

ಬೆಂಗಳೂರು: ಶಾಲಾ ಮಕ್ಕಳ ಕಲಿಕಾ ಫಲಿತಾಂಶಗಳನ್ನು ಸುಧಾರಿಸುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮುಂಬರುವ ಶೈಕ್ಷಣಿಕ ವರ್ಷದಿಂದ ’ಪಾಠ ಆಧಾರಿತ ಮೌಲ್ಯಮಾಪನ’ (ಎನ್‌ಬಿಎ)ವನ್ನು ಪರಿಚಯಿಸಲು ನಿರ್ಧರಿಸಿದೆ.
ರಾಜ್ಯದಲ್ಲಿ ಕಳೆದ ವರ್ಷದಿಂದ ಎಸ್‌ಎಸ್‌ಎಲ್‌ಸಿ ಮತ್ತು ಈ ವರ್ಷದಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಿಗೆ ವೆಬ್‌ಕಾಸ್ಟಿಂಗ್ ವ್ಯವಸ್ಥೆಯನ್ನು ಜಾರಿ ಮಾಡಿದೆ. ಪರೀಕ್ಷಾ ಸುಧಾರಣೆಗಳ ಕ್ರಮದ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ತೀವ್ರವಾಗಿ ಕುಸಿದಿತ್ತು. ಶಾಲಾ ಮಕ್ಕಳ ಕಲಿಕೆಯ ಕುರಿತು ನಡೆಸಲಾದ ಹಲವು ಸಮೀಕ್ಷೆಗಳು ಕೂಡ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿರುವುದನ್ನು ಎತ್ತಿ ತೋರಿಸಿವೆ.
ಈ ಎಲ್ಲ ಕಾರಣಗಳಿಂದ ಪ್ರಾಥಮಿಕ ಹಂತದಿಂದಲೇ ಗುಣಮಟ್ಟದ ಶಿಕ್ಷಣ ಮತ್ತು ಕಲಿಕಾ ಫಲಿತಾಂಶಗಳನ್ನು ಸುಧಾರಿಸಲು ನಿರ್ಧರಿಸಿರುವ ಶಾಲಾ ಶಿಕ್ಷಣ ಇಲಾಖೆ, 2025-26ರ ಶೈಕ್ಷಣಿಕ ವರ್ಷದಿಂದ 1 ರಿಂದ 10 ನೇ ತರಗತಿಯವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ‘ಪಾಠ ಆಧಾರಿತ ಮೌಲ್ಯಮಾನ’ ನಡೆಸಲು ನಿರ್ಧರಿಸಿದೆ.
ಯಾವ ಕಾರಣದಿಂದ ಹೊಸ ನಿಯಮ ಜಾರಿ?
ಆಯಾ ವಿಷಯದ ಪಾಠಗಳನ್ನು ಪೂರ್ಣಗೊಳಿಸಿ ಡಿಜಿಟಲ್ ತಂತ್ರಜ್ಞಾನದ ಮೂಲಕ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲಾಗುತ್ತದೆ. ಇದಕ್ಕಾಗಿ ಕೇಂದ್ರ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಡಿಜಿಟಲ್ ಶಿಕ್ಷಣ ಅಭಿವೃದ್ಧಿಪಡಿಸಿರುವ ’ವಿದ್ಯಾ ಸಮೀಕ್ಷಾ ಕೇಂದ್ರ’ ಮೊಬೈಲ್ ತಂತ್ರಾಂಶವನ್ನು ಬಳಸಲು ನಿರ್ಧರಿಸಲಾಗಿದೆ.
ಪ್ರಸ್ತುತ ಶಾಲಾ ಹಂತದಲ್ಲಿಯೇ ಶಾಲಾ ಮಕ್ಕಳಿಗೆ ವಾರ್ಷಿಕವಾಗಿ ನಾಲ್ಕು ರಚನಾತ್ಮಕ ಮೌಲ್ಯಮಾಪನ (ಕಿರು ಪರೀಕ್ಷೆ) ಮತ್ತು ಎರಡು ಸಂಕಲನಾತ್ಮಕ ಮೌಲ್ಯಮಾಪನ (ಅರ್ಧವಾರ್ಷಿಕ, ವಾರ್ಷಿಕ) ನಡೆಸಲಾಗುತ್ತಿದೆ. ಆದರೂ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ಮಕ್ಕಳ ಕಲಿಕಾ ನ್ಯೂನತೆಗಳನ್ನು ಗುರುತಿಸುವಲ್ಲಿ ವಿಫಲವಾಗಿವೆ. ಈ ರೀತಿಯ ಕಲಿಕಾ ನ್ಯೂನತೆಯು 10ನೇ ತರಗತಿಯ ಫಲಿತಾಂಶಗಳ ಮೇಲೆಯೂ ಪರಿಣಾಮ ಬೀರಿದೆ.
ಹೇಗಿರಲಿದೆ ಹೊಸ ನಿಯಮ?
ನಿರ್ದಿಷ್ಟ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳ ಪಾಠಗಳನ್ನು ಬೋಧಿಸುವುದು ಮತ್ತು ಪ್ರತಿ ಅಧ್ಯಾಯ ಬೋಧನೆ ಮುಗಿದ ಬಳಿಕ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಸಣ್ಣ ಪ್ರಶ್ನೆಗಳು, ಬಿಟ್ಟ ಸ್ಥಳ ತುಂಬಿ, ಒಂದು ಅಂಕದ ಮತ್ತು ಎರಡು ಅಂಕಗಳ ಪ್ರಶ್ನೆಗಳು ಹಾಗೂ ಬಹು ಆಯ್ಕೆಯ ಪ್ರಶ್ನೆಗಳ (ಎಂಸಿಕ್ಯು) ಆಧಾರದಲ್ಲಿ ಪರೀಕ್ಷೆ ನಡೆಸಲಾಗುತ್ತದೆ.
ವಿದ್ಯಾರ್ಥಿಗಳಿಗೆ ಉಚಿತವಾಗಿ ಉತ್ತರ ಪತ್ರಿಕೆಗಳನ್ನು ನೀಡಲಾಗುತ್ತದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕಾಗಿ ಶಿಕ್ಷಕರ ಮೇಲಿನ ಹೊರೆಯನ್ನು ತಗ್ಗಿಸಲು ಮೊಬೈಲ್ ತಂತ್ರಾಂಶವನ್ನು ಸಿದ್ಧಪಡಿಸಲಾಗಿದೆ.
ಪರೀಕ್ಷೆ ಪೂರ್ಣಗೊಂಡ ನಂತರ ತ್ವರಿತ ಮೌಲ್ಯಮಾಪನಕ್ಕಾಗಿ ಕೇಂದ್ರ ಸರ್ಕಾರವು ಅಭಿವೃದ್ಧಿಪಡಿಸಿದ ಮೊಬೈಲ್ ತಂತ್ರಾಂಶದ ಮೂಲಕ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿದರೆ, ತಕ್ಷಣವೇ ಮೌಲ್ಯಮಾಪನ ಮಾಡಿ ಅಂಕಗಳನ್ನು ಪ್ರದರ್ಶಿಸುತ್ತದೆ.
ಸಂಬಂಧಪಟ್ಟ ಪಾಠದಲ್ಲಿ ವಿಷಯವನ್ನು ಎಷ್ಟು ಚೆನ್ನಾಗಿ ಗ್ರಹಿಸಿದ್ದಾರೆ ಮತ್ತು ಪಾಠದ ಉದ್ದೇಶಗಳನ್ನು ಸಾಧಿಸಲಾಗಿದೆಯೇ ಎಂದು ನಿರ್ಧರಿಸಲು ಇದು ಶಿಕ್ಷಕರಿಗೆ ಸಹಾಯ ಮಾಡುತ್ತದೆ.
ಹೊಸ ನಿಯಮದಿಂದ ಆಯಾ ಅಧ್ಯಾಯಗಳಲ್ಲಿ ವಿದ್ಯಾರ್ಥಿಗಳು ಕಷ್ಟಪಡುತ್ತಿರುವ ಅಂಶಗಳನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ. ಮಕ್ಕಳು ಪಾಠಗಳನ್ನು ಅರ್ಥಮಾಡಿಕೊಳ್ಳದಿದ್ದರೆ, ಅರ್ಥಮಾಡಿಸಲಾಗುತ್ತದೆ. ತಪ್ಪುಗ್ರಹಿಕೆಯನ್ನು ಪರಿಹರಿಸಲು ಮತ್ತು ವಿಷಯಗಳನ್ನು ಗಮನಿಸಲು ಸಹಾಯ ಮಾಡುತ್ತದೆ. ಈ ಪರೀಕ್ಷೆಯು ತುಂಬಾ ಸುಲಭವಾಗಿದ್ದು ಮಕ್ಕಳ ಕಲಿಕೆಯನ್ನು ಸುಧಾರಿಸುತ್ತದೆ.
ಹೆಚ್ಚಿನ ಅನುದಾನಕ್ಕಾಗಿ ಮನವಿ:
ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಯ ದೃಷ್ಟಿಕೋನದಿಂದ ಎಲ್‌ಬಿಎ ಒಂದು ಪ್ರಮುಖ ಯೋಜನೆಯಾಗಿದೆ. ಪ್ರತಿ ವಿಷಯಕ್ಕೂ ಪರೀಕ್ಷೆಗಳನ್ನು ನಡೆಸಲು ಮತ್ತು ಮಕ್ಕಳಿಗೆ ಉಚಿತ ಉತ್ತರ ಪತ್ರಿಕೆಗಳನ್ನು ಒದಗಿಸಲು ಅನುದಾನದ ಅಗತ್ಯವಿದೆ. ಹೀಗಾಗಿ, ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ರಾಜ್ಯ ಸರ್ಕಾರಗಳ ಮೂಲಕ ಹೆಚ್ಚುವರಿ ನಿಧಿಯನ್ನು ಒದಗಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.