ಮಹಾಲಯ ಪಕ್ಷದ ಮಹತ್ವ

pithrupaksha
Published on
ಭಾದ್ರಪದ ಕೃಷ್ಣ ಪಕ್ಷವನ್ನು ಪಿತೃಪಕ್ಷ, ಅಪರ ಪಕ್ಷ ಅಥವಾ ಮಹಾಲಯದ ಪಕ್ಷವೆಂದೂ ಕರೆದಿದ್ದಾರೆ. ಈ ಪಿತೃಪಕ್ಷದಲ್ಲಿ ಪ್ರತಿನಿತ್ಯವೂ ತಿಲತರ್ಪಣ, ಪಿಂಡಪ್ರದಾನಗಳ ಮುಖಾಂತರ ಪಿತೃದೇವತೆಗಳ ಆರಾಧನೆ ನಡೆಯುತ್ತದೆ.

ತೀರಿಹೋದ ಹಿರಿಯರಿಗಾಗಿ ಶ್ರದ್ಧೆಯಿಂದ ಮಾಡುವ ಕಾರ್ಯವೇ ಶ್ರಾದ್ಧವೆಂದಿದ್ದಾರೆ. ಅನೇಕರಿಗೆ ಇದನ್ನು ಮನೆಯಲ್ಲಿ ಮಾಡಬೇಕೋ ಬೇಡವೋ, ಇದು ವಾಗತ್ಯವೆಂಬ ಭಾವನೆಯೂ ಉಂಟು. ಆದರೆ ಮನೆಯಲ್ಲಿ ಯಾವುದೇ ಮಂಗಲಕಾರ್ಯವಿದ್ದಾಗ ಆದಿಯಲ್ಲಿ ಮೊದಲು ಮಾಡುವುದೇ ನಾಂದೀ ಸ್ಥಾಪನೆ. ಅದನ್ನು ನಾಂದೀ ಶ್ರಾದ್ಧವೆಂದೂ ಕರೆಯುತ್ತಾರೆ. ನಿಜವಾಗಿಯೂ ಇದೊಂದು ಪರಮಪುಣ್ಯ ಕಾರ್ಯ. ಇದನ್ನು ಶ್ರದ್ಧಾಭಕ್ತಿಯಿಂದ ಮಾಡಿ ಪಿತೃಪ್ರಸಾದವಾದರೆ ಮಕ್ಕಳು, ಮೊಮ್ಮಕ್ಕಳು, ಮುಂಬರುವ ಸಂತಾನಗಳೂ ಆಯಸ್ಸು ಆರೋಗ್ಯ ಪಡೆದು ಜೀವನದಲ್ಲಿ ಪ್ರಗತಿಯನ್ನು ಹೊಂದುತ್ತಾರೆ. ಆದರೆ ಪಿತೃಗಳು ನಿರಾಶರಾದರೆ ಭವಿಷ್ಯದ ಭಾಗ್ಯವೇ ಕೈತಪ್ಪುವುದು. ವಂಶಾಭಿವೃದ್ಧಿ ನಿಲ್ಲುವುದು. ಈ ರೀತಿ ಪಿತೃಗಳ ಆರಾಧನೆಯಿಂದ ದೇವತೆಗಳೂ ಒಲಿಯುತ್ತಾರೆ. ಆದ್ದರಿಂದ ಹಿರಿಯರ ಸಂತೃಪ್ತಿಗಾಗಿ ಈ ಪಿತೃಕಾರ್ಯವನ್ನು ಮಾಡುವುದು ಬಹಳ ಉತ್ತಮ ಎಂಬುದು ಅನೇಕ ಶ್ರುತಿ ಸ್ಮೃ ಪುರಾಣಗಳ ವಾಕ್ಯ.

ಇದನ್ನು ಯಾವುದೋ ಒಂದು ಸಂಪ್ರದಾಯವರು ಮಾತ್ರ ಆಚರಣೆ ಮಾಡುವುದಿಲ್ಲ. ಎಲ್ಲ ಪಂಥದವರು ತಮಗೆ ಜನ್ಮ ನೀಡಿದ ತಂದೆ-ತಾಯಿಯ ಋಣಪರಿಹಾರಕ್ಕಾಗಿ ಪಿತೃಕಾರ್ಯವನ್ನು ಮಾಡುತ್ತಾರೆ. ಮಹಾಲಯದ ದಿನಗಳು: ಯಾರ ಹಿರಿಯರು ಯಾವ ತಿಥಿಯಂದು ಮೃತರಾಗಿರುತ್ತಾರೋ ಆ ತಿಥಿಯಂದು ಪಕ್ಷವನ್ನು ಮಾಡುವುದು ಒಂದು ನಿಯಮವಾದರೆ, ಅನನುಕೂಲವಾದಲ್ಲಿ ಬೇರೆ ತಿಥಿಯಲ್ಲಿಯೂ ಅದರಲ್ಲೂ ಅಮಾವಾಸ್ಯೆಯಂದು ಮಾಡುವುದು ಶ್ರೇಷ್ಠ. ಆದ್ದರಿಂದಲೇ ಅದನ್ನು ‘ಸರ್ವಪಿತೃ ಅಮಾವಾಸ್ಯೆ’ ಎಂದಿದ್ದಾರೆ. ಆದರೆ ಕೆಲವು ವಿಶೇಷ ದಿನಗಳಿಗೆ ಇದು ನಿಯಮಿಸುವುದಿಲ್ಲ.

ಮುತೆôದೆಯಾಗಿ ಮೃತಳಾದ ತಾಯಿಯ ಪಕ್ಷಶ್ರಾದ್ಧವನ್ನು ಅವಿಧವಾ ನವಮಿಯಂದೇ ಆಚರಿಸಬೇಕು. ಅಪಘಾತದಲ್ಲಿ ಮೃತರಾದವರ ಪಕ್ಷವನ್ನು ಘಾತಚತುರ್ದಶಿಯಂದೇ ಮಾಡಬೇಕು. ಅದನ್ನು ಏಕೋದ್ದಿಷ್ಟ ಎಂದಿದ್ದಾರೆ. ಅವತ್ತು ಬೇರೆ ಪಕ್ಷಗಳನ್ನು ಮಾಡಲು ಬರುವುದಿಲ್ಲ. ಅನೇಕರ ಹಿರಿಯರು ಸಂನ್ಯಾಸ ಸ್ವೀಕರಿಸಿರುತ್ತಾರೆ. ಅವರ ಉದ್ದೇಶವಾಗಿ ಯತಿದ್ವಾದಶಿಯಂದು ಅನ್ನದಾನಾದಿಗಳನ್ನು ಮಾಡುತ್ತಾರೆ.

ಇಲ್ಲಿ ತಂದೆ ತಾಯಿಗಳನ್ನು ಮಾತ್ರ ಪರಿಗಣಿಸದೇ ವಿದ್ಯೆ ನೀಡಿದ ಗುರುಗಳು ಹಾಗೂ ಗುರುಪತ್ನಿ, ಉಪಕಾರ ಮಾಡಿದ ಸ್ನೇಹಿತರು, ತಂದೆಯ ಕಡೆಯ ಋಣಾನುಬಂಧಿಗಳು, ತಾಯಿಯ ಕಡೆಯ ಋಣಾನುಬಂಧಿಗಳು ಹೀಗೆ ಈ ಎಲ್ಲರಿಗಾಗಿಯೂ ಪಿಂಡದಾನವನ್ನು ಮಾಡಬೇಕೆಂದು ತಿಳಿಸಿದ್ದಾರೆ. ಪಕ್ಷಕಾರ್ಯ ಮುಗಿದ ಮೇಲೆ ಪಿಂಡಗಳ ವಿಸರ್ಜನೆಯನ್ನೂ ಸರಿಯಾಗಿ ಮಾಡಬೇಕು. ಕಂಡಲ್ಲಿ ಎಸೆಯುವುದು ಶ್ರಾದ್ಧಘಾತವೆಂದಿದ್ದಾರೆ. ಅವುಗಳನ್ನು ನೀರಿನಲ್ಲಿಯೋ, ಭೂಮಿಯಲ್ಲಿಯೋ ಅಗ್ನಿಯಲ್ಲಿಯೋ ವಿಸರ್ಜಿಸಬೇಕು. ತೀರ್ಥಕ್ಷೇತ್ರಗಳಿಗೆ ಹೋಗಿ ಕ್ಷೇತ್ರೋಪವಾಸ, ಮುಂಡನ ಇತ್ಯಾದಿ ನಿಯಮಗಳನ್ನು ಪಾಲಿಸಿ ಶ್ರಾದ್ಧಕರ್ಮಗಳನ್ನು ಮಾಡುವುದು ಸಹ ಉತ್ತಮವೆನಿಸಿದೆ.

ಹಿರಿಯರಿಗೆ ಪಿಂಡ ತಲುಪುವುದೇ?: ಎಲ್ಲರಿಗೂ ಒಂದು ಸಂದೇಹ. ಅದೇನೆಂದರೆ ಇಲ್ಲಿ ಕುಳಿತು ಮಾಡುವ ಈ ಪಿಂಡದಾನದಿಂದ ಎಲ್ಲಿಯೋ ಯಾವುದೋ ದೇಹದಿಂದ ಇರುವ ನಮ್ಮ ಹಿರಿಯರಿಗೆ ಅದೇಗೆ ಈ ಪಿಂಡಗಳು ದೊರೆಯುತ್ತವೆ? ಅದಕ್ಕೆ ಶಾಸ್ತ್ರಕಾರರು ತಿಳಿಸುತ್ತಾರೆ. ಮಗನೊಬ್ಬ ಬೇರೆ ಊರಿನಲ್ಲಿರುವ ತನ್ನ ತಂದೆ ತಾಯಿಗೆ ಅಂಚೆಕಚೇರಿಯ ಮುಖಾಂತರ ದುಡ್ಡನ್ನು ಕಳಿಸುತ್ತಾನೆ. ಆದರೆ ಅವನು ಅಲ್ಲಿ ಕೊಟ್ಟ ದುಡ್ಡೇ ಅವನ ತಂದೆಗೆ ತಲುಪುವುದಿಲ್ಲ. ಅದು ಅಲ್ಲಿ ಸಂದಾಯವಾಯಿತು. ತಂದೆಯ ಊರಿನಲ್ಲಿರುವ ಕಚೇರಿಯವರು ತಮ್ಮಲ್ಲಿರುವ ದುಡ್ಡನ್ನು ತಲುಪಿಸುತ್ತಾರೆ. ಒಟ್ಟಾರೆ ದುಡ್ಡು ತಲುಪಿತು. ಇದೇ ಪ್ರಕ್ರಿಯೆಯಂತೆ ಪಿತೃದೇವತೆಗಳೆನಿಸಿದವರು ಮಗನು ನಿಷ್ಠೆಯಿಂದ ಮಾಡಿದ ಪಿತೃಕಾರ್ಯದ ಪುಣ್ಯವನ್ನು ಅವನ ಹಿರಿಯರು ಮಾನವ, ಪ್ರಾಣಿ,ಪಕ್ಷಿ ಯಾವುದೇ ಯೋನಿಯಲ್ಲಿ ಯಾವ ದೇಹದಲ್ಲಿದ್ದರೂ ಅವರಿಗೆ ಆ ಪುಣ್ಯದ ಫಲವಾಗಿ ಆಹಾರವನ್ನು ಹಾಗೂ ಪುಣ್ಯವನ್ನು ತಲುಪಿಸುತ್ತಾರೆ ಎಂಬುದು ನಂಬಿಕೆ.

ದೇವತಾಕಾರ್ಯಗಳೆನಿಸಿದ ಹಬ್ಬಹರಿದಿನಗಳನ್ನು ಒಂದು ಪಕ್ಷದಲ್ಲಿ ಆಚರಿಸದಿದ್ದರೂ ದೇವತೆಗಳು ಕ್ಷಮಿಸುತ್ತಾರೆ. ಆದರೆ ಪಿತೃಕಾರ್ಯವನ್ನು ಬಿಟ್ಟರೆ ಕ್ಷಮೆ ಇಲ್ಲ ಎಂಬುದು ಹಿರಿಯರ ಮಾತು. ಮಾನವನಿಗೆ ತೀರಿಹೋದ ತನ್ನ ಜನ್ಮದಾತರ ಶಾಸ್ತ್ರೋಕ್ತವಾದ ಶ್ರಾದ್ಧಕರ್ಮಕ್ಕಿಂತಲೂ ಶ್ರೇಯಸ್ಕರವಾದ ಕಾರ್ಯ ಇನ್ನಾವುದಿಲ್ಲ. ಶ್ರದ್ಧೆ ವಿಶ್ವಾಸ ಆದರಗಳಿಂದ ಕೂಡಿದಾಗ ಮಾತ್ರ ಈ ಪಿತೃಕಾರ್ಯ ಪೂರ್ಣವೆನಿಸುವುದು.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net