ಆ.27ರ ಗೃಹಲಕ್ಷ್ಮೀ ಯೋಜನೆ ಜಾರಿ: ಸಿದ್ಧತೆಗೆ ಡಿಸಿ ಸೂಚನೆ

dc dr.selvamni meeting
ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಗೃಹಲಕ್ಷ್ಮೀ ಯೋಜನೆ ಪೂರ್ವಭಾವಿ ಸಭೆ ನಡೆಸಿದರು. ಸ್ನೇಹಲ್ ಲೋಖಂಡೆ, ಡಾ. ಎನ್.ಜೆ.ನಾಗರಾಜ್, ಎನ್.ಚಂದ್ರಪ್ಪ ಇದ್ದರು.
Published on

ಶಿವಮೊಗ್ಗ: ಮಹಿಳೆಯರ ಆರ್ಥಿಕ ಸಬಲೀಕರಣ ಧ್ಯೇಯದೊಂದಿಗೆ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅವರು ಆ.27ರಂದು ಬೆಳಗಾವಿಯಲ್ಲಿ ಚಾಲನೆ ನೀಡುತ್ತಿದ್ದು, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಕಾರ್ಯಕ್ರಮವನ್ನು ಏಕಕಾಲದಲ್ಲಿ ಆಯೋಜಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ತಹಸೀಲ್ದಾರ್‌ಗಳು, ಇಒಗಳು, ಸ್ಥಳೀಯ ಸಂಸ್ಥೆ ಮುಖ್ಯಸ್ಥರು, ಸಿಡಿಪಿಒಗಳೊಂದಿಗೆ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮ ಕುರಿತು ಬುಧವಾರ ಪೂರ್ವಭಾವಿ ಸಭೆ ನಡೆಸಿದ ಅವರು, ಪ್ರತಿ ಗ್ರಾಪಂ ಕೇಂದ್ರ ಸ್ಥಾನ ಹಾಗೂ ನಗರ ಸ್ಥಳೀಯ ಸಂಸ್ಥೆ ವಾರ್ಡ್‌ಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
ಗ್ರಾಪಂ ಹಾಗೂ ಸ್ಥಳೀಯ ಸಂಸ್ಥೆಗಳ ವಾರ್ಡ್‌ಗಳಲ್ಲಿ ಬೆಳಗಾವಿ ಕಾರ್ಯಕ್ರಮದ ನೇರ ಪ್ರಸಾರಕ್ಕೆ ಅಗತ್ಯವಾದ ಎಲ್ಇಡಿ ಪರದೆ ಅಥವಾ ಟಿವಿ ವ್ಯವಸ್ಥೆ ಮಾಡಿಕೊಳ್ಳಬೇಕು. ಫಲಾನುಭವಿಗಳು ಮತ್ತು ಸಾರ್ವಜನಿಕರನ್ನು ಕಾರ್ಯಕ್ರಮಕ್ಕೆ ಸೇರಿಸಿ ಸರ್ಕಾರಿ ಕಟ್ಟಡಗಳು ಅಥವಾ ಸಭಾಭವನದಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಈ ಸಮಾರಂಭಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳು ಸೇರಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಅತಿಥಿಗಳಾಗಿ ಭಾಗವಹಿಸಲು ಕ್ರಮ ಕೈಗೊಳ್ಳಬೇಕು. ಪ್ರತಿ ಗ್ರಾಪಂಗಳಲ್ಲಿ, ಪಾಲಿಕೆ ಹಾಗೂ ನಗರಸಭೆಗಳಲ್ಲಿ ಪ್ರತಿ ವಾರ್ಡ್‌ಗಳು ಹಾಗೂ ಪುರಸಭೆಗಳಲ್ಲಿ ಫಲಾನುಭವಿಗಳ ಸಂಖ್ಯೆಗನುಗುಣವಾಗಿ 3ರಿಂದ 4 ವಾರ್ಡ್‌ಗಳಲ್ಲಿ ಕಾರ್ಯಕ್ರಮ ಆಯೋಜನೆಗೆ ಕ್ರಮ ವಹಿಸಬೇಕು ಎಂದು ಹೇಳಿದರು.
ತಾಲೂಕು ಪಂಚಾಯಿತಿ ಹಾಗೂ ಗ್ರಾಪಂಗಳಲ್ಲಿ ಕಾರ್ಯಕ್ರಮದ ಮೇಲ್ವಿಚಾರಣೆಗೆ ಈಗಲೇ ನೋಡಲ್ ಅಧಿಕಾರಿಗಳನ್ನು ನಿಯೋಜಿಸಬೇಕು. ನೋಡಲ್ ಅಧಿಕಾರಿಗಳು ಕಾರ್ಯಕ್ರಮದ ಸಿದ್ಧತೆಗಳನ್ನು ಗಮನಿಸಿ ವರದಿ ಸಲ್ಲಿಸಬೇಕೆಂದರು.
ಜಿಪಂ ಸಿಇಓ ಸ್ನೇಹಲ್ ಲೋಖಂಡೆ ಮಾತನಾಡಿ, ಜಿಪಂ ಯೋಜನಾ ನಿರ್ದೇಶಕರು ಗ್ರಾಪಂವಾರು ಉಸ್ತುವಾರಿ ನೋಡಿಕೊಳ್ಳಬೇಕು. ಹೊಸನಗರ, ತೀರ್ಥಹಳ್ಳಿ, ಸಾಗರ ಭಾಗದಲ್ಲಿ ನೆಟವರ್ಕ್ ಸಮಸ್ಯೆಗಳಿದ್ದರೆ ಈಗಲೇ ಸರಿಪಡಿಸಿಕೊಂಡು ಈಗಿನಿಂದಲೇ ಸಿದ್ಧತೆ ಆರಂಭಿಸಬೇಕು. ಎಲ್ಲ ತಾಲೂಕುಗಳ ಸಿಡಿಪಿಒಗಳು ಕಾರ್ಯಕ್ರಮದ ತಯಾರಿ ಕುರಿತು ಮೇಲ್ವಿಚಾರಣೆ ನಡೆಸಿ ಈ ಬಗ್ಗೆ ವರದಿ ಸಲ್ಲಿಸಬೇಕು. ಪ್ರತಿ ಗ್ರಾಪಂನಲ್ಲಿ ಫಲಾನುಭವಿಗಳು, ಸ್ವಸಹಾಯ ಸಂಘಗಳ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಕಾರ್ಯಕ್ರಮಕ್ಕೆ ಹಾಜರಾಗುವಂತೆ ಕ್ರಮ ವಹಿಸಬೇಕೆಂದು ಸೂಚಿಸಿದರು.
ಶಿವಮೊಗ್ಗ ತಹಸೀಲ್ದಾರ್ ಡಾ. ಎನ್.ಜೆ.ನಾಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಂತೋಷಕುಮಾರ್, ಸಿಡಿಪಿಒ ಎನ್.ಚಂದ್ರಪ್ಪ, ತಾಲೂಕುಗಳ ತಹಸೀಲ್ದಾರರು, ಇಒ, ಸಿಡಿಪಿಒ, ಸ್ಥಳೀಯ ಸಂಸ್ಥೆ ಮುಖ್ಯಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net