ಮಹತ್ವದ ತೀರ್ಪು

SIR
SIR
Published on
ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್) ನಡೆಸುವ ಭಾರತದ ಚುನಾವಣಾ ಆಯೋಗದ ಅಧಿಕಾರವನ್ನು ಸುಪ್ರೀಂ ಕೋರ್ಟ್ ಬುಧವಾರ ಎತ್ತಿಹಿಡಿದಿದೆ. ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸಲು ಎಸ್​ಐಆರ್ ಅಗತ್ಯವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅವರ ನೇತೃತ್ವದ ಪೀಠವು ಅಭಿಪ್ರಾಯಪಟ್ಟಿದೆ. ಚುನಾವಣಾ ಆಯೋಗದ ಅಧಿಕಾರವನ್ನು ಎತ್ತಿಹಿಡಿಯುವ ಮೂಲಕ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಗೆ ದೊಡ್ಡ ಬಲ ನೀಡಿದೆ. ಇನ್ನು ಮುಂದೆ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಆಯೋಗದ ಸಾಂವಿಧಾನಿಕ ಪ್ರಕ್ರಿಯೆಗಳನ್ನು ಸುಲಭವಾಗಿ ಪ್ರಶ್ನಿಸಲು ಸಾಧ್ಯವಿಲ್ಲ.
ಎಸ್​ಐಆರ್ ಕುರಿತಂತೆ ದೇಶದ ರಾಜಕೀಯ ವಲಯದಲ್ಲಿ ಬಿರುಗಾಳಿಯೇ ಎದ್ದಿತ್ತು ಮತ್ತು ಕೆಲ ರಾಜಕೀಯ ಪಕ್ಷಗಳು ಚುನಾವಣಾ ಆಯೋಗ ಮತ್ತು ಆಯೋಗದ ಮುಖ್ಯ ಆಯುಕ್ತರನ್ನು ಟೀಕಿಸಿದ್ದವು. ಕಾಲಕಾಲಕ್ಕೆ ಮತದಾರರ ಪಟ್ಟಿಯ ಪರಿಷ್ಕರಣೆ ಅತ್ಯಗತ್ಯ. ಆದರೆ, ಇದನ್ನು ರಾಜಕೀಯ ಕಾರಣಗಳಿಗಾಗಿ ವಿರೋಧಿಸುವುದು ಸೂಕ್ತವಲ್ಲ. ದೇಶದಲ್ಲಿ 1952ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದ ಸಮಯದಿಂದ ಈವರೆಗೂ ಚುನಾವಣೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳು ಮತ್ತು ಸುಧಾರಣೆಗಳು ಆಗಿವೆ. ಆದ್ದರಿಂದ, ಪಕ್ಷಗಳು ಬರೀ ರಾಜಕೀಯ ಲಾಭ ಅಥವಾ ಮತಬ್ಯಾಂಕ್​ನ ಚಿಂತೆ ಮಾಡದೆ ವ್ಯವಸ್ಥೆಯ ಶುದ್ಧೀಕರಣಕ್ಕೆ ಆದ್ಯತೆ ನೀಡಬೇಕು. ಎಸ್​ಐಆರ್​ನಿಂದಾಗಿಯೇ ಬಿಹಾರದಲ್ಲಿ 65 ಲಕ್ಷ ಅಕ್ರಮ ಮತದಾರರು ಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಎಸ್​ಐಆರ್ ನಡೆಸಲು ತೀರ್ಮಾನಿಸಿರುವುದು ಸೂಕ್ತವಾಗಿಯೇ ಇದೆ.
ಭಾರತೀಯ ಸಂವಿಧಾನದ ವಿಧಿ 324 ಮತ್ತು ಜನಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 21(3)ರ ಅಡಿಯಲ್ಲಿ ಚುನಾವಣಾ ಆಯೋಗಕ್ಕೆ ಇಂತಹ ವಿಶೇಷ ಪರಿಷ್ಕರಣೆ ನಡೆಸುವ ಸಂಪೂರ್ಣ ಅಧಿಕಾರವಿದೆ ಎಂದು ಕೋರ್ಟ್ ಹೇಳಿದೆ. ಇದು ಕೇವಲ ನಿಯಮಿತ ಪರಿಷ್ಕರಣೆಯಲ್ಲ, ವಿಶೇಷ ಸಂದರ್ಭಗಳಲ್ಲಿ ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಶುದ್ಧೀಕರಿಸಲು ಬಳಸುವ ಶಾಸನಬದ್ಧ ಕಾರ್ಯವಿಧಾನವಾಗಿದೆ. ನ್ಯಾಯಾಲಯದ ಮಾತುಗಳಲ್ಲೇ ಹೇಳುವುದಾದರೆ, ‘ಈ ಎಸ್​ಐಆರ್ ಪ್ರಜಾಪ್ರಭುತ್ವಕ್ಕೆ ಹೊಸ ಜೀವವನ್ನು ತುಂಬುತ್ತದೆ’.
18 ವರ್ಷ ತುಂಬಿದ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಯಾವುದೇ ತಾರತಮ್ಯವಿಲ್ಲದೆ ಮತದಾನದ ಹಕ್ಕು ಸಿಗುವಂತೆ ಮಾಡುವುದು, ಮರಣ ಹೊಂದಿದವರು, ಬೇರೆ ಊರುಗಳಿಗೆ ಶಾಶ್ವತವಾಗಿ ವಲಸೆ ಹೋದವರು ಅಥವಾ ಒಂದಕ್ಕಿಂತ ಹೆಚ್ಚು ಕಡೆ ಹೆಸರಿಟ್ಟುಕೊಂಡಿರುವ ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವುದು ಎಸ್​ಐಆರ್ ಉದ್ದೇಶ. ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಸಹಕರಿಸಿದರೆ ಮತದಾರರ ಪಟ್ಟಿಯ ಶುದ್ಧೀಕರಣ ಪರಿಣಾಮಕಾರಿಯಾಗಿ ನಡೆಸಲು ಸಾಧ್ಯ. ಆದರೆ, ಕೆಲ ಪಕ್ಷಗಳು ಎಸ್​ಐಆರ್ ಅನ್ನು ‘ವೋಟ್ ಚೋರಿ’ ಎಂದು ಟೀಕಿಸಿದ್ದು ಸರಿಯಲ್ಲ. ಕೇವಲ ನೈಜ ಮತ್ತು ಅರ್ಹ ನಾಗರಿಕರು ಮಾತ್ರ ಮತ ಚಲಾಯಿಸುವುದನ್ನು ಖಚಿತಪಡಿಸಿಕೊಳ್ಳಲು, ಆ ಮೂಲಕ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ದಾರಿ ಮಾಡಿಕೊಡಲು ಎಸ್​ಐಆರ್ ಅಗತ್ಯ. ಪ್ರಜಾಪ್ರಭುತ್ವದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ಆದರೆ ಆ ಅಧಿಕಾರವು ಪಾರದರ್ಶಕ ಚುನಾವಣೆ ಮೂಲಕ ಬರಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net