

Yashwant Varma: ಅಕ್ರಮ ನಗದು ಹಣ ಪತ್ತೆ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ನ್ಯಾ.ಯಶವಂತ್ ವರ್ಮಾ ವಿರುದ್ಧದ ಮಹಾಭಿಯೋಗದ ಪ್ರಸ್ತಾವನೆ ಅಂಗೀಕರಿಸಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಮಾಜಿ ಉಪರಾಷ್ಟ್ರಪತಿ, ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅಂಗೀಕರಿಸಿದ್ದಾರೆ ಎನ್ನಲಾದ ವಿಪಕ್ಷಗಳು ಸಲ್ಲಿಸಿದ ನ್ಯಾಯಾಮೂರ್ತಿ ವಿರುದ್ಧದ ಮಹಾಭಿಯೋಗವನ್ನು ಪ್ರಸ್ತಾವನೆಯನ್ನು ತಿರಸ್ಕರಿಸಿ, ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಪ್ರಾಯೋಜಿತ ಹೊಸ ನಿಲುವಳಿ ಮಂಡಿಸಲಾಗುವುದು ಎಂದು ವರದಿಗಳು ಉಲ್ಲೇಖಿಸಿವೆ.
ಲೋಕಸಭೆಯಲ್ಲಿ ಪ್ರಸ್ತಾವನೆಯನ್ನ ಮಂಡಿಸಿದ ಬಳಿಕ, ಸ್ಪೀಕರ್ ಓಂ ಬಿರ್ಲಾ ನ್ಯಾಯಮೂರ್ತಿ ವರ್ಮಾ ವಿರುದ್ಧದ ಆರೋಪಗಳ ತನಿಖೆಗಾಗಿ ಸಮಿತಿಯನ್ನು ರಚಿಸಲಿದ್ದಾರೆ. ತನಿಖಾ ವರದಿಯಲ್ಲಿ ಆರೋಪಕ್ಕೆ ಸರಿಯಾದ ಕಾರಣ ಕಂಡು ಬಂದರೆ ಮಹಾಭಿಯೋಗಕ್ಕೆ ಶಿಫಾರಸು ಮಾಡಲಿದ್ದಾರೆ ಎನ್ನಲಾಗಿದೆ.
ವಿಪಕ್ಷಗಳು ನ್ಯಾಯಮೂರ್ತಿ ವರ್ಮಾ ವಿರುದ್ಧ ಮಹಾಭಿಯೋಗದ ಪ್ರಸ್ತಾವನೆ ಸಲ್ಲಿಸಿದ್ದು, ಉಪರಾಷ್ಟ್ರಪತಿಯಾಗಿದ್ದ ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅಂಗೀಕರಿಸಿದ್ದರು. ಹೀಗಾಗಿಯೇ ಕೇಂದ್ರ ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿ ಸೋಮವಾರ (ಜು.21) ರಾತ್ರಿ ದಿಢೀರ್ ರಾಜೀನಾಮೆ ನೀಡಿದ್ದಾರೆ ಎಂದು ವರದಿಗಳು ಉಲ್ಲೇಖಿಸಿದ್ದವು.
ನ್ಯಾಯಾಮೂರ್ತಿ ಯಶವಂತ್ ವರ್ಮಾ
ಅಲಹಾಬಾದ್ ಹೈಕೋರ್ಟ್ನ ನ್ಯಾಯಾಮೂರ್ತಿಗಳಾಗಿರುವ ಯಶವಂತ್ ವರ್ಮಾ ಈ ಹಿಂದೆ ದೆಹಲಿ ಹೈಕೋರ್ಟ್ ನ್ಯಾಯಾಮೂರ್ತಿಗಳಾಗಿದ್ದಾಗ ಅವರ ಮನೆಯಲ್ಲಿ ಅಪಾರ ಪ್ರಮಾಣದ ನಗದು ಸಿಕ್ಕ ಆರೋಪದಿಂದ ಸುಪ್ರೀಂಕೋರ್ಟ್ನಿಂದ ದೋಷಾರೋಪಣೆಗೊಳಗಾಗಿದ್ದಾರೆ.
ಸುಪ್ರೀಂಕೋರ್ಟ್ ರಚಿಸಿದ್ದ ನ್ಯಾಯಾಂಗ ತನಿಖೆಯಲ್ಲಿ ವರ್ಮಾ ವಿರುದ್ಧದ ಆರೋಪ ಸಾಬೀತಾಗಿ ದೋಷಾರೋಪಣೆ ಮಾಡಲಾಗಿತ್ತು. ಸದ್ಯ ದೋಷಾರೋಪಣೆ ನಿರಾಕರಿಸಿ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಿದ್ದು, ಈ ಕುರಿತು ವಿಚಾರಣೆ ನಡೆಯುತ್ತಿದೆ.
ಈ ಹಿನ್ನೆಲೆ ವರ್ಮಾರನ್ನ ನ್ಯಾಯಮೂರ್ತಿ ಸ್ಥಾನದಿಂದ ಪದಚ್ಯುತಗೊಳಿಸಬೇಕು ಎಂದು ಸಂಸತ್ ಸದಸ್ಯರು ಮಹಾಭಿಯೋಗದ ಪ್ರಸ್ತಾವನೆಯಲ್ಲಿ ಸಲ್ಲಿಸಿದ್ದರು. (ಏಜೆನ್ಸೀಸ್)