ಸಂಪಾದಕೀಯ: ಅವಕಾಶದ ಸದ್ಬಳಕೆ, ಕೃಷಿ ಉತ್ತೇಜನದಿಂದ ಬಹುಮುಖಿ ಪ್ರಯೋಜನ

edit 4
Published on

ಕರೊನಾ ನಿಯಂತ್ರಣಕ್ಕೆ ತರಲು ವಿಧಿಸಲಾಗಿರುವ ದಿಗ್ಬಂಧನ ಮುಂದುವರಿದಿ ರುವಂತೆಯೇ, ಕೃಷಿ, ಕೈಗಾರಿಕೆ, ವ್ಯಾಪಾರವ್ಯವಹಾರ ಮುಂತಾದ ಹಲವು ಚಟುವಟಿಕೆಗಳಿಗೆ ನಿರ್ಬಂಧಿತ ಅವಕಾಶ ನೀಡಲಾಗಿದೆ. ಇದರಿಂದಾಗಿ ಜನಜೀವನ ಕ್ರಮೇಣ ಮಾಮೂಲು ಸ್ಥಿತಿಗೆ ಬರುತ್ತಿದೆ. ಈ ನಡುವೆ, ಕರೊನಾ ಸೋಂಕು ಪ್ರಕರಣ ಹೆಚ್ಚುತ್ತಿರುವುದು ಹೌದಾದರೂ, ದಿಗ್ಬಂಧನವನ್ನು ಇನ್ನೂ ಬಹುಕಾಲ ಮುಂದುವರಿಸಲಾಗದು ಎಂಬುದೂ ಅಷ್ಟೇ ವಾಸ್ತವ. ಈ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಬೇರೆ ಬೇರೆ ವಲಯಗಳು ಕಾರ್ಯಾಚರಿಸಬೇಕಾದುದು ಅಗತ್ಯ. ಈ ನಡುವೆ, ಕೃಷಿ ಸ್ಥಿತಿಗತಿ ಕುರಿತೂ ಚರ್ಚೆಗಳು ನಡೆಯುತ್ತಿವೆ. ಬೆಂಗಳೂರು ಸೇರಿ ನಾನಾ ಕಡೆ ವಲಸೆ ಹೋಗಿದ್ದ ಕಾರ್ವಿುಕರು ಈಗ ಊರುಗಳಿಗೆ ವಾಪಸ್ ಆಗಿದ್ದು, ಇವರಲ್ಲಿ ಕೆಲ ಪ್ರತಿಶತ ಜನರು ಮತ್ತೆ ನಗರಗಳತ್ತ ಹೋಗದೆ ಊರಲ್ಲಿಯೇ ಉಳಿದು ಕೃಷಿ ಮತ್ತಿತರ ಕೆಲಸಕಾರ್ಯಗಳಲ್ಲಿ ತೊಡಗುವ ಲಕ್ಷಣ ಸದ್ಯ ಕಂಡುಬಂದಿದೆ. ಈ ಅಂದಾಜಿನಲ್ಲಿಯೇ, ಈ ಮುಂಗಾರಿನಲ್ಲಿ ಕೃಷಿ ಕ್ಷೇತ್ರದಲ್ಲಿ ಬಿತ್ತನೆ ಹೆಚ್ಚಾಗುವ ನಿರೀಕ್ಷೆಯನ್ನು ಕೃಷಿ ಇಲಾಖೆ ಮಾಡಿದೆ. ಹೀಗಾಗಿಯೇ, ಕೃಷಿ ರಂಗಕ್ಕೆ ಈ ಸಲ ನೀಡುವ ಸಾಲದ ಪ್ರಮಾಣದಲ್ಲಿ ಹೆಚ್ಚಳ ಮಾಡಿದ್ದು, 422 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸಲು ನಿರ್ಧರಿಸಿದೆ. +

ಕೃಷಿಕರಿಗೆ ಶೇ.10ರಷ್ಟು ಹೆಚ್ಚು ಪ್ರಮಾಣದ ಸಾಲ ನೀಡಲು ಸರ್ಕಾರ ಮುಂದಾಗಿದೆ. ಇದರಿಂದಾಗಿ, ಪ್ರತಿ ರೈತರಿಗೆ ಬೆಳೆಸಾಲದಲ್ಲಿ 10-50 ಸಾವಿರ ರೂ.ವರೆಗೆ ಹೆಚ್ಚುವರಿಯಾಗಿ ಸಿಗಬಹುದು. ಹಾಗೇ, ಚಿನ್ನದ ಮೇಲಿನ ಅಡಮಾನ ಸಾಲವನ್ನು ಶೇ.85ರ ಮಿತಿಯಲ್ಲಿ ಶೇ. 10ರಷ್ಟು ಹೆಚ್ಚು ನೀಡಲೂ ನಿರ್ಣಯಿಸಲಾಗಿದೆ. ಇವೆಲ್ಲದರಿಂದ ರೈತನಿಗೆ ಸ್ವಲ್ಪ ಅನುಕೂಲವಾಗಬಹುದು. ಕಳೆದ ವರ್ಷ ಮುಂಗಾರಿನಲ್ಲಿ ರಾಜ್ಯದಲ್ಲಿ 63 ಲಕ್ಷ ಹೆಕ್ಟೆರ್​ನಲ್ಲಿ ಬಿತ್ತನೆಯಾಗಿತ್ತು. ಈ ವರ್ಷ 73 ಲಕ್ಷ ಹೆಕ್ಟೆರ್​ನಲ್ಲಿ ಬಿತ್ತನೆಯಾಗಬಹುದೆಂದು ನಿರೀಕ್ಷಿಸಲಾಗಿದೆ. ಅದೇ ರೀತಿ, ರಾಜ್ಯದಲ್ಲಿ 20 ಲಕ್ಷ ಹೆಕ್ಟೆರ್​ನಷ್ಟು ಭೂಮಿ ಪಾಳುಬಿದ್ದದ್ದು, ಇನ್ನು ಅಲ್ಲಿಯೂ ಕೆಲ ಪ್ರಮಾಣದಲ್ಲಿ ಕೃಷಿ ನಡೆಯುವ ಆಶಾಭಾವ ವ್ಯಕ್ತವಾಗಿದೆ.

ಕೃಷಿ ಮೇಲೆ ಜನರ ಒಲವು ಕಡಿಮೆಯಾಗುತ್ತಿದೆ ಎಂಬ ವಾತಾವರಣದಲ್ಲಿ ಇದು ನಿಜಕ್ಕೂ ಸಕಾರಾತ್ಮಕ ಬೆಳವಣಿಗೆ. ಆದರೆ ಇದು, ಕರೊನಾ ತಂದ ಪರಿಸ್ಥಿತಿಯಿಂದಾದ ತಾತ್ಕಾಲಿಕ ಬೆಳವಣಿಗೆಯಾಗದೆ ಕಾಯಂ ಆಗಿ ಕೃಷಿ ಮೇಲಿನ ಈ ಪ್ರೀತಿ ಮುಂದುವರಿದರೆ ಮಾತ್ರ ನೈಜ ಪ್ರಯೋಜನ ದಕ್ಕುತ್ತದೆ. ಈ ನಿಟ್ಟಿನಲ್ಲಿ ಸರ್ಕಾರದ ಪಾತ್ರವೂ ಇದೆ. ಅಂದರೆ, ರೈತರು ಬೆಳೆದ ಬೆಳೆಗಳಿಗೆ ನ್ಯಾಯೋಚಿತ ಬೆಲೆ ಸಿಗುವುದನ್ನು ಖಾತ್ರಿಪಡಿಸುವಂತಾದರೆ ಕೃಷಿಪ್ರೀತಿ ಉಳಿಯುತ್ತದೆ.

ಈ ಸಲದ್ದೇ ಉದಾಹರಣೆ ನೀಡುವುದಾದರೆ, ಲಾಕ್​ಡೌನ್ ಕಾರಣದಿಂದಾಗಿ, ಅನೇಕ ರೈತರು ಬೆಳೆ ಮಾರಲಾಗದೆ ಕಂಗಾಲಾಗಿದ್ದರು. ರೈತ ಇಂಥ ನಿರಾಶಾದಾಯಕ ಸನ್ನಿವೇಶ ಎದುರಿಸು ವಂತಾಗಬಾರದು. ಕೃಷಿ ಆಧಾರಿತ ಉದ್ದಿಮೆ ಮತ್ತಿತರ ಅವಕಾಶ ಕಲ್ಪಿಸುವ ಮೂಲಕ ಆದಷ್ಟು ಜನರು ಹಳ್ಳಿಗಳಲ್ಲಿಯೇ ಉಳಿಯುಂತಾದರೆ ಕೃಷಿ ಭವಿಷ್ಯಕ್ಕೂ ಅನುಕೂಲ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಮತ್ತು ಸರ್ಕಾರ ಚಿಂತನೆ ನಡೆಸಲು ಇದು ಸಕಾಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net