

ಕಡೂರು: ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ರಾಜ್ಯಸರ್ಕಾರ ಮುಂದಾಗಿದ್ದು, ಈ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಮುಂದಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ವಾಸವಿ ಕಲ್ಯಾಣ ಮಂಟಪದಲ್ಲಿ ಶಿಶು ಅಭಿವೃದ್ಧಿ ಇಲಾಖೆ ಮತ್ತು ಪುರಸಭೆಯಿಂದ ಬುಧವಾರ ಏರ್ಪಡಿಸಿದ್ದ ಗೃಹಲಕ್ಷ್ಮೀ ಯೋಜನೆ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈಗಾಗಲೇ ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಗ್ಯಾರಂಟಿ ಯೋಜನೆ ಬಗ್ಗೆ ವಿರೋಧಿಗಳು ಅನೇಕ ಟೀಕೆ ಮಾಡಿದರೂ ರಾಜ್ಯಸರ್ಕಾರ ಅಡೆತಡೆಗಳಲ್ಲಿದೆ ನುಡಿದಂತೆ ನಡೆದಿದೆ ಎಂದರು.
ಕಡೂರು ಕ್ಷೇತ್ರದಲ್ಲಿ ನೋಂದಾಯಿತ ಮಹಿಳಾ ಫಲಾನುಭವಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮಹಿಳೆಯರ ಗಟ್ಟಿ ತೀರ್ಮಾನದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಕ್ಷೇತ್ರದಲ್ಲಿನ ಯೋಜನೆಯಡಿ 63,852 ನೊಂದಾಯಿತ ಮಹಿಳಾ ಫಲಾನುಭವಿಗಳಿಗೆ ಮಾಸಿಕ 2 ಸಾವಿರರಂತೆ 12.77ಕೋಟಿನಂತೆ ನೇರ ಖಾತೆಗೆ ಜಮೆಯಾಗಲಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಯೋಜನೆ ಸವಲತ್ತುಗಳನ್ನು ಪ್ರತಿಯೊಬ್ಬ ಮಹಿಳಾ ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಿಂದ ಬಡವರು ಹಾಗೂ ಶ್ರಮಿಕ ಜೀವಿಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ ಎಂದರು.
ಪುರಸಭೆ ಸದಸ್ಯ ತೋಟದಮನೆ ಮೋಹನ್ ಕುಮಾರ್ ಮಾತನಾಡಿ, ಗೃಹಲಕ್ಷ್ಮೀ ಯೋಜನೆ ಮಹಿಳಾ ಆರ್ಥಿಕ ಸಬಲೀಕರಣದತ್ತ ದಿಟ್ಟ ಹೆಜ್ಜೆಯಾಗಿದೆ. ಕುಟುಂಬ ನಿರ್ವಹಣೆಯಲ್ಲಿ ಯಜಮಾನಿ ಪಾತ್ರ ಪ್ರಮುಖವಾಗಿದ್ದು, ಅವರು ಆರ್ಥಿಕ ಸಬಲವಾದಲ್ಲಿ ಕುಟುಂಬ ನಿರ್ವಹಣೆ ಉತ್ತಮವಾಗಿರುತ್ತದೆ ಎಂದರು.
ಪುರಸಭೆ ಸದಸ್ಯರಾದ ಈರುಳ್ಳಿ ರಮೇಶ್, ಶ್ರೀಕಾಂತ್, ಸೈಯಾದ್‌ಯಾಸೀನ್, ತಾಪಂ ಇಒ ಸಿ.ಆರ್.ಪ್ರವೀಣ್, ಸಿಡಿಪಿಒ ಶಿವಪ್ರಕಾಶ್, ಮುಖ್ಯಾಧಿಕಾರಿ ಕೆ.ರುದ್ರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಆಸಂದಿ ಕಲ್ಲೇಶ್, ಮುಖಂಡರಾದ ಕಾಂತರಾಜ್, ತಿಪ್ಪೇಶ್, ಎನ್.ಎಚ್.ನಂಜುಂಡಸ್ವಾಮಿ, ಕೆ.ಜಿ.ಶ್ರೀನಿವಾಸ್‌ಮೂರ್ತಿ ಇದ್ದರು.