತ್ತು ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯ ಸೃಷ್ಟಿಗಾಗಿ -ಠಿ; 50 ಸಾವಿರ ಕೋಟಿ ವಿನಿಯೋಗಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ‘ಗರೀಬ್ ಕಲ್ಯಾಣ್ ರೋಜಗಾರ್’ ಯೋಜನೆಗೆ ನಾಳೆ (ಜೂನ್ 20) ಚಾಲನೆ ನೀಡಲಿದೆ. ದೇಶದ ಆರು ರಾಜ್ಯಗಳ 116 ಜಿಲ್ಲೆಗಳಿಗೆ ಲಕ್ಷಾಂತರ ವಲಸೆ ಕಾರ್ವಿುಕರು ಮರಳಿದ್ದು, ಅಲ್ಲೇ ಉದ್ಯೋಗಾವಕಾಶ ಒದಗಿಸಲು ಈ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ. ಇದು ಪರಿಣಾಮಕಾರಿಯಾಗಿ ಜಾರಿಯಾಗಲಿ ಮತ್ತು ಕರ್ನಾಟಕವನ್ನೂ ಒಳಗೊಳ್ಳಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net