

ಶಿವಮೊಗ್ಗ: ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಕೊನೆಗೂ ಪ್ರೀ ಪೇಯ್ಡ ಆಟೋ ವ್ಯವಸ್ಥೆ ಜಾರಿಗೆ ಬಂದಿದೆ. ಈ ಮೂಲಕ ಸಾರ್ವಜನಿಕ ಆಟೋ ಪ್ರಯಾಣಿಕರಿಗೆ ಆಗುತ್ತಿದ್ದ ಕಿರಿಕಿರಿಯಿಂದ ಮುಕ್ತಿಗೊಳಿಸಿ, ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಹತ್ವದ ನಿರ್ಣಯ ಕೈಗೊಂಡಿದೆ.
ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿಯ ಜಂಟಿ ಕಾರ್ಯಾಚರಣೆಯಿಂದ ಪ್ರಯಾಣಿಕರ ಬಳಿ ಯದ್ವ ತದ್ವ ಹಣ ಪಡೆಯುತ್ತಿದ್ದ ಕೆಲ ಆಟೋ ಚಾಲಕರಿಗೆ ಮೂಗುದಾರ ಬಿದ್ದಿದೆ.
ಶಿವಮೊಗ್ಗದಲ್ಲಿ ಪ್ರೀ ಪೇಯ್ಡ ಆಟೋ ವ್ಯವಸ್ಥೆಗೆ ಬಹು ವರ್ಷದ ಬೇಡಿಕೆಯಾಗಿತ್ತು. ಇದೀಗ ಈ ವ್ಯವಸ್ಥೆ ಜಾರಿಗೆ ಬಂದಿದ್ದು, ಎರಡು ಕಡೆ ಪ್ರೀಪೇಯ್ಡ ಸೇವೆಗೆ ನಿರ್ಧರಿಸಿದ್ದರೂ ಪ್ರಾಯೋಗಿಕವಾಗಿ ರೈಲ್ವೆ ನಿಲ್ದಾಣದಲ್ಲಿ ಅನುಷ್ಠಾನಗೊಂಡಿದೆ.
ರೈಲ್ವೆ ನಿಲ್ದಾಣದಿಂದ ವಿವಿಧ ಬಡಾವಣೆಗಳಿಗೆ ತೆರಳಲು ಆಟೋ ಚಾಲಕರು ನಿಗದಿಗಿಂತಲು ಹೆಚ್ಚು ಹಣ ಪಡೆಯುತ್ತಿದ್ದರು. ಲಗೇಜು, ಕುಟುಂಬ ಸಹಿತ ಬಂದವರು, ತುರ್ತು ತೆರಳಬೇಕಿರುವವರು ಅನಿವಾರ್ಯವಾಗಿ ದುಬಾರಿ ಹಣ ಕೊಟ್ಟು ಆಟೋ ಹತ್ತುವಂತಾಗಿತ್ತು. ಹಾಗಾಗಿಯೆ ಪ್ರೀ ಪೇಯ್ಡ ಆಟೋ ವ್ಯವಸ್ಥೆ ಮಾಡುವಂತೆ ಬಹು ವರ್ಷದಿಂದ ಸಾರ್ಜನಿಕರು ಬೇಡಿಕೆ ಇಡುತ್ತಿದ್ದರು. ಇದೀಗ ರೈಲ್ವೆ ನಿಲ್ದಾಣದ ಆವರಣದಲ್ಲಿ ಎರಡು ಬದಿಯಲ್ಲಿ ಪ್ರೀ ಪೇಯ್ಡ ಆಟೋ ಕೌಂಟರ್ ಆರಂಭಿಸಲಾಗಿದೆ. ಪ್ರಯಾಣಿಕರು ರೈಲು ಇಳಿದು ಈ ಕೌಂಟರ್‌ಗಳಿಗೆ ತೆರಳಿ ರಶೀದಿ ಪಡೆಯಬಹುದು. ಸದ್ಯ ರಶೀದಿ ನೀಡಲು ಹೋಂ ಗಾರ್ಡ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಜಿಲ್ಲಾಡಳಿತದ ಗಮನ ಸೆಳೆದಿದ್ದ ‘ವಿಜಯವಾಣಿ’
ನಗರದಲ್ಲಿ ಪ್ರಿಪೇಯ್ಡಿ ಆಟೋ ಸೇವೆಯನ್ನು ಆರಂಭಿಸುವ ಬಗ್ಗೆ ‘ವಿಜಯವಾಣಿ’ ದಿನಪತ್ರಿಕೆ 2024ರ ನ.9ರಂದು ‘ಪ್ರಿಪೇಯ್ಡಿ ಆಟೋ ಸೇವೆಗೆ ನಿರಾಸಕ್ತಿ’ ಶಿರ್ಷೀಕೆಯಡಿ ವಿಶೇಷ ವರದಿ ಪ್ರಕಟಿಸಿ ಜಿಲ್ಲಾಡಳಿತ, ಆರ್‌ಟಿಒ ಮತ್ತು ಪೊಲೀಸ್ ಇಲಾಖೆಯ ಗಮನ ಸೆಳೆದಿತ್ತು. ಪದೇ ಪದೆ ಅರ್ಜಿ ಆಹ್ವಾನಿಸಿದರೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುತ್ತಿರಲಿಲ್ಲ. ಹಾಗಾಗಿ ಪೊಲೀಸ್ ಇಲಾಖೆ ಹಾಗೂ ಆರ್‌ಟಿಒ ಅಧಿಕಾರಿಗಳು ಸತತವಾಗಿ ಪ್ರಯತ್ನಿಸಿದರೂ ಪ್ರಿಪೇಯ್ಡಿ ಸೇವೆ ಆರಂಭ ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಸಭೆ ನಡೆಸಿದ್ದ ಜಿಲ್ಲಾಡಳಿತ ಅಧಿಕಾರಿಗಳ ಸಭೆ ನಡೆಸಿ ರೈಲ್ವೆ ನಿಲ್ದಾಣದಿಂದ ಕಾರ್ಯಾಚರಣೆಗೆ ಸೂಚಿಸಿದೆ.